
ಮಂಗಳೂರು, ಅಕ್ಟೋಬರ್ 12: ದಸರಾ ಹಬ್ಬದ ಸಂಭ್ರಮ ಹಾಗೂ ರಜೆಯ ಅವಧಿಯಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸಂಘಟನೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಂಗಳೂರಿನ ಬೆಂದೂರ್‌ವೆಲ್ ಬಳಿ ಇರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ನಾಡಹಬ್ಬ ದಸರಾ ಆಚರಣೆ ಹಾಗೂ ಮಂಗಳೂರು ದಸರಾದಲ್ಲಿ ಭಾಗವಹಿಸಬೇಕಿದ್ದ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದರೂ ರಜೆ ನೀಡದೆ ಪರೀಕ್ಷೆ ನಡೆಸಲು ಮುಂದಾದ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಯನ್ನು ಮುಂದೂಡುವಂತೆ ಕಾಲೇಜು ಆಡಳಿತಕ್ಕೆ ಮುಂಚಿತವಾಗಿ ಮನವಿ ಸಲ್ಲಿಸಿದ್ದರೂ, ಆಡಳಿತ ಮಂಡಳಿಯು ಸ್ಪಂದಿಸದೆ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡು ನೂರಾರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜಿನ ಗೇಟ್ ಎದುರು ಕುಳಿತು ಪ್ರತಿಭಟನೆ ನಡೆಸಿದರು. ಎಬಿವಿಪಿ ವಿದ್ಯಾರ್ಥಿ ಸಂಘಟನೆಯೂ ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ಅಧಿಕೃತ ದೂರು ನೀಡಲಾಗಿದೆ.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು, ಎಬಿವಿಪಿ ವಿದ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲು ಮುಂದಾದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಮತ್ತು ಕಾರ್ಯಕರ್ತರು ಪೊಲೀಸ್ ಜೀಪ್‌ಗೆ ಅಡ್ಡಲಾಗಿ ನಿಂತು, ರಸ್ತೆ ಬಂದ್ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಡಿಸಿಪಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರೂ, ವಿದ್ಯಾರ್ಥಿಗಳು ಜೀಪ್ ಎದುರೇ ಮಲಗಿ ನಾಯಕರ ಬಿಡುಗಡೆಗೆ ಪಟ್ಟು ಹಿಡಿದರು.
ವಿದ್ಯಾರ್ಥಿಗಳ ಆಕ್ರೋಶ ಹಾಗೂ ಪ್ರತಿರೋಧಕ್ಕೆ ಮಣಿದ ಪೊಲೀಸರು ಅಂತಿಮವಾಗಿ ಜೀಪನ್ನು ಬದಿಗೆ ಹಾಕಬೇಕಾಯಿತು. ಎಬಿವಿಪಿ ನಾಯಕರನ್ನು ಬಿಡುಗಡೆ ಮಾಡುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜು ಗೇಟ್ ಎದುರು ಪೊಲೀಸರಿಗೆ ಸವಾಲು ಹಾಕಿ ಪ್ರತಿಭಟನೆ ಮುಂದುವರಿಸಿದ್ದಾರೆ. ದಸರಾ ರಜೆ ಹೊತ್ತಿನಲ್ಲಿ ಹಬ್ಬದ ಉತ್ಸಾಹಕ್ಕೆ ತಣ್ಣೀರು ಎರಚಿರುವ ಕಾಲೇಜು ಆಡಳಿತದ ಈ ಧೋರಣೆ ವಿರುದ್ಧ ಶೈಕ್ಷಣಿಕ ವಲಯದಲ್ಲಿಯೂ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 am, Mon, 12 October 26