ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸುಳ್ಯ PFI ಕಚೇರಿ ಸಂಪೂರ್ಣ ಜಪ್ತಿ ಮಾಡಿದ ಎನ್ಐಎ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಪಿಎಫ್ಐ ಕಚೇರಿಯನ್ನು ಸಂಪೂರ್ಣವಾಗಿ ಜಪ್ತಿ ಮಾಡಿಕೊಂಡಿದೆ.
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ (Praveen Nettaru Murder Case) ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಭಯೋತ್ಪಾದಕ ಚಟುವಟಿಕೆಗೆ ಬಳಸಲಾಗುತ್ತಿದ್ದ ಸುಳ್ಯ ಪಿಎಫ್ಐ (PFI) ಕಚೇರಿ ಸಂಪೂರ್ಣ ಜಪ್ತಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರ ಅಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿದ್ದ ಕಚೇರಿಯನ್ನು ಜಪ್ತಿ ಮಾಡಲಾಗಿದ್ದು, ಈ ಬಗ್ಗೆ ಹಾಲ್ ಮಾಲೀಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ಆರ್ಡರ್ ಕಾಪಿ ರವಾನೆ ಮಾಡಲಾಗಿದೆ. ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಸುಳ್ಯ ಪಿಎಫ್ಐ ಕಚೇರಿ ಇದ್ದ ಜಾಗವನ್ನು ಪರಾಬಾರೆ ಮಾಡುವಂತಿಲ್ಲ. ಬಾಡಿಗೆ, ಲೀಜ್ ಕೊಡುವಂತಿಲ್ಲ. ಅಲ್ಲಿರುವ ಯಾವುದೇ ಪ್ರಾಪರ್ಟಿ ಸಾಗಿಸುವುದು ಅಥವಾ ನವೀಕರಣ ಮಾಡುವುದು ನಿಷಿದ್ಧವಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಸಂಚನ್ನು ಇದೇ ಕಚೇರಿಯಲ್ಲಿ ಮಾಡಲಾಗಿತ್ತು ಎಂದು NIA ಅಧಿಕೃತ ಮೂಲದಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ. ಇದರ ಆದೇಶ ಪ್ರತಿ ಕೂಡ ಟಿವಿ9ಗೆ ಲಭ್ಯವಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ
ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದು, ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ್ದರು. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದರು. ಘಟನೆ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2 ಗಂಟೆ ತಡವಾಗಿ ಬಂದರೂ ಮುಂಬೈನಲ್ಲೇ ಮಂಗಳೂರು ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ
ಪ್ರವೀಣ್ ಹತ್ಯೆಯಾಗಿದ್ದು ಮೂರನೇ ಯತ್ನದಲ್ಲಿ ಎನ್ನಲಾಗುತ್ತಿದೆ. ಪ್ರವೀಣ್ ಕೊಲೆಯಾಗೊ ಮೊದಲು ಎರಡು ಬಾರಿ ಹತ್ಯೆ ಯತ್ನ ನಡೆದಿತ್ತು. ಜು.23 ಮತ್ತು ಜು.24 ರಂದೇ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಜು.23 ರಂದು ಅದೇ ಬೈಕ್ನಲ್ಲಿ ಕೊಲ್ಲಲು ತಂಡ ಬಂದಿದ್ದು, ಆದರೆ ಅಂಗಡಿ ಬಳಿ ಜನ ಇದ್ದಿದ್ದರಿಂದ ವಾಪಾಸ್ ಹೋಗಿದ್ದಾರೆ. ಜು.24 ರಂದು ಸಂಜೆ 4.30 ಕ್ಕೆ ಕೊಲ್ಲಲು ಸಂಚು ರೂಪಿಸಲಾಗಿತ್ತು.
ಪ್ರಕರಣ ಸಂಬಂಧ ಈಗಾಗಲೇ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು 1,500 ಪುಟಗಳ ಚಾರ್ಜ್ಶೀಟ್ ಅನ್ನು NIA ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ.
ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸುತ್ತಾ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಬಜರಂಗದಳ ಕಾರ್ಯಕರ್ತ ಹರ್ಷನ ಬರ್ಬರ ಕೊಲೆ ನಡೆದಿತ್ತು. ಈ ವೇಳೆ ಬಿಜೆಪಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಪ್ರವೀಣ್ ನೆಟ್ಟಾರು ಹತ್ಯೆ ನಡೆದಾಗ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಿಂದೂ ಸಂಘಟನೆಗಳು ಬೆಂಬಲಿಸಿಕೊಂಡು ಬಂದಿದ್ದ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿದ್ದರು. ಪರಿಣಾಮ ರಾಜ್ಯ ಬಿಜೆಪಿ ಸರ್ಕಾರದ ಬಡುವೇ ಅಲುಗಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Mon, 27 March 23