ಸುಹಾಸ್ ಬೆನ್ನಲ್ಲೇ ಮತ್ತಿಬ್ಬರು ಹಿಂದೂ ಮುಖಂಡರಿಗೆ ಬೆದರಿಕೆ: ಹತ್ಯೆಗೆ ಸ್ಥಳ, ದಿನಾಂಕ ಫಿಕ್ಸ್
ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಮಂಗಳೂರಿನಲ್ಲಿ ಕಿಡಿಗೇಡಿಗಳಿಂದ ಹಿಂದೂ ಮುಖಂಡರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಮಾಡಲಾಗಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಬಂಧಿಸಲಾಗಿದೆ. ಪೊಲೀಸ್ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ವೈರಲ್ ಆಗುತ್ತಿವೆ.

ಮಂಗಳೂರು, ಮೇ 04: ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ (Suhas Shetty) ಮೇ 1ರಂದು ಕೊಲೆಯಾಗಿದ್ದ. ಈ ಪ್ರಕರಣವನ್ನ ಬೇಧಿಸಿರುವ ಪೊಲೀಸರು ಇಬ್ಬರು ಹಿಂದೂಗಳು ಸೇರಿದಂತೆ 8 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಈಗಲೂ ಕರಾವಳಿ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂಥಾ ಸ್ಥಿತಿಯಿದೆ. ಈ ಮಧ್ಯೆ ಮಂಗಳೂರಿನಲ್ಲಿ ಹಿಂದೂ ಮುಖಂಡರಿಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ (Life threat) ಹಾಕಲಾಗುತ್ತಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಮತ್ತು ಭರತ್ ಕುಮ್ಡೇಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಮಾಡಲಾಗಿದೆ.
ಮೇ 5ರಂದು ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುವುದಾಗಿ ಕಿಡಿಗೇಡಿಗಳು ಹಿಂದೂ ಮುಖಂಡ ಭರತ್ ಕುಮ್ಡೇಲ್‌ಗೆ ಜೀವ ಬೆದರಿಕೆ ಹಾಕಿದ್ದು, ಪೋಸ್ಟ್ ವೈರಲ್ ಮಾಡಿದ್ದಾರೆ. ಭರತ್ ಕುಮ್ಡೇಲ್ ಎಸ್ಡಿಪಿಐ ಮುಖಂಡ ಅಶ್ರಫ್ ಹತ್ಯೆಯ ಪ್ರಮುಖ ಆರೋಪಿ.
ಇದನ್ನೂ ಓದಿ: ಸುಹಾಸ್ ಹತ್ಯೆ: ಫಿನೀಶ್, ರಿವೇಂಜ್ ಪೋಸ್ಟ್ಗಳ ವಿರುದ್ಧ ಮಂಗಳೂರು ಪೊಲೀಸ್ ಕಾರ್ಯಾಚರಣೆ, 12 ಪ್ರಕರಣ ದಾಖಲು
ಎಸ್ಡಿಪಿಐನಲ್ಲಿ ಮುಂಚೂಣಿಯಲ್ಲಿದ್ದ ಮುಖಂಡ ಅಶ್ರಫ್ ಕಲಾಯಿ ಅನ್ನು 2017ರ ಜೂನ್ 21ರಂದು ಬಂಟ್ವಾಳದ ಬೆಂಜನಪದವು ಎಂಬಲ್ಲಿ ಬರ್ಬರವಾಗಿ ಹತ್ಯೆಗೈದಿದ್ದರು. ಅಶ್ರಫ್ ಕೊಲೆ ಬಳಿಕ ಪ್ರತೀಕಾರವಾಗಿ ಶರತ್ ಮಡಿವಾಳ ಹತ್ಯೆಯಾಗಿತ್ತು. ಅಶ್ರಫ್ ಕೊಂದ ಭರತ್ ನನ್ನ ಮರೆತಿಲ್ಲ. Wait and watch ಎಂದು ಕೇವಲ ಎಂಟು ಗಂಟೆ ಮೊದಲು On fixed leader ಎಂಬ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಶರಣ್ ಪಂಪ್ವೆಲ್ಗೂ ಜೀವ ಬೆದರಿಕೆ
ಭರತ್ ಕುಮ್ಡೇಲ್ ಮಾತ್ರವಲ್ಲದೇ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ಗೂ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್, ಶರಣ್ ಹತ್ಯೆಯಾಗಲು ತಯಾರಾಗಿರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.
‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’: ಶ್ರೀಜುಗೂ ಜೀವ ಬೆದರಿಕೆ
ಅದೇ ರೀತಿಯಾಗಿ ಶ್ರೀಜಿತ್ ಅಲಿಯಾಸ್ ಶ್ರೀಜುಗೂ ಜೀವ ಬೆದರಿಕೆ ಹಾಕಲಾಗಿದೆ. ‘Killers_target’ ಎಂಬ ಪೇಜ್ನಿಂದ ಮುಂಚೆ ಪೋಸ್ಟ್ ಹಾಕಲಾಗಿತ್ತು. ಇಂದು ಮತ್ತೆ ವೈಯಕ್ತಿಕವಾಗಿ ‘Abu_Sifiyan678’ ಪೇಜ್ನಿಂದ ಮೆಸೇಜ್ ಕಳುಹಿಸಿರುವ ಕಿಡಿಗೇಡಿಗಳು, ‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಅಂತಾ ಮಲಯಾಳಂ ನಲ್ಲಿ ಮೆಸೇಜ್ ಮಾಡಿದ್ದಾರೆ.
ಇದನ್ನೂ ಓದಿ: ಸುಹಾಸ್ ಹತ್ಯೆ ಪ್ರಕರಣದಲ್ಲಿ ಬಂಧಿತ ಇಬ್ಬರು ಹಿಂದೂಗಳು: ಅಣ್ಣನ ಹತ್ಯೆ ಪ್ರತೀಕಾರಕ್ಕೆ ಹಿಂದೂಗಳನ್ನು ಬಳಸಿದ ಫಾಜಿಲ್ ತಮ್ಮ
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತಿಕಾರಕ್ಕೆ 2018ರ ಜನವರಿಯಲ್ಲಿ ಬಶೀರ್ ಕೊಲೆ ಆಗಿತ್ತು. ಮಂಗಳೂರಿನ ಹೊರವಲಯ ಕೊಟ್ಟಾರ ಚೌಕಿ ಬಳಿ ಹತ್ಯೆ ಮಾಡಲಾಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜಿತ್ ಅಲಿಯಾಸ್ ಶ್ರೀಜು ಪ್ರಕರಣದ ಆರೋಪಿ. ಹೀಗಾಗಿ ಈತನಿಗೆ ಮತ್ತೆ ಮತ್ತೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:24 pm, Sun, 4 May 25







