AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dharmasthala Case: ಧರ್ಮಸ್ಥಳ ಪ್ರಕರಣದಲ್ಲಿ ಕೇಂದ್ರದ ಎಂಟ್ರಿ! ಸ್ವಾಮೀಜಿಗಳ ನಿಯೋಗಕ್ಕೆ ಅಮಿತ್ ಶಾ ಮಹತ್ವದ ಭರವಸೆ

Dharmasthala Case Latest Update; ಧರ್ಮಸ್ಥಳ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಸ್ವಾಮೀಜಿಗಳ ನಿಯೋಗಕ್ಕೆ ಮಹತ್ವದ ಭರವಸೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಎನ್​​ಐಎಗೆ ವಹಿಸಬೇಕೆಂದು ಮನವಿ ಮಾಡಿದ ಸ್ವಾಮೀಜಿಗಳ ನಿಯೋಗದ ಜತೆ ಮಾತನಾಡಿದ ಶಾ, ನಾನೇ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಶಾ ಹೇಳಿದ್ದೇನೆಂಬುದನ್ನು ತಿಳಿಯಲು ಮುಂದೆ ಓದಿ.

Dharmasthala Case: ಧರ್ಮಸ್ಥಳ ಪ್ರಕರಣದಲ್ಲಿ ಕೇಂದ್ರದ ಎಂಟ್ರಿ! ಸ್ವಾಮೀಜಿಗಳ ನಿಯೋಗಕ್ಕೆ ಅಮಿತ್ ಶಾ ಮಹತ್ವದ ಭರವಸೆ
ಕರ್ನಾಟಕದಿಂದ ತೆರಳಿದ ಸ್ವಾಮೀಜಿಗಳ ನಿಯೋಗದ ಜತೆ ಗೃಹ ಸಚಿವ ಅಮಿತ್ ಶಾ
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma|

Updated on:Sep 04, 2025 | 12:32 PM

Share

ಬೆಂಗಳೂರು, ಸೆಪ್ಟೆಂಬರ್ 4: ‘ಧರ್ಮಸ್ಥಳ ಪ್ರಕರಣದ (Dharmasthala Cse) ಎಲ್ಲಾ ಬೆಳವಣಿಗೆಗಳನ್ನು ನಾನೇ ಖುದ್ದಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಗ್ಗೆ ಸಚಿವ ಸಂಪುಟ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕರ್ನಾಟಕದ ಸ್ವಾಮೀಜಿಗಳ ನಿಯೋಗಕ್ಕೆ ಮಹತ್ವದ ಭರವಸೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮಾಸ್ಕ್​​ಮ್ಯಾನ್ ಚಿನ್ನಯ್ಯ ಮಾಡಿರುವ ಆರೋಪ ಸಂಬಂಧಿತ ಎಲ್ಲ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಬೇಕೆಂಬ ಆಗ್ರಹ ಹೆಚ್ಚಾದ ಬೆನ್ನಲ್ಲೇ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಎನ್ಐಎ ತನಿಖೆಗೆ ವಹಿಸುವಂತೆ ಮನವಿ ಸಲ್ಲಿಸಿತು.

ಗೃಹ ಸಚಿವ ಅಮಿತ್ ಶಾ ರ ದೆಹಲಿ ಕಚೇರಿಯಲ್ಲಿ ಭೇಟಿಯಾದ ಸ್ವಾಮೀಜಿಗಳು, ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದರು. ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ಮಾಹಿತಿ ನೀಡಿದರು.

ಸ್ವಾಮೀಜಿಗಳ ಬಳಿ ಅಮಿತ್ ಶಾ ಹೇಳಿದ್ದೇನು?

ಧರ್ಮಸ್ಥಳ ಪ್ರಕರಣದ ಬಗ್ಗೆ ಸಚಿವ ಸಂಪುಟ ಸಭೆ ನಡೆಸಲಿದೆ. ಧರ್ಮ ಕ್ಷೇತ್ರಗಳ ವಿರುದ್ಧದ ಅಪಪ್ರಚಾರಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ತರುತ್ತೇವೆ. ನೀವು ಸಮಾಜವನ್ನ ಜಾಗೃತಿಗೊಳಿಸಿ ಎಂದು ಸ್ವಾಮೀಜಿಗಳ ಬಳಿ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಸ್ವಾಮೀಜಿಗಳಿಂದ ಸುಮಾರು ಒಂದು ಗಂಟೆಗಳ ಕಾಲ ಮಾಹಿತಿ ಪಡೆದ ನಂತರ ಅಮಿತ್ ಶಾ ಈ ಪ್ರತಿಕ್ರಿಯೆ ನೀಡಿದರು.

Vajradehli Mutt Swamiji And Amit Shah

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಜತೆ ಅಮಿತ್ ಶಾ

ಧರ್ಮಸ್ಥಳ ಪ್ರಕರಣದಲ್ಲಿ ಯೂಟ್ಯೂಬರ್​​ಗಳಿಗೆ ವಿದೇಶಗಳಿಂದ ಹಣಕಾಸು ನೆರವು ಹರಿದು ಬಂದಿದೆ ಎಂಬ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಾಥಮಿಕ ತನಿಖೆ ಆರಂಭಿಸಿದೆ. ಇದೀಗ ಎನ್​ಐಎ ತನಿಖೆ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಯೂಟ್ಯೂಬರ್ ಅಭಿಷೇಕ್​​ನ ತೀವ್ರ ವಿಚಾರಣೆ

ಬುರುಡೆ ರಹಸ್ಯ ಹಾಗೂ ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳು ಯೂಟ್ಯೂಬರ್ ಅಭಿಷೇಕ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬುಧವಾರ ತಡರಾತ್ರಿ ವರೆಗೂ ಅಭಿಷೇಕ್​ನ ವಿಚಾರಣೆ ನಡೆಸಲಾಗಿದೆ. ಪ್ರಕರಣದ ಕುರಿತು ಯೂಟ್ಯೂಬ್ ವಿಡಿಯೋಗಳಲ್ಲಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದ ಆರೋಪ ಆತನ ಮೇಲಿದೆ. ಪ್ರಕರಣದ ದಾಖಲಾಗುವ ಮೊದಲೇ ವಿಡಿಯೋಗಳನ್ನು ಮಾಡಿದ್ದ ಅಭಿಷೇಕ್, ಅದಕ್ಕೂ ಮುನ್ನ 6 ತಿಂಗಳ ಹಿಂದೆ ಗಿರೀಶ್ ಮಟ್ಟಣ್ಣವರ್ ಸಂಪರ್ಕಿಸಿದ್ದ.

ಏತನ್ಮಧ್ಯೆ, ಲೈಕ್ಸ್ ಹಾಗೂ ವ್ಯೂಗಾಗಿ ವಿಡಿಯೋ ಮಾಡಿದ್ದೆ ಎಂದು ಎಸ್​ಐಟಿ ವಿಚಾರಣೆ ವೇಳೆ ಯೂಟ್ಯೂಬರ್ ತಪ್ಪೊಪ್ಪಿ ಕೊಂಡಿದ್ದಾನೆ. ಅಲ್ಲದೆ, ಎಸ್​ಐಟಿ ಅಧಿಕಾರಿಗಳ ಮುಂದೆ ಕಣ್ಣಿರು ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಯೂಟ್ಯೂಬರ್​​​ಗಳಿಗೆ ಎಸ್​ಐಟಿ ನೋಟಿಸ್ ನೀಡಲಿದೆ.

ಧರ್ಮಸ್ಥಳದಲ್ಲಿ ಶುಕ್ರವಾರ ಧರ್ಮ ಜಾಗೃತಿ ಸಮಾವೇಶ

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಧರ್ಮ ಸಂರಕ್ಷಣಾ ಸಮಿತಿಯಿಂದ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು ದೇವಸ್ಥಾನ, ದೈವಸ್ಥಾನ, ಬಸದಿಗಳ ಪ್ರಮುಖರು ಭಾಗಿಯಾಗಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿ ಸಮಾವೇಶ ನಡೆಸಲಾಗುತ್ತಿದೆ. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.

ಇದನ್ನೂ ಓದಿ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಚಿನ್ನಯ್ಯನನ್ನು ಮತ್ತೆ 3 ದಿನ ಎಸ್​ಐಟಿ ಕಸ್ಟಡಿಗೆ ನೀಡಿದ ಕೋರ್ಟ್!

ಮತ್ತೊಂದೆಡೆ, ಮಾಸ್ಕ್​ಮ್ಯಾನ್ ಚಿನ್ನಯ್ಯನ ಎಸ್​ಐಟಿ ವಿಚಾರಣೆ ಮುಂದುವರಿದಿದೆ. 12 ದಿನದ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬುಧವಾರ ಆತನನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್‌ ಹಾಲ್‌ನ ಬಾಗಿಲು ಮುಚ್ಚಿ ಚಿನ್ನಯ್ಯನ ವಿಚಾರಣೆ ನಡೆಸಲಾಯಿತು. ಎಸ್ಐಟಿ ತನಿಖಾಧಿಕಾರಿ‌, ಸರ್ಕಾರಿ ಅಭಿಯೋಜಕ, ಚಿನ್ನಯ್ಯ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಇಬ್ಬರು ವಕೀಲರು ಉಪಸ್ಥಿತರಿದ್ದರು. ವಿಚಾರಣೆ ನಡೆಸಿದ ಕೋರ್ಟ್‌, ಮತ್ತೆ ಮೂರು ದಿನ ಚಿನ್ನಯ್ಯನನ್ನು ಎಸ್‌ಐಟಿ ವಶಕ್ಕೆ ನೀಡಿದೆ. ಸೆಪ್ಟೆಂಬರ್ 6 ರಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲು ಸೂಚಿಸಲಾಗಿದೆ. ಹೀಗಾಗಿ ಚಿನ್ನಯ್ಯನ ವಿಚಾರಣೆಯನ್ನು ಎಸ್​ಐಟಿ ತೀವ್ರಗೊಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 am, Thu, 4 September 25