ಧರ್ಮಸ್ಥಳ ಪ್ರಕರಣ: ಸಿಕ್ಕ 7 ಬುರುಡೆಗಳ ರಹಸ್ಯ ಪತ್ತೆಯೇ ಎಸ್ಐಟಿ ಅಧಿಕಾರಿಗಳಿಗೀಗ ಸವಾಲು
ಧರ್ಮಸ್ಥಳ ಬಂಗ್ಲೆಗುಡ್ಡೆ ಬುರುಡೆ ಪ್ರಕರಣದ ರಹಸ್ಯ ಭೇದಿಸಲು ಎಸ್‌ಐಟಿ ಕಸರತ್ತು ನಡೆಸಿದೆ. ಏಳು ಬುರುಡೆಗಳ ಮೂಲ ಪತ್ತೆಗಾಗಿ ಆಹಾರ ಮತ್ತು ಭೌಗೋಳಿಕ ಹಿನ್ನೆಲೆ ತಿಳಿಯಲು ಅತ್ಯಾಧುನಿಕ 'ಐಸೋಟೋಪ್ ಎನಾಲಿಸಿಸ್' ತಂತ್ರಜ್ಞಾನ ಬಳಸಲು ತನಿಖಾ ತಂಡ ಮುಂದಾಗಿದೆ. ಧರ್ಮಸ್ಥಳ ಬುರುಡೆ ಷಡ್ಯಂತ್ರ ತನಿಖೆಯ ಒಂದು ಭಾಗವಾದ್ರೆ ಪತ್ತೆಯಾದ ಬುರುಡೆಗಳ ಮೂಲ ಪತ್ತೆ ಇನ್ನೊಂದು ಭಾಗ ಎನ್ನಲಾಗಿದೆ.

ಮಂಗಳೂರು, ಜೂನ್ 21: ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ನಟ ಪ್ರಕಾಶ್ ರಾಜ್ ಹೆಸರು ಕೂಡ ಇದರಲ್ಲಿ ತಳುಕಿಹಾಕಿಕೊಂಡಿರುವ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪತ್ತೆಗೆ ಎಸ್ಐಟಿ ಹರಸಾಹಸ ಪಡುತ್ತಿದ್ದು, ಫೈನಲ್ ರಿಪೋರ್ಟ್ ಸಲ್ಲಿಸಲು ಏಳು ಬುರುಡೆಗಳ ಮೂಲ ಪತ್ತೆಯೇ ಸವಾಲಾಗಿ ಮಾರ್ಪಟ್ಟಿದೆ. ಹೀಗಾಗಿ ಐಸೋಟೋಪ್ ಎನಾಲಿಸಿಸ್ ತಂತ್ರಜ್ಞಾನ ಬಳಸಿ ಬುರುಡೆಗಳ ಬಗ್ಗೆ ಮಾಹಿತಿ ಪಡೆಯಲು ತನಿಖಾ ತಂಡ ಮುಂದಾಗಿದೆ.
ಮುಖ್ಯಾಂಶಗಳು
- ವಿಶ್ವಾದ್ಯಂತ ಸದ್ದು ಮಾಡಿದ್ದ ಧರ್ಮಸ್ಥಳ ಬುರುಡೆ ಪ್ರಕರಣ
- ಬಂಗ್ಲೆಗುಡ್ಡೆ ಬುರುಡೆಗಳ ರಹಸ್ಯ ಪತ್ತೆಯೇ ಎಸ್ಐಟಿಗೆ ಸವಾಲು
- ಐಸೋಟೋಪ್ ಎನಾಲಿಸಿಸ್ ಮೂಲಕ ಮಾಹಿತಿ ಪಡೆಯಲು ಸಿದ್ಧತೆ
ಏನಿದು ಐಸೋಟೋಪ್ ಎನಾಲಿಸಿಸ್?
ಐಸಮಸ್ಥಾನಿ ವಿಶ್ಲೇಷಣೆ ಎಂದರೆ ವಸ್ತುವೊಂದರಲ್ಲಿರುವ ವಿಭಿನ್ನ ಐಸೊಟೋಪ್‌ಗಳ ಪ್ರಮಾಣವನ್ನು ಅಳೆಯುವ ವೈಜ್ಞಾನಿಕ ತಂತ್ರವಾಗಿದೆ. ವಸ್ತುಗಳ ಮೂಲ, ವಯಸ್ಸು, ಆಹಾರ ಪದ್ಧತಿ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಪತ್ತೆಹಚ್ಚಲು ಮಾಸ್ ಸ್ಪೆಕ್ಟ್ರೋಮೆಟ್ರಿ ಬಳಸಿ ಈ ವಿಶ್ಲೇಷಣೆಯನ್ನು ನಡೆಸಲಾಗುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿಯೂ ಇದೇ ಮಾದರಿ ಪರೀಕ್ಷೆಗೆ ಎಸ್ಐಟಿಯೀಗ ಮುಂದಾಗಿದೆ.
ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ; SIT ಮಧ್ಯಂತರ ವರದಿ ಬಹಿರಂಗಕ್ಕೆ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹ
ಐಸೋಟೋಪ್ ಪರೀಕ್ಷೆಯಿಂದ ಮೃತರು ಕರಾವಳಿ ಅಥವಾ ಬೇರೆ ಕಡೆಯವರಾ ಎಂಬ ಅಂದಾಜು ಸಿಗಲಿದ್ದು, ಈ ಮಾಹಿತಿ ಆಧಾರದಲ್ಲಿ ಕಾಣೆಯಾದವರ ವಿವರಕ್ಕೆ ಅಧಿಕಾರಿಗಳು ತಾಳೆ ಹಾಕಲಿದ್ದಾರೆ. ಬಂಗ್ಲೆಗುಡ್ಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದು, ಇವುಗಳ ಮಾದರಿಯನ್ನು ಡಿಎನ್ಎ ಟೆಸ್ಟ್ಗಾಗಿಯೂ ಎಫ್ಎಸ್ಎಲ್ಗೆ ಈಗಾಗಲೇ ಎಸ್ಐಟಿ ಕಳುಹಿಸಿದೆ.ರಾಜ್ಯದ ನಾನಾ ಭಾಗಳಿಂದ ನಾಪತ್ತೆಯಾಗಿರುವವರ ವಿವರಗಳನ್ನು ಸಂಗ್ರಹಿಸಿರುವ ತನಿಖಾ ತಂಡ ಈಗಾಗಲೇ 8 ಕುಟುಂಬಗಳ ಜನರ ರಕ್ತದ ಮಾದರಿ ಪಡೆದಿದೆ. ಧರ್ಮಸ್ಥಳ ಬುರುಡೆ ಷಡ್ಯಂತ್ರ ತನಿಖೆಯ ಒಂದು ಭಾಗವಾದ್ರೆ ಪತ್ತೆಯಾದ ಬುರುಡೆಗಳ ಮೂಲ ಪತ್ತೆ ಇನ್ನೊಂದು ಭಾಗವಾಗಿದ್ದು, ಕನಿಷ್ಠ ಪತ್ತೆಯಾದ ಬುರುಡೆಗಳು ಯಾವ ಪ್ರದೇಶಕ್ಕೆ ಸೇರಿದ್ದು ಎಂದಾದರೂ ವರದಿಯಲ್ಲಿ ಉಲ್ಲೇಖಿಸಲು ಎಸ್ಐಟಿ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




