ಎಫ್‌ಐಆರ್‌ನಲ್ಲಿ ಸಚಿವರ ಮಗನ ಹೆಸರೇ ಇಲ್ಲ, ದೂರನ್ನು ಪೊಲೀಸರೇ ಬರೆದುಕೊಂಡಿದ್ದಾರೆ.. -ಮೃತ ಕೂಡಲೆಪ್ಪ ಮಗ ಅಸಮಾಧಾನ
ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಅಪಘಾತ ಪ್ರಕರಣ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಪೊಲೀಸರು ಅಪಘಾತದ ಸ್ಥಳ ಮಹಜರು ಮಾಡಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ.
ಬಾಗಲಕೋಟೆ: ಜೂನ್ 5 ಸೋಮವಾರ ಸಂಜೆ 6 ಗಂಟೆ ಇರಬಹುದು. ಅದು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ಕ್ರಾಸ್. ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಲಕ್ಷ್ಮಣ ಸವದಿ ಮಗನ ಕಾರು.. ರೈತ ಕೂಡಲೆಪ್ಪ ಅನ್ನೋರ ಬೈಕ್ಗೆ ಗುದ್ದಿತ್ತು. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರೈತ ಸಾವು ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಕಾರಿನಿಂದ ಕೆಳಗಿಳಿದ ಚಿದಾನಂದ ಸವದಿ, ಸ್ಥಳೀಯರಿಗೆ ಆವಾಜ್ ಹಾಕಿದ್ರು ಅನ್ನೋ ಆರೋಪ ಕೇಳಿ ಬಂದಿತ್ತು. ಗಾಯಗೊಂಡಿದ್ದವರನ್ನ ಆಸ್ಪತ್ರೆಗೆ ಸೇರಿಸೋ ಬದಲು.. ಮಾನವೀಯತೆ ಮರೆತು ಸ್ಥಳೀಯರಿಗೆ ಧಮ್ಕಿ ಹಾಕಿದ್ರು ಅನ್ನೋದು ಅಲ್ಲಿದ್ದವರ ಆರೋಪ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಪ್ರಕರಣದ ದೂರನ್ನು ಪೊಲೀಸರೇ ಬರೆದುಕೊಂಡಿದ್ದಾರೆ ಎಫ್‌ಐಆರ್‌ನಲ್ಲಿ ಚಿದಾನಂದ ಸವದಿ ಹೆಸರಿಲ್ಲದ ಹಿನ್ನೆಲೆಯಲ್ಲಿ ಮೃತ ರೈತ ಕೂಡ್ಲೆಪ್ಪ ಮಗ ಹನುಮಂತ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಕರಣದ ದೂರನ್ನು ಪೊಲೀಸರೇ ಬರೆದುಕೊಂಡಿದ್ದಾರೆ. ಅವರೇ ದೂರು ಬರೆದುಕೊಂಡು ನಮ್ಮ ಸಹಿ ಪಡೆದಿದ್ದಾರೆ. ನಾವು ಹೇಳಿದ ರೀತಿ ಎಫ್‌ಐಆರ್ ಆಗಿಲ್ಲ. ಚಿದಾನಂದ ಸವದಿ ಚಾಲಕನ ಹೆಸರು ಪೊಲೀಸರೇ ಬರೆದುಕೊಂಡಿದ್ದಾರೆ. ನಮಗೆ ನ್ಯಾಯ ಬೇಕು, ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತಂದೆ ಕಳೆದುಕೊಂಡು ನಮಗೆ ಧಿಕ್ಕು ತೋಚದಂತಾಗಿದೆ. ನಮಗೆ ಲಕ್ಷ್ಮಣ ಸವದಿ ಆಗಲಿ, ಚಿದಾನಂದ ಸವದಿ ಆಗಲಿ ಕರೆ ಮಾಡಿಲ್ಲ. ಸಾಂತ್ವನ ಹೇಳಿಲ್ಲ. ಯಾವುದೇ ಜನಪ್ರತಿನಿಧಿಗಳು ಸಾಂತ್ವನ ಹೇಳಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಡಿಸಿಎಂ ಸವದಿ ಮಗನ ಕಾರು ಚಾಲಕ ಪೊಲೀಸರ ವಶಕ್ಕೆ ಅಪಘಾತ ನಡೆದಿರೋದು ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಹೀಗಾಗಿ ಹುನಗುಂದ ಪೊಲೀಸರು ಚಾಲಕ ಹನುಮಂತ ಸಿಂಗ್ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಕಾರು ಯಾರು ಚಲಾಯಿಸ್ತಿದ್ರು. ಚಿದಾನಂದ ಯಾವ ವಾಹನದಲ್ಲಿದ್ರು. ಅಪಘಾತ ಆದ ಕಾರಲ್ಲಿ ಎಷ್ಟು ಜನ ಇದ್ರು. ಎಷ್ಟು ವೇಗದಲ್ಲಿ ಕಾರು ಹೊರಟಿತ್ತು. ಅಪಘಾತದ ನಂತರ ಎಷ್ಟು ಹೊತ್ತು ಸ್ಥಳದಲ್ಲಿ ಇದ್ರು. ಕಾರಿನ ನಂಬರ್ ಪ್ಲೇಟ್ ಕೀಳಲು ಯತ್ನಿಸಿದ್ದು ಯಾರು. ನಂಬರ್ ಪ್ಲೇಟ್ ಕೀಳಲು ಯತ್ನಿಸಿದ್ದು ಏಕೆ ಅಂತಾ ಮಾಹಿತಿ ಸಂಗ್ರಹಿಸಿದ್ದಾರೆ. ಬಾಗಲಕೋಟೆ ಎಸ್ಪಿ ಪ್ರಕಾರ, ಚಿದಾನಂದ ಸವದಿ ಚಾಲನೆ ಮಾಡ್ತಿರಲಿಲ್ಲಾ. ಚಾಲಕ ಹನಮಂತ ಸಿಂಗ್ ಚಾಲನೆ ಮಾಡ್ತಿದ್ನಂತೆ. ಡ್ರಂಕ್ ಅಂಡ್ ಡ್ರೈವ್ ಸತ್ಯಕ್ಕೆ ದೂರವಾದದ್ದು ಅಂತಾ ಹೇಳಿದ್ದಾರೆ.
ಹುನಗುಂದ ಪೊಲೀಸರು ಕಾರು ಅಪಘಾತದ ಸ್ಥಳದ ಪಂಚನಾಮೆ ಮಾಡಿದ್ದಾರೆ. ಅಪಘಾತ ನಡೆದ ಸ್ಥಳದ ಪಂಚನಾಮೆ ಮಾಡಿದ್ದು, ಕಾರು ಡಿಕ್ಕಿ ಆದಾಗ ಬೈಕ್ ಎಲ್ಲಿ ಬಿದ್ದಿತ್ತು. ಕೂಡಲೆಪ್ಪ ಎಲ್ಲಿ ಬಿದ್ದಿದ್ದ. ಕಾರು ಯಾವ ಕಡೆಯಿಂದ ಬಂತು. ಬೈಕ್ ಯಾವ ಕಡೆ ಸಾಗುತ್ತಿತ್ತು. ಅಪಘಾತವಾದ ಬಳಿಕ ಕಾರಿನಿಂದ ಎಷ್ಟು ಜನ ಇಳಿದ್ರು ಅನ್ನೋ ಮಾಹಿತಿ ಸಂಗ್ರಹಿಸಿದ್ದಾರೆ. ಆದ್ರೆ ಮೃತನ ಸಂಬಂಧಿಕರು, ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿಯೇ ಅಪಘಾತವಾದ ಕಾರು ಚಲಾಯಿಸ್ತಿದ್ರು. ನಮಗೆ ಎಲ್ಲ ಮಾಹಿತಿ ಇದೆ. ಪೊಲೀಸರು ರಾಜಕೀಯ ಒತ್ತಡದಿಂದ ಡಿಸಿಎಂ ಮಗನ ರಕ್ಷಣೆಗೆ ನಿಂತಿದ್ದಾರೆ ಅಂತಾ ಆರೋಪ ಮಾಡ್ತಿದ್ದಾರೆ.
