ಧ್ಯಾನ ಶಿಬಿರ ನಡೆಯುತ್ತಿದ್ದ ಮ್ಯಾನ್ಮಾರ್‌ನ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ; 14 ಮಂದಿ ಸಾವು, 20 ಜನರ ಸ್ಥಿತಿ ಗಂಭೀರ
ಮ್ಯಾನ್ಮಾರ್‌ನ ಮಧ್ಯ ಸಗೈಂಗ್ ಪ್ರಾಂತ್ಯದಲ್ಲಿರುವ ಬೌದ್ಧ ಮಠವೊಂದರ ಮೇಲೆ ಅಲ್ಲಿನ ಮಿಲಿಟರಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದ 14 ಜನರು ದುರಂತವಾಗಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರಜಾಸತ್ತಾತ್ಮಕ ಸಶಸ್ತ್ರ ಪಡೆಗಳು ಹಾಗೂ ಜನಾಂಗೀಯ ಬಂಡಾಯಗಾರರ ಗುಂಪುಗಳನ್ನು ಗುರಿಯಾಗಿಸಿಕೊಂಡು ಸೇನೆಯು ಸರಣಿ ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ದಾಳಿಗಳು ಹೆಚ್ಚಾಗಿವೆ. ಈ ದಾಳಿಗಳಿಂದಾಗಿ ಸಾಲು ಸಾಲು ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ನೇಪ್ಯಿಡಾ, ಆಗಸ್ಟ್ 21: ಮ್ಯಾನ್ಮಾರ್‌ನ (Myanmar) ಮಧ್ಯ ಸಗೈಂಗ್ ಪ್ರಾಂತ್ಯದಲ್ಲಿರುವ ಬೌದ್ಧ ಮಠವೊಂದರ ಮೇಲೆ ಅಲ್ಲಿನ ಮಿಲಿಟರಿ ಇಂದು ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Airstrike) ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದ 14 ಜನರು ಮೃತಪಟ್ಟಿದ್ದಾರೆ. ಈ ಘಟನೆಯು ಸಂಘರ್ಷ ಪೀಡಿತ ದೇಶದಲ್ಲಿ ವೈಮಾನಿಕ ದಾಳಿಗಳಿಂದ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಕುರಿತು ಆತಂಕವನ್ನು ಹೆಚ್ಚಿಸಿದೆ.
ಈ ಭೀಕರ ದಾಳಿಯು ಮ್ಯಾನ್ಮಾರ್‌ನ 2ನೇ ಅತಿ ದೊಡ್ಡ ನಗರವಾದ ಮ್ಯಾಂಡಲೇಯಿಂದ ಪಶ್ಚಿಮಕ್ಕೆ ಸುಮಾರು 75 ಕಿ.ಮೀ. ದೂರದಲ್ಲಿರುವ ಮ್ಯಾಂಗ್ ತಾಲೂಕಿನ ಸ್ವೆಲ್ ಲೆ ಓಹ್ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಸಂಭವಿಸಿದೆ. ನ್ವೇ ಓ ನೀಡಿರುವ ಮಾಹಿತಿಯ ಪ್ರಕಾರ, ಗ್ರಾಮದ ಬೌದ್ಧ ಮಠದ ಆವರಣದಲ್ಲಿ ಜನರು ಧ್ಯಾನ ಶಿಬಿರದಲ್ಲಿ ಭಾಗವಹಿಸುತ್ತಿದ್ದಾಗ ಜೇಟ್ ಯುದ್ಧ ವಿಮಾನವೊಂದು ಬಾಂಬ್ ಎಸೆದಿದೆ. ಈ ದಾಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ 14 ಜನರು ಸಾವನ್ನಪ್ಪಿದ್ದು, 20 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮ್ಯಾನ್ಮಾರ್‌ನ ರಾಖೈನ್‌ನಲ್ಲಿರುವ ಶಾಲೆಗಳ ಮೇಲೆ ಬಾಂಬ್ ದಾಳಿ; ನಿದ್ರಿಸುತ್ತಿದ್ದ 19 ಮಕ್ಕಳು ಸಾವು
ಧ್ಯಾನ ಶಿಬಿರಕ್ಕೆ ಆತಿಥ್ಯ ವಹಿಸಿದ್ದ ಮಠವು ಈ ಹಠಾತ್ ದಾಳಿಯಿಂದಾಗಿ ಕ್ಷಣಮಾತ್ರದಲ್ಲಿ ರಕ್ತಸಿಕ್ತ ವಾತಾವರಣವಾಗಿ ಬದಲಾಯಿತು. ಮೃತರ ಗುರುತು ಹಾಗೂ ಗಾಯಗೊಂಡವರ ಪ್ರಸ್ತುತ ಆರೋಗ್ಯ ಸ್ಥಿತಿಯ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




