AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೊಲೀಸರಿಗೆ ಶರಣಾಗೋ ಮುಂಚೆ ನಿನ್ನ ಕೊಲ್ಲದೆ ಬಿಡುವುದಿಲ್ಲ’: ಮಂಗಳೂರಿನ ನರ್ಸ್‌ಗೆ ವಾಟ್ಸಾಪ್​ನಲ್ಲಿ ಜೀವಬೆದರಿಕೆ

ಬಂಟ್ವಾಳ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ನರ್ಸ್ ನಂದಿನಿಗೆ ವಾಟ್ಸಾಪ್ ಮೂಲಕ 'ತಲೆ ತೆಗೆಯುವುದಾಗಿ' ನೌಶದ್ ಕೊಲೆ ಬೆದರಿಕೆ ಹಾಕಿದ್ದಾನೆ. ಪ್ರಕರಣದಲ್ಲಿ ಪೊಲೀಸರ ವಿಳಂಬ ಧೋರಣೆ ಖಂಡಿಸಿ ವಿಎಚ್‌ಪಿ ಮೊರೆ ಹೋಗಲಾಗಿದೆ. ತಕ್ಷಣ ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಬೆನ್ನಲ್ಲೇ ಆರೋಪಿ ನೌಶದ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾನೆ.

'ಪೊಲೀಸರಿಗೆ ಶರಣಾಗೋ ಮುಂಚೆ ನಿನ್ನ ಕೊಲ್ಲದೆ ಬಿಡುವುದಿಲ್ಲ': ಮಂಗಳೂರಿನ ನರ್ಸ್‌ಗೆ ವಾಟ್ಸಾಪ್​ನಲ್ಲಿ ಜೀವಬೆದರಿಕೆ
ಆರೋಪಿ ನೌಶದ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Aug 28, 2026 | 9:13 AM

Share

ಮುಖ್ಯಾಂಶಗಳು

  • ದೂರು ನೀಡಿದ ಬೆನ್ನಲ್ಲೇ ನರ್ಸ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ನೌಶದ್.
  • ಪೊಲೀಸರ ನಡೆಗೆ ಆಕ್ರೋಶ, ನಂದಿನಿ-ಆದಿತ್ಯಾಗೆ ಕೆಲಸದಿಂದ ವಜಾ ಮಾಡಿದ ಆಸ್ಪತ್ರೆ
  • ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ

ಮಂಗಳೂರು, ಆಗಸ್ಟ್ 28: ದಕ್ಷಿಣ ಕನ್ನಡದ ಬಂಟ್ವಾಳದ ಬಸ್ ನಿಲ್ದಾಣವೊಂದರಲ್ಲಿ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಂದು ಕೊಲೆ ಬೆದರಿಕೆ ಪ್ರಕರಣ ಕೇಳಿಬಂದಿದೆ. ತನ್ನ ಮೇಲೆ ದೌರ್ಜನ್ಯವೆಸಗಿದವನ ವಿರುದ್ಧ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೇ ಕಾರಣಕ್ಕೆ ಆರೋಪಿ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಯುವತಿಯ ಸ್ನೇಹಿತೆಯರ ಮೇಲೂ ಹಲ್ಲೆ ನಡೆಸಿದ್ದಾನೆ. ಇದೆಲ್ಲದರ ಬಳಿಕವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಘಟನೆಯ ಹಿನ್ನೆಲೆ ಏನು?

ಪುತ್ತೂರು ಮೂಲದ ನರ್ಸ್ ನಂದಿನಿ ಎಂಬುವವರು ಮಂಗಳೂರಿನ ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಆಗಸ್ಟ್ 16ರಂದು ನಂದಿನಿ ಮೈಸೂರಿಗೆ ತೆರಳುವಾಗ, ತಮ್ಮ ಮನೆಯಲ್ಲಿದ್ದ ನಾಯಿಗೆ ಊಟ ಹಾಕಲು ಕೀಯನ್ನು ಸ್ನೇಹಿತೆ ಚಂದನಾಗೆ ನೀಡಿದ್ದರು. ಆಗಸ್ಟ್ 17ರಂದು ಚಂದನಾ ತನ್ನ ಮತ್ತೊಬ್ಬ ಸ್ನೇಹಿತೆ, ಕೇರಳ ಮೂಲದ ನರ್ಸ್ ಆದಿತ್ಯಾ ಜೊತೆ ನಂದಿನಿ ಮನೆಗೆ ತೆರಳಿದ್ದರು.

ಈ ವೇಳೆ, ಆದಿತ್ಯಾ ನೀಡಿದ ಮಾಹಿತಿ ಆಧರಿಸಿ ಅಲ್ಲಿಗೆ ಬಂದ ಆರೋಪಿ ನೌಶದ್, ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಂದನಾ ಮತ್ತು ಆದಿತ್ಯಾಗೆ ಅಶ್ಲೀಲವಾಗಿ ನಿಂದಿಸಿ ಗಲಾಟೆ ಮಾಡಿದ್ದಾನೆ. ಈ ವಿಷಯ ತಿಳಿದು ನಂದಿನಿ ಕರೆ ಮಾಡಿದಾಗ, ಫೋನ್ ಸ್ವೀಕರಿಸಿದ ನೌಶದ್ ನಂದಿನಿಗೂ ಅಶ್ಲೀಲವಾಗಿ ಬೈದು ಜೀವಬೆದರಿಕೆ ಹಾಕಿದ್ದಾನೆ.

