ಸ್ವಕ್ಷೇತ್ರದಲ್ಲಿ ಸೂರ್ಯ, ಜೊತೆಗೆ ಬುಧ, ಕೇತು ಯೋಗ… ಬದಲಾಗದಲಿದೆ ಈ ರಾಶಿಯವರ ಭಾಗ್ಯ…
ಸಿಂಹ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಕೇತುಗಳ ಅಪರೂಪದ ಯುತಿ ಆಗಲಿದೆ. ಬುಧಾದಿತ್ಯ ಯೋಗದ ಜೊತೆಗೆ ಆಧ್ಯಾತ್ಮಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಶುಭ ಫಲಗಳಿವೆ. ಆದರೆ ಕೆಲವು ರಾಶಿಯವರಿಗೆ ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಸವಾಲುಗಳಿರಬಹುದು. ಸಿಂಹ ರಾಶಿಯವರು ತಲೆನೋವು, ಕಣ್ಣಿನ ಸಮಸ್ಯೆ ಎದುರಿಸಬಹುದು. ಶುಭ-ಅಶುಭ ಫಲಗಳನ್ನು ವಿವರಿಸಿ, ಸೂರ್ಯ ನಮಸ್ಕಾರ, ವಿಷ್ಣು ಸಹಸ್ರನಾಮ ಪಠಣದಂತಹ ಪರಿಹಾರಗಳನ್ನು ನೀಡಲಾಗಿದೆ.

ಅಪರೂಪದ ಯೋಗ ಖಗೋಲದಲ್ಲಿ ಆಗಲಿದೆ. ಸಿಂಹ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಕೇತು ಗ್ರಹಗಳ ಯುತಿ ಏರ್ಪಟ್ಟಿದೆ. ಇಲ್ಲಿ ಬುಧನು ಮೌಢ್ಯ ಹೊಂದಿದ್ದು, ಕೇತು ವಕ್ರ ಸ್ಥಿತಿಯಲ್ಲಿದ್ದಾನೆ. ಸಿಂಹ ರಾಶಿಯು ಸೂರ್ಯನ ಸ್ವಕ್ಷೇತ್ರ. ಸ್ವಕ್ಷೇತ್ರದಲ್ಲಿ ಸೂರ್ಯ, ಬುಧ ಹಾಗೂ ಕೇತುಗಳ ಯುತಿಯು ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಿಶಿಷ್ಟ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಈ ಯುತಿಯಿಂದ ಯಾರಿಗೆ ಹಾಗೂ ಯಾವ ರೀತಿಯ ಶುಭ, ಅಶುಭ ಫಲಗಳು ದೊರೆಯಲಿವೆ.
ಗ್ರಹಗಳ ಯುತಿಯ ವಿಶ್ಲೇಷಣೆ:
ಬುಧಾದಿತ್ಯ ಯೋಗ ಅಪರೂಪದ್ದು. ಸ್ವಕ್ಷೇತ್ರವಾದ ಸಿಂಹದಲ್ಲಿ ಸೂರ್ಯ ಮತ್ತು ಬುಧ ಒಟ್ಟಿಗೆ ಇದ್ದಾಗ ಬುಧಾದಿತ್ಯ ಯೋಗ ಉಂಟಾಗುತ್ತದೆ. ಇದು ಬುದ್ಧಿಮತ್ತೆ, ತಾರ್ಕಿಕ ಆಲೋಚನೆ, ಶಿಕ್ಷಣ ಹಾಗೂ ಆಡಳಿತಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದರೆ ಇಲ್ಲಿ ಬುಧನು ಅಸ್ತಂಗತನಾಗಿರುವುದರಿಂದ ಯೋಗದ ಪರಿಣಾಮ ಸಾಧಾರಣವಾಗಿರುತ್ತದೆ.
ಸೂರ್ಯ-ಕೇತು – ಆಧ್ಯಾತ್ಮಿಕ ಯೋಗ:
ಸೂರ್ಯ ಮತ್ತು ಕೇತುಗಳ ಸಮ್ಮಿಲನವು ಅಹಂಕಾರವನ್ನು ಕಡಿಮೆ ಮಾಡಿ ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚಿಸುತ್ತದೆ. ಆದರೆ ಇದು ತಂದೆಯ ಆರೋಗ್ಯ ಹಾಗೂ ಆತ್ಮವಿಶ್ವಾಸದಲ್ಲಿ ಕೊಂಚ ಅಸ್ಥಿರತೆ ತರಬಹುದು.
