ದಾವಣಗೆರೆಯಲ್ಲಿ ಫೆ 3 ಮತ್ತು 4ರಂದು ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ
38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣ ಮತ್ತು ಯಶಸ್ವಿಯನ್ನಾಗಿಸುವ ನಿಟ್ಟಿನಲ್ಲಿ ರೂಪುರೇಷೆಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಫೆಬ್ರವರಿ 3 ಮತ್ತು 4ರಂದು ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದಾವಣಗೆರೆ, ಜನವರಿ 30: ನಗರದಲ್ಲಿ ನಡೆಯಲಿರುವ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ (State level journalists’ conference) ವನ್ನು ಅರ್ಥಪೂರ್ಣ ಮತ್ತು ಯಶಸ್ವಿಯನ್ನಾಗಿಸುವ ನಿಟ್ಟಿನಲ್ಲಿ ರೂಪುರೇಷೆಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಫೆಬ್ರವರಿ 3 ಮತ್ತು 4ರಂದು ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಮಾಧ್ಯಮ ಮಿತ್ರರು ಭಾಗವಹಿಸಲಿದ್ದು, ಒಟ್ಟಿನಲ್ಲಿ ಈ ಸಮ್ಮೇಳನವು ಪತ್ರಕರ್ತರ ಹಬ್ಬ – ಜಾತ್ರೆ ಎಂತಾಗಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ನೇತೃತ್ವ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕದ ಆತಿಥ್ಯ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ಈ ಸಮ್ಮೇಳನ ಆಯೋಜನೆಗೊಂಡಿದೆ ಎಂದು ಸಚಿವ ಎಸ್ಸೆಸ್ಸೆಂ ಅವರು ತಮ್ಮ `ಶಿವ-ಪಾರ್ವತಿ’ ನಿವಾಸದಲ್ಲಿ ಇಂದು ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಮ್ಮೇಳನವು 31 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ತಾಲ್ಲೂಕು ಆಗಿದ್ದ ದಾವಣಗೆರೆಯಲ್ಲಿ 1992ರಲ್ಲಿ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ನಡೆದಿತ್ತು. ಈಗ ದಾವಣಗೆರೆ ರಚನೆಯಾದ 25 ವರ್ಷಗಳ ನಂತರ ಇದೇ ಪ್ರಪ್ರಥಮ ಬಾರಿಗೆ ಸಮ್ಮೇಳನ ನಡೆಯುತ್ತಿರುವುದು ದಾವಣಗೆರೆ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಮೆರವಣಿಗೆ
ಫೆಬ್ರವರಿ 3ರ ಬೆಳಿಗ್ಗೆ 9 ಗಂಟೆಗೆ ಹರ್ಡೇಕರ್ ಮಂಜಪ್ಪ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಂ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ದದಿಂದ ಮಾಧ್ಯಮದ ಮಿತ್ರರ ಬೃಹತ್ ಮೆರವಣಿಗೆ ನಡೆಯಲಿದೆ. ಸಾರೋಟನಲ್ಲಿ ಇರಿಸಲಾಗುವ ವೃಕ್ಷದ ಆಕೃತಿಯಲ್ಲಿ ಬರುವ ರಂಬೆ-ಕೊಂಬೆಗಳಲ್ಲಿ ಎಲ್ಲಾ ಪತ್ರಿಕೆಗಳ ಶಿರೋನಾಮೆಗಳನ್ನು ಬಿಂಬಿಸಲಾಗುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು ಗಮನ ಸೆಳೆಯಲಿವೆ. ಪತ್ರಕರ್ತರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನೆ
ಮೆರವಣಿಗೆ ನಂತರ ಬೆಳಿಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಘನ ಉಪಸ್ಥಿತಿ ಮತ್ತು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರು ವಸ್ತು ಪ್ರದರ್ಶವನ್ನು, ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ಅವರು ವ್ಯಂಗ್ಯ ಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರೂ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದಾರೆ.
