ದೇಶದಲ್ಲೇ ಮೊದಲ ಬಾರಿಗೆ 138 ರೈತರಿಗೆ ‘ಕೃಷಿ ಋಷಿ’ ಪ್ರಮಾಣಪತ್ರ; 7 ಗಣ್ಯರಿಗೆ ಗೌರವ ಡಾಕ್ಟರೇಟ್
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಮುದ್ದೇನಹಳ್ಳಿಯಲ್ಲಿ 138 ರೈತರಿಗೆ 'ಕೃಷಿ ಋಷಿ' ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಇದು ಸಾಂಪ್ರದಾಯಿಕ ಮತ್ತು ನೈಸರ್ಗಿಕ ಕೃಷಿ ಜ್ಞಾನವನ್ನು ಗುರುತಿಸುವ ವಿಶಿಷ್ಟ ಹೆಜ್ಜೆ. ಉಚಿತ ಶಿಕ್ಷಣ, ವಸತಿ, ಆಹಾರ ನೀಡುವ ವಿಶ್ವವಿದ್ಯಾಲಯವು ಮಣ್ಣಿನ ಆರೋಗ್ಯಕ್ಕೆ 'ಉರ್ವರಾ' ವೆಬ್‌ಸೈಟ್ ಸಹ ಪ್ರಾರಂಭಿಸಿತು. ಮುಂದಿನ ಘಟಿಕೋತ್ಸವದಲ್ಲಿ 2000 ರೈತರಿಗೆ ಪ್ರಮಾಣಪತ್ರ ನೀಡುವ ಗುರಿಯಿದೆ.

ಮುದ್ದೇನಹಳ್ಳಿ, ಜು.30: ದೇಶದಲ್ಲೇ ಮೊದಲ ಬಾರಿಗೆ 138 ರೈತರಿಗೆ ವಿಶ್ವವಿದ್ಯಾಲಯದ ವತಿಯಿಂದ ‘ಕೃಷಿ ಋಷಿ’ ಪ್ರಮಾಣಪತ್ರ ಪ್ರದಾನ ಮಾಡುವ ಮೂಲಕ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ (SSSIHE) 5ನೇ ಘಟಿಕೋತ್ಸವವು ವಿಶಿಷ್ಟ ಮೈಲಿಗಲ್ಲು ಸಾಧಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮದ ಪ್ರೇಮಾಮೃತಂ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 119 ವಿದ್ಯಾರ್ಥಿಗಳಿಗೆ ಪದವಿ, 24 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ವಿವಿಧ ಕ್ಷೇತ್ರಗಳ 7 ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಚಿಕ್ಕಮಗಳೂರು, ತುಮಕೂರು (ತಿಪಟೂರು) ಹಾಗೂ ಹಾಸನ (ಅರಸೀಕೆರೆ) ಭಾಗಗಳ 138 ರೈತರ ಪರಂಪರಾಗತ ಕೃಷಿ ಜ್ಞಾನ ಮತ್ತು ನೈಸರ್ಗಿಕ ಕೃಷಿ ಕೊಡುಗೆಯನ್ನು ಗುರುತಿಸಿ ‘ಕೃಷಿ ಋಷಿ’ ಪ್ರಮಾಣಪತ್ರ ವಿತರಿಸಲಾಯಿತು.
ವಿಶೇಷ ಸಾಧಕರಿಗೆ ಗೌರವ ಡಾಕ್ಟರೇಟ್:
ಪದ್ಮವಿಭೂಷಣ ಪುರಸ್ಕೃತ ವಿಜ್ಞಾನಿ ಡಾ. ಆರ್.ಎ. ಮಶೇಲ್ಕರ್
ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್
ತಾಳಯೋಗಿ ಪಂಡಿತ್ ಸುರೇಶ್ ತಳವಳ್ಕರ್
ಯುಪಿ ಸಿಎಂ ಸಲಹೆಗಾರ ಡಾ. ಜಿ.ವಿ. ಸಿಂಗ್ (ಅನುಪಸ್ಥಿತಿಯಲ್ಲಿ: ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್, ಡಾ. ಸೌಮ್ಯ ಸ್ವಾಮಿನಾಥನ್, ಡಾ. ಇಂದುಮತಿ ರಾವ್)
2019ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು ಶಿಕ್ಷಣ, ವಸತಿ ಮತ್ತು ಆಹಾರವನ್ನು ಉಚಿತವಾಗಿ ಒದಗಿಸುತ್ತಿದೆ. ಈ ಬಾರಿ ಪದವಿ ಪಡೆದ 119 ವಿದ್ಯಾರ್ಥಿಗಳಲ್ಲಿ ಶೇ.60ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.85ರಷ್ಟು ಮಂದಿ BPL ಕುಟುಂಬ ಹಿನ್ನೆಲೆಯವರಾಗಿದ್ದಾರೆ. ರೈತರಿಗೆ ಮಣ್ಣಿನ ಆರೋಗ್ಯ ಹಾಗೂ ಸುಸ್ಥಿರ ಕೃಷಿ ಕುರಿತು ಮಾಹಿತಿ ನೀಡುವ ‘ಉರ್ವರಾ’ ಶೈಕ್ಷಣಿಕ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: ಸ್ವಕ್ಷೇತ್ರದಲ್ಲಿ ಸೂರ್ಯ, ಜೊತೆಗೆ ಬುಧ, ಕೇತು ಯೋಗ… ಬದಲಾಗದಲಿದೆ ಈ ರಾಶಿಯವರ ಭಾಗ್ಯ…
“ಪರಂಪರಾಗತ ಕೃಷಿ ಜ್ಞಾನಕ್ಕೆ ಶೈಕ್ಷಣಿಕ ವಲಯದಲ್ಲಿ ಮನ್ನಣೆ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ಮುಂದಿನ ಘಟಿಕೋತ್ಸವದ ವೇಳೆಗೆ ಕನಿಷ್ಠ 2,000 ರೈತರಿಗೆ ‘ಕೃಷಿ ಋಷಿ’ ಪ್ರಮಾಣಪತ್ರ ನೀಡುವ ಗುರಿ ಹೊಂದಿದ್ದೇವೆ.” ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, “ವಿಕಸಿತ ಭಾರತದ ನಿರ್ಮಾಣದಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು. ಸತ್ಯ ಸಾಯಿ ವಿಶ್ವವಿದ್ಯಾಲಯದ ಈ ಉಚಿತ ಶಿಕ್ಷಣ ಸೇವೆ ಹಾಗೂ ರೈತರನ್ನು ಗೌರವಿಸುವ ಕಲ್ಪನೆ ಶ್ಲಾಘನೀಯ.” ಎಂದು ಹೇಳಿದರು.
ಇನ್ನು ಗುರುಪೂರ್ಣಿಮೆ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮಾಮೃತ ಪ್ರಕಾಶನದ ವತಿಯಿಂದ 19 ಭಾಷೆಗಳಲ್ಲಿ 40 ಪುಸ್ತಕಗಳು ಹಾಗೂ ಆಡಿಯೋಬುಕ್‌ಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಗುರು-ಶಿಷ್ಯರ ಸಂಬಂಧವನ್ನು ಸಾರುವ, ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಪ್ರಸ್ತುತಪಡಿಸಿದ ‘ಸ್ಫೂರ್ತಿಕಿರಣ’ ವಿಶೇಷ ಸಂಗೀತ ವಿಡಿಯೊ ಬಿಡುಗಡೆಯಾಯಿತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