ಬುಧ-ಕೇತು:
ಸಂಶೋಧನೆ, ಗೂಢ ಶಾಸ್ತ್ರ, ವ್ಯಾಕರಣ, ಜ್ಯೋತಿಷ್ಯ ಹಾಗೂ ಮಂತ್ರಶಾಸ್ತ್ರಗಳ ಅಧ್ಯಯನಕ್ಕೆ ಅತ್ಯಂತ ಶುಭಕರ.
ಇವರಿಗೆ ಶುಭ ಫಲಗಳು:
ಧನು ರಾಶಿಯವರಿಗೆ ಈ ಯುತಿಯು ಧನು ಲಗ್ನಕ್ಕೆ 9ನೇ ಭಾವದಲ್ಲಿ ನಡೆಯುತ್ತಿರುವುದರಿಂದ, ಆಧ್ಯಾತ್ಮಿಕ ಪ್ರಗತಿ, ಉನ್ನತ ಶಿಕ್ಷಣ, ವೈರಾಗ್ಯ ಭಾವನೆ, ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಸಂಶೋಧಕರಿಗೆ ಹಾಗೂ ಅಧ್ಯಾಪಕರಿಗೆ ವಿಶೇಷ ಯಶಸ್ಸು ಸಿಗಲಿದೆ.
ವೃಶ್ಚಿಕ, ಮೇಷ ಹಾಗೂ ಧನು ರಾಶಿ:
ವೃಶ್ಚಿಕದವರಿಗೆ ಉದ್ಯೋಗ ಕ್ಷೇತ್ರದಲ್ಲಿ ತಾಂತ್ರಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿದ್ದವರಿಗೆ ಸಫಲತೆ ಸಿಗುತ್ತದೆ. ಮೇಷ ರಾಶಿಯವರಿಗೆ ಮಂತ್ರ ಸಾಧನೆ, ಜ್ಯೋತಿಷ್ಯ ಅಧ್ಯಯನ, ಹಾಗೂ ಗೂಢ ವಿದ್ಯೆಗಳನ್ನು ಕಲಿಯಲು ಅತ್ಯುತ್ತಮ ಸಮಯ.
ಶಿಕ್ಷಣ ಹಾಗೂ ಗೂಢವಿದ್ಯೆ ಅಭ್ಯಾಸ ಮಾಡುವವರಿಗೆ: ವೈಯಾಕರಣಿಗಳು, ಜ್ಯೋತಿಷಿಗಳು, ವೇದ-ಶಾಸ್ತ್ರ ಅಧ್ಯಯನಕಾರರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಬುದ್ಧಿಶಕ್ತಿ ಪ್ರಖರಗೊಂಡು ಹೊಸ ವಿಚಾರಗಳು ಹೊಳೆಯುತ್ತವೆ.
ಪ್ರಮುಖ ಶುಭ ಫಲ:
ಆಧ್ಯಾತ್ಮಿಕ ಜಾಗೃತಿ ಉಂಟಾಗಲಿದೆ. ಐಹಿಕ ಸುಖಗಳಿಗಿಂತ ದೈವಿಕ ಹಾಗೂ ಧಾರ್ಮಿಕ ಚಿಂತನೆಗಳಲ್ಲಿ ಮನಸ್ಸು ತೊಡಗುತ್ತದೆ.ಸಂಶೋಧನಾ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ರಹಸ್ಯ ವಿಷಯಗಳನ್ನು ಭೇದಿಸುವ ಸಾಮರ್ಥ್ಯ ಹಾಗೂ ನಿಖರವಾದ ವಿಶ್ಲೇಷಣಾ ಶಕ್ತಿ ಹೆಚ್ಚುತ್ತದೆ. ಯಾವುದೇ ವಿಷಯವನ್ನು ಆಳವಾಗಿ ಅರ್ಥಮಾಡಿಕೊಂಡು ಮಾತನಾಡುವ ಕೌಶಲ ಒಲಿಯುತ್ತದೆ.