ಗೋಷ್ಠಿ
ಸಮಾರಂಭದ ಉದ್ಘಾಟನೆಯ ನಂತರ ಮಧ್ಯಾಹ್ನ 2 ಗಂಟೆಗೆ ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’ ಮತ್ತು ಸಂಜೆ 4 ಗಂಟೆಗೆ ‘ಪತ್ರಿಕೆಗಳು : ಹಿಂದೆ-ಇಂದು-ಮುಂದು’ ವಿಷಯಗಳ ಕುರಿತಂತೆ ಗೋಷ್ಠಿಗಳು ಜರುಗಲಿವೆ. ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ. ರವಿ, ಹಿರಿಯ ಪತ್ರಕರ್ತ ಈಶ್ವರ ದೈದೋಟ ಸೇರಿದಂತೆ ನಾಡಿನ ಹಿರಿಯ ಪತ್ರಕರ್ತರು ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಅದೇ ದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ತಲ್ಲಣ ಸೃಷ್ಟಿಸಿದ ಶಮನೂರು ಶಿವಶಂಕರಪ್ಪ ಹೇಳಿಕೆ, ಕ್ರಮಕ್ಕೆ ಒತ್ತಾಯ
ದಿನಾಂಕ 4ರ ಭಾನುವಾರ ಬೆಳಿಗ್ಗೆ 9.45ಕ್ಕೆ ಪ್ರತಿನಿಧಿಗಳ ಸಮಾವೇಶ ಜರುಗಲಿದೆ. ನಂತರ ಬೆಳಿಗ್ಗೆ 10.30ಕ್ಕೆ ‘ಮಾಧ್ಯಮ ಮತ್ತು ಸರ್ಕಾರ’ ಹಾಗೂ ಬೆಳಿಗ್ಗೆ 11.30ಕ್ಕೆ ‘ಸಾಮಾಜಿಕ ಮಾಧ್ಯಮ – ವೃತ್ತಿ ವಿಶ್ವಾಸಾರ್ಹತೆ’ ವಿಷಯಗಳ ಕುರಿತ ಗೋಷ್ಠಿಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ನಾಡಿನ ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕಾ ಉದ್ಘಾಟಿಸಲಿದ್ದಾರೆ. ನಾಡಿನ ಹಿರಿಯ ಪತ್ರಕರ್ತರು ಗೋಷ್ಠಿಗಳನ್ನು ನಡೆಸಿಕೊಡುವರು.
ಸಮಾರೋಪ
ಗೋಷ್ಠಿಗಳ ನಂತರ ಮಧ್ಯಾಹ್ನ 2 ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರೋಪದ ನುಡಿಗಳನ್ನಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಹಿಳಾ-ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್‌ಕರ್, ಅರಣ್ಯ – ಪರಿಸರ ಸಚಿವ ಈಶ್ವರ ಖಂಡ್ರೆ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಶಾಸಕರುಗಳು ವಿಶೇಷ ಆಹ್ವಾನಿತರಾಗಿದ್ದಾರೆ.
ಗೌರವಾರ್ಪಣೆ
ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ-ಸಲ್ಲಿಸುತ್ತಿರುವ ದಾವಣಗೆರೆ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಲಾಗುತ್ತದೆ. ಅಲ್ಲದೇ, ರಾಜ್ಯ ಪತ್ರಕರ್ತರ ಸಮ್ಮೇಳನದ ಸಂದರ್ಭದಲ್ಲಿ ಪ್ರತಿ ವರ್ಷ ನಾಡಿನ ಹಿರಿಯ ಪತ್ರಕರ್ತರಿಗೆ ಕೊಡಮಾಡುವ ಕೆಯುಡಬ್ಲ್ಯೂಜೆ ರಾಜ್ಯ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ 6 ಜನರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿವರಿಸಿದರು.
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಈವರೆಗೆ ಬರೊಬ್ಬರಿ 141 ಕೋಟಿ ಮಹಿಳೆಯರು ಸಂಚಾರ-ಸಿದ್ದರಾಮಯ್ಯ
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಖಜಾಂಚಿ ಎನ್.ವಿ. ಬದರಿನಾಥ್, ಕಾರ್ಯದರ್ಶಿ ಜೆ.ಎಸ್. ವೀರೇಶ್, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಪ್ಪ, ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಕೆ. ಒಡೆಯರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಹಿರಿಯ ಪತ್ರಕರ್ತರಾದ ಎಚ್.ಬಿ. ಮಂಜುನಾಥ್, ಬಾ.ಮ.ಬಸವರಾಜಯ್ಯ, ಬಿ.ಎನ್. ಮಲ್ಲೇಶ್, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಮಂಜು ಯಳನಾಡು, ಬಸವರಾಜ ದೊಡ್ಡಮನಿ, ರಮೇಶ್ ಜಾಗೀರ್ ದಾರ್ ಸೇರಿದಂತೆ ಸಮ್ಮೇಳನದ ವಿವಿಧ ಸಮಿತಿಗಳ ಪ್ರಮುಖರು, ಪದಾಧಿಕಾರಿಗಳು, ಪತ್ರಕರ್ತರು ಪಾಲ್ಗೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.