ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಚಿನ್ನಯ್ಯನನ್ನು ಮತ್ತೆ 3 ದಿನ ಎಸ್ಐಟಿ ಕಸ್ಟಡಿಗೆ ನೀಡಿದ ಕೋರ್ಟ್!
ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿದೆ. ಸೆಪ್ಟೆಂಬರ್ 6 ರಂದು ಚಿನ್ನಯ್ಯನನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಮಂಗಳೂರು, ಸೆಪ್ಟೆಂಬರ್ 03: ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ (Dharmasthala Case) ದೂರುದಾರ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಮತ್ತೆ 3 ದಿನ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ. ಸೆ.6ರಂದು ಚಿನ್ನಯ್ಯನನ್ನು ಮತ್ತೆ ಹಾಜರುಪಡಿಸಲು ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಳ್ತಂಗಡಿಯ ನ್ಯಾಯಾಲಯ ದೂರುದಾರ ಸಿಎನ್ ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿತ್ತು. ಇಂದು ಎಸ್ಐಟಿ ಕಸ್ಟಡಿ ಮುಕ್ತಾಯ ಹಿನ್ನಲೆ ಚಿನ್ನಯ್ಯನನ್ನು ಎಸ್ಐಟಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಅಧಿಕೃತವಾಗಿ ED ಎಂಟ್ರಿ, ತನಿಖೆ ಶುರುವಾಗಿದ್ದು ಎಲ್ಲಿಂದ ಗೊತ್ತಾ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಕೋರ್ಟ್ ಹಾಲ್ನ ಬಾಗಿಲು ಮುಚ್ಚಿ ವಿಚಾರಣೆ ಮಾಡಲಾಗಿದೆ. ಸರ್ಕಾರಿ ಅಭಿಯೋಜಕರಿಂದ ಸಾಕ್ಷಿ ಸಂಗ್ರಹಣೆ, ಬಾಕಿ ವಿಚಾರಣೆ ಇತ್ಯಾದಿ ವಿವರಗಳ ತನಿಖೆಯ ಪ್ರಗತಿ ವರದಿ ಸಲ್ಲಿಕೆ ಮಾಡಿದರು.
ಎಸ್ಐಟಿಯಿಂದಲೂ ಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಸಲ್ಲಿಕೆ ಮಾಡಲಾಯಿತು. ಕಾನೂನು ಸೇವಾ ಪ್ರಾಧಿಕಾರದ ವಕೀಲರಿಂದ ಚಿನ್ನಯ್ಯ ಪರ ವಾದ ಮಂಡಿಸಿದರು. ಈ ವೇಳೆ ಎಸ್ಐಟಿ ತನಿಖಾಧಿಕಾರಿ, ಸರ್ಕಾರಿ ಅಭಿಯೋಜಕ, ಚಿನ್ನಯ್ಯ ಮತ್ತು ಕಾನೂನು ಸೇವಾ ಪ್ರಾಧಿಕಾರದ ಇಬ್ಬರು ವಕೀಲರು ಉಪಸ್ಥಿತರಿದ್ದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಬೆಂಗಳೂರಿನಲ್ಲೇ ಷಡ್ಯಂತ್ರಕ್ಕೆ ಮಹಾ ಸ್ಕೆಚ್, ಚಿನ್ನಯ್ಯ ಸಮ್ಮುಖದಲ್ಲೇ ಎಸ್ಐಟಿಯಿಂದ ಮಹಜರು
ಇನ್ನು ಬುರುಡೆ ಕಥೆಗೆ ಬೆನ್ನುಡಿ ಬರೆಯಲೇಬೇಕು ಅಂತ ದಿಟ್ಟ ಹೆಜ್ಜೆ ಇಟ್ಟಿರುವ ಎಸ್ಐಟಿ, ಮಾಸ್ಕ್ಮ್ಯಾನ್ ಚಿನ್ನಯ್ಯನನ್ನ ಜನ್ಮ ಜಾಲಾಡುತ್ತಿದೆ. ನಿನ್ನೆ ಸಂಜೆ ಇದ್ದಕಿದ್ದಂತೆ ಉಜಿರೆ ಕಡೆ ಮುಖ ಮಾಡಿದ್ದ ತನಿಖಾ ತಂಡ, ಉಜಿರೆಯ ಹಳ್ಳಿಮನೆ ಹೋಟೆಲ್ ಹಾಗೂ ಫ್ಯಾಮಿಲಿ ರೆಸಾರ್ಟ್ನಲ್ಲಿ ಮಹಜರು ಮಾಡಿದೆ. ಸರಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ಮಾಡಿ, ನಂತರ ಚಿನ್ನಯ್ಯನನ್ನ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ವಾಪಸ್ ಕರೆತಂದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:35 pm, Wed, 3 September 25