‘ನಿನ್ನ ತಲೆ ತೆಗೀತೀನಿ’: ವಾಟ್ಸಾಪ್‌ನಲ್ಲಿ ಕೊಲೆ ಬೆದರಿಕೆ!

ಆರೋಪಿ ನೌಶದ್ ವಿರುದ್ಧ ನಂದಿನಿ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ವಿಚಾರ ತಿಳಿಯುತ್ತಿದ್ದಂತೆಯೇ ಕೋಪಗೊಂಡ ನೌಶದ್, ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ “ನನಗೆ ಯಾವುದಕ್ಕೂ ಹೆದರಿಕೆ ಇಲ್ಲ. ಪೊಲೀಸರಿಗೆ ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತೀನಿ, ಕೊಲ್ಲದೇ ಬಿಡುವುದಿಲ್ಲ!” ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದ. ಇದರಿಂದ ತೀವ್ರ ಭೀತಿಗೊಳಗಾದ ನಂದಿನಿ, ಆಗಸ್ಟ್ 20ರಂದು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು.

ಮತ್ತೊಬ್ಬ ನರ್ಸ್‌ಗೆ ಬ್ಲಾಕ್‌ಮೇಲ್?

ದೂರು ನೀಡಿ 10 ದಿನಗಳಾದರೂ ಪೊಲೀಸರು ಆರೋಪಿ ನೌಶದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಭಯಗೊಂಡ ನಂದಿನಿ, ರಕ್ಷಣೆ ಕೋರಿ ವಿಶ್ವ ಹಿಂದೂ ಪರಿಷತ್ (VHP) ಮತ್ತು ದುರ್ಗಾವಾಹಿನಿ ಮುಖಂಡರನ್ನು ಸಂಪರ್ಕಿಸಿದ್ದಾಳೆ.

ಈ ವೇಳೆ ಮತ್ತೊಬ್ಬ ನರ್ಸ್ ಆದಿತ್ಯಾಳನ್ನೂ ವಿಎಚ್‌ಪಿ ಮುಖಂಡರು ಸಂಪರ್ಕಿಸಿದ್ದು, “ನೌಶದ್ ಬಳಿ ನನ್ನ ಫೋಟೋ, ವಿಡಿಯೋಗಳಿವೆ” ಎಂದು ಆದಿತ್ಯಾ ಹೇಳಿಕೊಂಡಿದ್ದಾಳೆ. ಈ ಆಧಾರದ ಮೇಲೆ ನೌಶದ್ ಆಕೆಯ ಫೋಟೋ-ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದನಾ ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಆದಿತ್ಯಾ ಕೇರಳಕ್ಕೆ ತೆರಳಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

ಇನ್ನೊಂದೆಡೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ಆಸ್ಪತ್ರೆ ಆಡಳಿತ ಮಂಡಳಿಯು ದೂರು ನೀಡಿದ ನಂದಿನಿ ಹಾಗೂ ಆದಿತ್ಯಾ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿ ಆದೇಶಿಸಿದೆ. “ಮಂಗಳೂರಿನಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳನ್ನು ನೋಡಿದರೆ ಹೊರಗೆ ಓಡಾಡಲು ಭಯವಾಗುತ್ತಿದೆ, ನಮಗೆ ಸೂಕ್ತ ರಕ್ಷಣೆ ಬೇಕು” ಎಂದು ನಂದಿನಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ: ನನ್ನ ಮಗಳು ನನಗೆ ಬೇಕು, ಕೊಲೆಗಡುಕನನ್ನು ನನ್ನ ಮುಂದೇ ನಿಲ್ಲಿಸಿ

ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ

ಆರೋಪಿ ಬಂಧನ ವಿಳಂಬದ ಬಗ್ಗೆ ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

“ನಮಗೂ ಆರೋಪಿಯನ್ನು ಬಂಧಿಸುವ ಉದ್ದೇಶವೇ ಇದೆ. ಈ ಪ್ರಕರಣದಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಆದರೆ ಇದು ದೂರವಾಣಿ ಮೂಲಕ ಬೆದರಿಕೆ ಹಾಕಿದ ಪ್ರಕರಣವಾಗಿದೆ. ಕಾನೂನಿನಲ್ಲಿ ಈ ಅಪರಾಧಕ್ಕೆ ನಿಗದಿಪಡಿಸಿರುವ ಶಿಕ್ಷೆಯ ಮಿತಿ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಿರುವುದರಿಂದ ತಕ್ಷಣ ಬಂಧಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ. ಪೊಲೀಸ್ ಕಮಿಷನರ್‌ ಸ್ಪಷ್ಟನೆ ಬೆನ್ನಲ್ಲೇ, ಆರೋಪಿ ನೌಶದ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us