ಪೊಲೀಸರ ಕಡೆಯಿಂದ ಸಾಕ್ಷಿ ನಾಶ ಮಾಡಿಸುತ್ತಿದ್ದಾರೆ ಇನ್ನು ಪ್ರಕರಣಕ್ಕೆ ಸಂಬಂಧಿಸಿ ಮೃತ ಕೂಡ್ಲೆಪ್ಪ ಅವರ ಮಾವ ಸಿದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದ ಪರಿಸ್ಥಿತಿ ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ. ಮೂರು ಜನ ಹೆಣ್ಣುಮಕ್ಕಳು ಇಬ್ಬರು ಗಂಡು ಮಕ್ಕಳಿದ್ದಾರೆ. ಮೊಮ್ಮಕ್ಕಳಿದ್ದಾರೆ. ಲಕ್ಷ್ಮಣ ಸವದಿ ಅವರು ಪೊಲೀಸರ ಮೇಲೆ ಪ್ರಭಾವ ಬೀರಿ ಕೂಡ್ಲೆಪ್ಪ ಮಕ್ಕಳನ್ನು ಅಮಾಯಕ ಬಲಿಪಶು ಮಾಡುತ್ತಿದ್ದಾರೆ. ಪೊಲೀಸರ ಕಡೆಯಿಂದ ಸಾಕ್ಷಿ ನಾಶ ಮಾಡಿಸುತ್ತಿದ್ದಾರೆ. ಘಟನೆ ಸ್ಥಳದಲ್ಲಿ ಯಾರು ವಿಡಿಯೋ ಮಾಡಿದ್ದರೋ ಅವರಿಗೆ ಪೊಲೀಸರು ಭಯ ಹುಟ್ಟಿಸುತ್ತಿದ್ದಾರೆ. ಯಾರ ಬಳಿ ಆದರೂ ವಿಡಿಯೋ ಇದ್ರೆ ಡಿಲಿಟ್ ಮಾಡಿ. ಯಾರಿಗೂ ಕೊಡಬಾರದು ಎಂದು ಭೀತಿ ಹುಟ್ಟಿಸಿದ್ದಾರೆ. ಕೂಡ್ಲೆಪ್ಪ ಮನೆಯ ತಲೆಬಾಗಿಲು ರೀತಿ ಇದ್ದರು. ಹೊಲದಲ್ಲಿ ಮನೆ ಅರ್ಧಕ್ಕೆ ನಿಂತಿದೆ. ಲಕ್ಷ್ಮಣ ಸವದಿ ಅವರು ಮನೆಗೆ ಬರುತ್ತಾರೆ ಅಂತ ಹೇಳಿದರು. ಇದುವರೆಗೂ ಒಂದು ಕರೆ ಕೂಡ ಮಾಡಿಲ್ಲ. ಅವರ ಕುಟುಂಬಕ್ಕೆ ಸೂಕ್ತ ನ್ಯಾಯ ಪರಿಹಾರ ಕೊಡಿಸಬೇಕು ಎಂದು ಹೇಳಿದ್ರು.
ಚಿದಾನಂದ ಸವದಿ ಅವರ ಹೆಸರಲ್ಲಿ ವಾಹನವಿದೆ. ವಾಹನ ಡಿಸಿಎಮ್ ಪುತ್ರನಿಗೆ ಸಂಬಂಧಪಟ್ಟಿದ್ದು. ಆದರೆ ಚಿದಾನಂದ ಸವದಿ ಹೆಸರು ಎಲ್ಲೂ ಕಂಡುಬಂದಿಲ್ಲ. ಅವರ ಮೇಲೆ ಕೇಸ್ ಆಗದಂತೆ ಮುಚ್ಚಿ ಹಾಕುವ ಪ್ರಯತ್ನ ಪೊಲೀಸರು ಮಾಡುತ್ತಿದ್ದಾರೆ. ಲಕ್ಷ್ಮಣ ಸವದಿ ಅವರು ಸ್ಥಳಕ್ಕೆ ಬರಬೇಕಿತ್ತು. ಲಕ್ಷ್ಮಣ ಸವದಿ ಅವರು ಮಾನವೀಯತೆ ಇದ್ರೆ ಇಲ್ಲಿ ಬರಬೇಕಿತ್ತು. ಅವರು ರಾಜ್ಯದ ಉಪಮುಖ್ಯಮಂತ್ರಿ ಸಾವು ನೋವು ಹೋರಾಟದಲ್ಲಿ ಅವರಿಗೆ ಬರೋಕಾಗಿಲ್ಲ. ಓರ್ವ ರೈತ ತಮ್ಮ ವಾಹನದಲ್ಲಿ ಸಿಲುಕಿ ಮರಣ ಹೊಂದಿದ್ದಾನೆ ಎಂಬ ಪ್ರಜ್ಞೆ ಇಲ್ಲ ಎಂದು ಸಿದ್ದಪ್ಪ ಅಸಮಾಧಾನ ಹೊರ ಹಾಕಿದ್ದಾರೆ.
ಒಟ್ನಲ್ಲಿ ಹೊಲದಿಂದ ಹೊರಟಿದ್ದ ರೈತ ಸ್ಮಶಾನ ಸೇರಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಅಂತಾ ಸಂಬಂಧಿಕರು ಒತ್ತಾಯಿಸ್ತಿದ್ದಾರೆ. ಪೊಲೀಸರು ಯಾವುದೇ ಒತ್ತಡಕ್ಕೂ ಒಳಗಾಗದೇ ತನಿಖೆ ನಡೆಸಿದ್ರೆ ಸತ್ಯಾಂಶ ಹೊರಬರಲಿದೆ ಅನ್ನೋದು ನಮ್ಮ ಆಶಯ.
ಇದನ್ನೂ ಓದಿ: ಅಪಘಾತಕ್ಕೀಡಾದ ಕಾರಲ್ಲಿ ನನ್ನ ಪುತ್ರ ಚಿದಾನಂದ ಇರಲಿಲ್ಲ: ಡಿಸಿಎಂ ಲಕ್ಷ್ಮಣ ಸವದಿ