ಮಹಿಳೆಯನ್ನ ಕೊಂದಿದ್ದ ರಾಟ್ವೀಲರ್ ನಾಯಿಗಳೂ ಸಾವು: ಶ್ವಾನದ ಮಾಲೀಕ ಅರೆಸ್ಟ್
ಡಿಸೆಂಬರ್ 5ರಂದು ದಾವಣಗೆರೆ ಹೊರವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿಯಾಗಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಶ್ವಾನಗಳ ಮಾಲೀಕನನ್ನು ಬಂಧಿಸಿದ್ದಾರೆ. ಮೃತ ಮಹಿಳೆಯ ಅನಾಥ ಮಕ್ಕಳ ನೆರವಿಗೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮುಂದಾಗಿದ್ದಾರೆ.

ದಾವಣಗೆರೆ, ಡಿಸೆಂಬರ್ 07: ರಾಟ್ವೀಲರ್ ನಾಯಿಗಳ ದಾಳಿಗೆ (Dog attack) ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕರ (Dog owner) ಪತ್ತೆಗೆ ಒತ್ತಡ ಹೆಚ್ಚಳ ಬೆನ್ನಲ್ಲೇ ಇದೀಗ ಮಾಲೀಕ ಶೈಲೇಂದ್ರ ಕುಮಾರ್ರನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ನಗರದ ಶಿವಾಲಿ ಚಿತ್ರಮಂದಿರ ಮಾಲೀಕರ ಅಳಿಯ. ಇನ್ನು ಮಹಿಳೆ ಬಲಿ ಪಡೆದಿದ್ದ ಎರಡು ನಾಯಿಗಳು ಸಾವನ್ನಪ್ಪಿವೆ.
ಶ್ವಾನಗಳ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲು ಶಾಸಕ ಕೆಎಸ್ ಬಸವಂತಪ್ಪ ಪೊಲೀಸರಿಗೆ ಸೂಚಿಸಿದ್ದರು. ಆ ಮೂಲಕ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ತನಿಖೆಗೆ ಮುಂದಾಗಿದ್ದರು, ಇದೀಗ ಮಾಲೀಕನ ಬಂಧನವಾಗಿದೆ.
ಇದನ್ನೂ ಓದಿ: ದಾವಣಗೆರೆ: ತೋಟ ಕಾಯಲು ಬಿಟ್ಟಿದ್ದ ರಾಟ್ ವೀಲರ್ ಶ್ವಾನಗಳ ದಾಳಿಗೆ ಮಹಿಳೆ ಬಲಿ
ಬಂಧಿತ ಶೈಲೇಂದ್ರ ಕುಮಾರ್ ಹಲವು ವರ್ಷಗಳಿಂದ ರಾಟ್ ವೀಲರ್ ಶ್ವಾನಗಳನ್ನ ಸಾಕಿದ್ದರು. ಡಿ.5ರಂದು ಶ್ವಾನಗಳನ್ನು ಆಟೋದಲ್ಲಿ ತಂದು ಜಮೀನಿನಲ್ಲಿ ಬಿಟ್ಟುಹೋಗಿದ್ದರು. ಈ ವೇಳೆ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ(38) ಎಂಬುವವರ ಮೇಲೆ ದಾಳಿ ಮಾಡಿದ್ದವು. ದಾವಣಗೆರೆ ತಾಲೂಕಿನ ಹೊನ್ನೂರು ಕ್ರಾಸ್ ಬಳಿ ಘಟನೆ ನಡೆದಿತ್ತು.
ಶ್ವಾನಗಳು ಸಾವು
ಮಹಿಳೆ ಬಲಿ ಪಡೆದಿದ್ದ ಎರಡು ರಾಟ್ವೀಲರ್ ನಾಯಿ ಸಾವನ್ನಪ್ಪಿವೆ. ಘಟನೆ ಬಳಿಕ ಗ್ರಾಮಸ್ಥರು ಹಾಗೂ ಹಂದಿ ಹಿಡಿಯುವವರು ಸೇರಿ ನಾಯಿಗಳನ್ನು ಸೆರೆಹಿಡಿಯಲಾಗಿದೆ. ಈ ವೇಳೆ ತೀವ್ರ ಅಟ್ಟಾಡಿಸಿದ್ದರಿಂದ ಆಘಾತಕ್ಕೊಳಗಾಗಿ ನಾಯಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯ ಮಕ್ಕಳ ನೆರವಿಗೆ ಮುಂದಾದ ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಇನ್ನು ನಾಯಿಗಳ ದಾಳಿಗೆ ಮಹಿಳೆ ಬಲಿ ಹಿನ್ನಲೆ ನಾಲ್ಕು ಮಕ್ಕಳು ಅನಾಥರಾಗಿದ್ದಾರೆ. ಸದ್ಯ ಚಿತ್ರದುರ್ಗ ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಈ ಅನಾಥ ಮಕ್ಕಳ ನೆರವಿಗೆ ಮುಂದಾಗಿದ್ದಾರೆ. ಮೃತ ಮಹಿಳೆಯ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ ಸ್ವಾಮೀಜಿ, ನಾಲ್ಕು ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ: ಕಣ್ಣುಗುಡ್ಡೆಯನ್ನೇ ಕಿತ್ತು ಹಾಕಿದ ಡೆಡ್ಲಿ ಶ್ವಾನ
ಇನ್ನು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅನಾಥ ಮಕ್ಕಳ ಜೀವನದ ಜೊತೆ ಕೆಲವರು ಆಟವಾಡುತ್ತಿದ್ದಾರೆ. ಶ್ವಾನಗಳ ಮಾಲೀಕರ ಬಳಿ ಹೋಗಿ ಮೃತ ಸಂಬಂಧಿಕರ ಹೆಸರಿನಲ್ಲಿ ಹಣ ಸುಲಿಯುವ ಪ್ರಯತ್ನ ನಡೆದಿದೆ ಎಂದು ಮೃತ ಅನಿತಾರ ಸಂಬಂಧಿ ರತ್ನಮ್ಮ ಎನ್ನುವವರು ಗಂಭೀರ ಆರೋಪ ಮಾಡಿದ್ದಾರೆ.
ಅನಿತಾರ ಸಂಬಂಧಿ ಗಂಭೀರ ಆರೋಪ
ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ನಾನು ಅನಿತಾ ಮಕ್ಕಳ ಚಿಕ್ಕಪ್ಪ ಹಾಗೂ ಸಂಬಂಧಿ ಎಂದು ಶ್ವಾನಗಳ ಮಾಲೀಕರ ಬಳಿ ಹಣ ಕೇಳಲು ಹೋಗಿದ್ದರು. ಸಹಾಯ ಮಾಡುವುದದಿದ್ದರೇ ನೇರವಾಗಿ ಮಕ್ಕಳಿಗೆ ಮಾಡಲಿ. ಬೇರೆಯವರ ಮಾತನ್ನು ನಂಬಿ ಹಣ ಕೊಡಬೇಡಿ. ಅನಾಥ ಮಕ್ಕಳಿಗೆ ಅನ್ಯಾಯ ಆಗುವುದು ಬೇಡ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



