Davanagere: 4 ಜಾನುವಾರುಗಳನ್ನು ತಿಂದಿದ್ದ ಚಿರತೆಯನ್ನು ರೈತರೇ ಸೆರೆಹಿಡಿದರು!
ಚಿರತೆ ಅರ್ಧ ತಿಂದು ಬಿಟ್ಟು ಹೋದ ಹಸುವಿನ ಕರುವನ್ನು ಹೊತ್ತುಕೊಂಡು ಮನೆಗೆ ತಂದಿದ್ದು, ಬರುವಾಗ ದಾರಿಯೂದ್ದಕ್ಕೂ ಹಸುವಿನ ಕರುವಿನ ರಕ್ತ ಚೆಲ್ಲುತ್ತಾ ಬಂದಿದ್ದಾರೆ. ಕಾರಣ ಚಿರತೆ ಕರು ತಿನ್ನಲು ಬರಲಿ ಎಂಬುವುದು ಇವರ ಉದ್ದೇಶವಾಗಿತ್ತು.
ದಾವಣಗೆರೆ: ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಬೆಳೆ ಹಾನಿ ಜತೆಗೆ ಪ್ರಾಣ ಹಾನಿಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತ್ತೆ ದಾವಣಗೆರೆ ಜಿಲ್ಲೆಯಲ್ಲಿ ಅದೆಷ್ಟೋ ಘಟನೆಗಳು ನಡೆದಿವೆ. ಜಮೀನು ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದ ಜಿಲ್ಲೆಯ ರೈತರ ಜೀವನ ಸಾಗುವುದೇ ಜಾನುವಾರುಗಳಿಂದ. ಆದರೆ ಇತ್ತೀಚೆಗೆ ಚಿರತೆ ಜಾನುವಾರುಗಳನ್ನು ತಿಂದು ಹಾಕುತ್ತಿದೆ. ಒಂದಲ್ಲ ಎರಡಲ್ಲ, ನಾಲ್ಕು ಜಾನುವಾರುಗಳನ್ನು ಚಿರತೆ ತಿಂದು ಹಾಕಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿ ಈ ಭಾಗದ ರೈತರು ಬೇಸತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡು ಕೊಳ್ಳಬೇಕು ಎಂದು ಐದು ಜನ ಸಹೋದರರು ಇರುವ ರೈತ ಕುಟುಂಬ ನಿರ್ಧರಿಸಿದ್ದು, ಚಿರತೆ ಸೆರೆಗೆ ಯೋಜನೆ ಮಾಡಿದೆ. ಕೊನೆಗೂ ಈ ಯೋಜನೆ ಯಶಸ್ವಿಯಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಕ್ಕ ಮಜ್ಜಿಗೆರೆ ಗ್ರಾಮದ ತೋಟದ ಮನೆಯಲ್ಲಿ ಪೂಜಾರ ಬಸಪ್ಪ, ಕೋಟ್ರೇಶ್, ಹಾಲೇಶ್, ವಿರೂಪಾಕ್ಷ, ಮಂಜಪ್ಪ ಎಂಬ ಐದು ಜನ ಸಹೋದರು ಚಿರತೆ ಸೆರೆಗೆ ಮುಂದಾಗಿದ್ದಾರೆ. 4 ಜಾನುವಾರು ತಿಂದು ಇದೇ ಜಾಗದಲ್ಲಿ ತನ್ನ ಆಹಾರ ಇದೆ ಎಂದು ಬಂದ ಚಿರತೆಯನ್ನು ಗಮನಿಸಿದ ಪೂಜಾರ ಮನೆತನದ ರೈತರು ಚಿರತೆ ಹಿಡಿಯಲು ಯೋಜನೆ ಮಾಡಿದ್ದಾರೆ.
ಚಿರತೆ ಅರ್ಧ ತಿಂದು ಬಿಟ್ಟು ಹೋದ ಹಸುವಿನ ಕರುವನ್ನು ಹೊತ್ತುಕೊಂಡು ಮನೆಗೆ ತಂದಿದ್ದು, ಬರುವಾಗ ದಾರಿಯೂದ್ದಕ್ಕೂ ಹಸುವಿನ ಕರುವಿನ ರಕ್ತ ಚೆಲ್ಲುತ್ತಾ ಬಂದಿದ್ದಾರೆ. ಕಾರಣ ಚಿರತೆ ಕರು ತಿನ್ನಲು ಬರಲಿ ಎಂಬುವುದು ಇವರ ಉದ್ದೇಶವಾಗಿತ್ತು.
