
ಮಂಗಳೂರು, ಆಗಸ್ಟ್ 21: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಅರಣ್ಯ ಅಧಿಕಾರಿಗಳಿಂದ ಮೂವರ ಎನ್ಕೌಂಟರ್ ಪ್ರಕರಣ (Encounter case) ಸದ್ಯ ರಾಜ್ಯದಲ್ಲಿ ಸಾಕಷ್ಟು ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಅತ್ತ ತನಿಖೆ ನಡೆಯುತ್ತಿದ್ದರೆ, ಇತ್ತ ಅರಣ್ಯ ಇಲಾಖೆಯಿಂದ ಮತ್ತೊಂದು ಆಘಾತಕಾರಿ ಎಡವಟ್ಟು ಬೆಳಕಿಗೆ ಬಂದಿದೆ. ಆನೆ ಓಡಿಸುವ ಕಾರ್ಯಾಚರಣೆ ವೇಳೆ ಹಾರಿಸಿದ ಗುಂಡು ಇಬ್ಬರಿಗೆ ತಗುಲಿ ಗಾಯಗೊಂಡಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೆಂಗಮಲೆ ಎಂಬಲ್ಲಿ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮತ್ತೊಬ್ಬ ಸವಾರನ ಶರ್ಟ್ ಜೇಬಿನಲ್ಲಿದ್ದ ಮೊಬೈಲ್‌ಗೆ ಗುಂಡು ತಗುಲಿದ್ದು, ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಚಾಮರಾಜನಗರ ಫೈರಿಂಗ್ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆಯಿಂದ ಮತ್ತಷ್ಟು ಸಾಕ್ಷ್ಯ ರಿಲೀಸ್
ಸುಮಾರು ನಾಲ್ಕೈದು ದಿನಗಳ ಹಿಂದೆ ಐವರ್ನಾಡು ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಕಾಡಾನೆಗಳನ್ನು ಓಡಿಸಲು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಸಿಬ್ಬಂದಿ ಹಾರಿಸಿದ ಗುಂಡು, ಅದೇ ಮಾರ್ಗವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ರಾಘವ ಪ್ರಭು ಎಂಬುವವರ ಕಾಲಿಗೆ ತಗುಲಿದೆ. ತಕ್ಷಣವೇ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರಣ್ಯಾಧಿಕಾರಿಗಳೇ ಚಿಕಿತ್ಸಾ ವೆಚ್ಚವನ್ನು ಭರಿಸಿ ರಾಜಿ ಸಂಧಾನಕ್ಕೆ ಮುಂದಾಗಿದ್ದರಿಂದ ಅವರು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ ಎನ್ನಲಾಗಿದೆ.
ಇದೇ ಘಟನೆಯಲ್ಲಿ ಮತ್ತೊಬ್ಬ ಸವಾರ ಧನರಾಜ್ ಎಂಬುವವರು ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಗುಂಡಿನ ಚೂರು ನೇರವಾಗಿ ಧನರಾಜ್ ಅವರ ಎದೆಯ ಭಾಗಕ್ಕೆ ನುಗುತ್ತಿತ್ತು, ಆದರೆ ಶರ್ಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್‌ಗೆ ತಗುಲಿದೆ. ಇದರಿಂದ ಮೊಬೈಲ್ ಜಖಂಗೊಂಡಿದೆ. ಒಂದು ವೇಳೆ ಆ ಜಾಗದಲ್ಲಿ ಮೊಬೈಲ್ ಇಲ್ಲದಿದ್ದರೆ ಗುಂಡು ನೇರವಾಗಿ ಅವರ ಹೃದಯ ಭಾಗಕ್ಕೆ ತೂರಿ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಸದ್ಯ ಮೊಬೈಲ್‌ನಿಂದಾಗಿ ಜೀವ ಉಳಿದಿದ್ದು, ಅರಣ್ಯ ಇಲಾಖೆಯ ಈ ಅಜಾಗರೂಕತೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.