ಇವರಿಗೆ ಅಶುಭ ಫಲ:
ಸಿಂಹ ರಾಶಿಯಾದ ಸ್ವಂತ ರಾಶಿಯಲ್ಲೇ ಈ ಯುತಿ ಇರುವುದರಿಂದ ತಲೆನೋವು, ಕಣ್ಣಿನ ಸಮಸ್ಯೆಗಳು, ಅತಿಯಾದ ಮಾನಸಿಕ ಒತ್ತಡ ಹಾಗೂ ಪಿತ್ತ ಪ್ರಕೋಪ ಕಾಡಬಹುದು. ಕುಂಭ ರಾಶಿಯಲ್ಲಿ ರಾಹು ಕುಂಭದಲ್ಲಿದ್ದು, ಸಿಂಹದ ಗ್ರಹಗಳನ್ನು ವೀಕ್ಷಿಸುವುದರಿಂದ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ವೈಮನಸ್ಸುಗಳು ಅಥವಾ ಸಮ್ಮಿಶ್ರ ಅಭಿಪ್ರಾಯಗಳು ಮೂಡಬಹುದು. ವ್ಯಾಪಾರ ಪಾಲುದಾರಿಕೆಯಲ್ಲಿ ಜಾಗ್ರತೆ ಅಗತ್ಯ. ಮಕರ ಹಾಗೂ ಕರ್ಕಾಟಕ ರಾಶಿಯವರಿಗೆ ಧನ ಸ್ಥಾನ ಹಾಗೂ ವೆಚ್ಚ ಸ್ಥಾನಗಳಲ್ಲಿ ವ್ಯತ್ಯಾಸವಾಗುವುದರಿಂದ ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸಬೇಕು.
ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!
ಪ್ರಮುಖ ಅಶುಭ ಫಲಗಳು:
ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. 9ನೇ ಭಾವದಲ್ಲಿ ಸೂರ್ಯ-ಕೇತು ಒಂದಾಗುವುದರಿಂದ ತಂದೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಚರ್ಮ ಹಾಗೂ ನರಗಳ ಸಮಸ್ಯೆ ಕಾಣಿಸುಸುವುದು. ಬುಧ ಅಸ್ತಂಗತನಾಗಿ ಕೇತುವಿನೊಂದಿಗೆ ಇರುವುದರಿಂದ ಚರ್ಮದ ಕಿರಿಕಿರಿ, ನರಗಳ ದೌರ್ಬಲ್ಯ ಅಥವಾ ಪಿತ್ತ ವಿಕಾರಗಳು ಕಾಣಿಸಿಕೊಳ್ಳಬಹುದು. ಅತಿಯಾದ ವೈರಾಗ್ಯ, ಉದಾಸೀನತೆ ಇರಲಿದೆ. ಐಹಿಕ ಅಥವಾ ಲೌಕಿಕ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಿ ಕೆಲಸ ಕಾರ್ಯಗಳಲ್ಲಿ ವಿಳಂಬ ಧೋರಣೆ ಬರಬಹುದು.
ಪರಿಹಾರ:
ಸೂರ್ಯ ನಮಸ್ಕಾರ ಹಾಗೂ ಆದಿತ್ಯಹೃದಯ ಸ್ತೋತ್ರವನ್ನು ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯ ನೀಡಿ ಆದಿತ್ಯಹೃದಯ ಸ್ತೋತ್ರ ಪಠಿಸುವುದರಿಂದ ಆತ್ಮವಿಶ್ವಾಸ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣವನ್ನು ಬುಧನ ಮೌಢ್ಯ ಹಾಗೂ ಕೇತುವಿನ ದೋಷ ಶಮನಕ್ಕಾಗಿ ಮಾಡಿ ಅಥವಾ ಗಣಪತಿ ಅಥರ್ವಶೀರ್ಷ ಪಠಣ ಅತ್ಯಂತ ಶ್ರೇಷ್ಠ. ಯೋಗ್ಯರಿಗೆ ಕೆಂಪು ಬೇಳೆ, ವಸ್ತ್ರ, ಹಾಗೂ ಹೆಸರುಬೇಳೆ ದಾನ ಮಾಡುವುದು ಶುಭ ತರುತ್ತದೆ. ಅನ್ನದಾನಕ್ಕೆ ವಿಶೇಷ ಮಹತ್ತ್ವ ಇದೆ. ಆದಷ್ಟು ಅನ್ನದಾನಕ್ಕೆ ಒತ್ತು ಕೊಡುವುದು ಉತ್ತಮ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