ರೇಷ್ಮೆ ಗೂಡು ಇರುವಲ್ಲಿ ಕರುವಿನ ಶವ ಇಟ್ಟು, ಅದಕ್ಕೊಂದು ಹಗ್ಗ ಕಟ್ಟಲಾಗಿದೆ. ಅದಕ್ಕೆ ಒಂದು ಗಂಟೆ ಕಟ್ಟಿದ್ದು, ಚಿರತೆ ಬಂದು ಕರು ತಿನ್ನಲು ಮುಂದಾದರೆ ಗಂಟೆ ಸದ್ದು ಆಗಲಿ ಎಂದು ಹೀಗೆ ಮಾಡಿದ್ದೇವೆ. ಗಂಟೆಗೆ ಕಟ್ಟಿದ ಹಗ್ಗವನ್ನು ಮನೆ ಹೊರಗಡೆ ನಿಲ್ಲಿಸಿದ ಟ್ರಾಕ್ಟರ್ ಟ್ರೈಲರ್ಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ತಾಡಪಲ್ನಲ್ಲಿ ಬಚ್ಚಿಟ್ಟುಕೊಂಡು ಮಲಗಿದ್ದೇವು. ರಾತ್ರಿ ವೇಳೆ ನಮ್ಮ ನಿರೀಕ್ಷೆಯಂತೆ ಚಿರತೆ ರಕ್ತದ ವಾಸನೆ ಹಿಡಿದುಕೊಂಡು ನೇರವಾಗಿ ಕರುವಿನ ಶವವಿಟ್ಟ ರೂಮ್ಗೆ ಹೋಗಿದೆ. ಮಾಂಸ ತಿನ್ನಲು ಶುರುವಾದ ಬಳಿಕ ಗಂಟೆ ಸದ್ದು ಶುರುವಾಗಿದೆ. ಹೀಗೆ ಗಂಟೆ ಸದ್ದು ಕೇಳಿದ್ದೆ ತಡ ಹಗ್ಗ ಜಗ್ಗಿದ್ದೇವೆ. ಇದರಿಂದ ಬಾಗಿಲು ಹಾಕಿಕೊಂಡಿದೆ ಎಂದು ಚಿರತೆ ಹಿಡಿದ ರೈತ ಪೂಜಾರ ಕೋಟ್ರೇಶ್ ವಿವರಿಸಿದ್ದಾರೆ.
ಬಳಿಕ ಸ್ಥಳೀಯರೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪೋನ್ ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ತಜ್ಞರ ಜೊತೆಗೆ ಬಂದು ಸಿಟ್ಟಿಗೆದ್ದ ಚಿರತೆಗೆ ಅರವಳಿಕೆ ನೀಡಿ ಬೋನ್ನಲ್ಲಿ ಹಾಕಿಕೊಂಡಿದ್ದಾರೆ. ಹೀಗೆ ಬೋನ್ನಲ್ಲಿ ಹಾಕಿಕೊಂಡ ಚಿರತೆಯನ್ನು ಮೈಸೂರಿನ ಮೃಗಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ನಿಜಕ್ಕೂ ಯಾವ ಅಧಿಕಾರಿಗಳಿಗೂ ಹೊಳೆಯದ ವಿಚಾರ ಇವರ ತಲೆಯಲ್ಲಿ ಹುಟ್ಟಿಕೊಂಡಿದೆ. ಸದ್ಯ ಗ್ರಾಮದ ಜನರು ಚಿರತೆ ಸೆರೆಹಿಡಿದ ಐವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಬಸವರಾಜ್ ದೊಡ್ಮನಿ
ಇದನ್ನೂ ಓದಿ: ಮಂಡ್ಯ ಜಿಲ್ಲೆಯ ನಾಲ್ವರು ಯುವಕರಿಂದ ಚಿರತೆ ಸೆರೆ; ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು
ಮಾಂಸ ತಿನ್ನಲು ತೋಟದ ಮನೆಗೆ ನುಗ್ಗಿದ ಚಿರತೆಯನ್ನು ಬಂಧಿಸಿದ ರೈತರು; ಬಳಿಕ ಅರಣ್ಯ ಇಲಾಖೆ ವಶಕ್ಕೆ