ಕರ್ನಾಟಕದಲ್ಲಿ ಕೊನೆಗೂ ತಗ್ಗಿತು ಡೆಂಗ್ಯೂ ಅಬ್ಬರ: ಆದರೂ ಆತಂಕ ಇದೆ ಎಂದ ಆರೋಗ್ಯ ಇಲಾಖೆ! ಕಾರಣ ಇಲ್ಲಿದೆ
ಕರ್ನಾಟಕದಲ್ಲಿ ಕೊನೆಗೂ ಡೆಂಗ್ಯೂ ಹಾವಳಿ ತುಸು ಕಡಿಮೆಯಾಗಿದೆ. ಆರೋಗ್ಯ ಇಲಾಖೆ ನೀಡಿರುವ ಲೆಕ್ಕಾಚಾರದ ಪ್ರಕಾರ, ಡೆಂಗ್ಯೂ ಹಾಟ್ಸ್ಟಾಟ್ಗಳ ಸಂಖ್ಯೆಯಲ್ಲಿಯೂ ಕಡಿಮೆಯಾಗಿದೆ. ಆದರೂ ಇನ್ನು ಕೆಲವು ದಿನಗಳ ಮಟ್ಟಿಗೆ ನಿರಾಳವಾಗಿರುವಂತಿಲ್ಲ ಎಂದು ಇಲಾಖೆ ಹೇಳಿದೆ. ಇದಕ್ಕೆ ಕಾರಣವೇನು? ಡೆಂಗ್ಯೂ ಹಾಟ್ಸ್ಟಾಟ್ಗಳೆಂದು ಗುರುತಿಸಲು ಮಾನದಂಡವೇನು? ಇತ್ಯಾದಿ ಮಾಹಿತಿ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 9: ಕರ್ನಾಟಕದಲ್ಲಿ ಜೂನ್‌ನಲ್ಲಿ 406 ರಷ್ಟು ಇದ್ದ ಡೆಂಗ್ಯೂ ಹಾಟ್‌ಸ್ಪಾಟ್‌ಗಳ ಸಂಖ್ಯೆ ಈಗ 12 ಕ್ಕೆ ಇಳಿದಿದೆ. ಆದರೆ, ಇತ್ತೀಚೆಗೆ ಮತ್ತೆ ಮಳೆಯಾಗಿದ್ದರಿಂದ ಸೋಂಕು ಹರಡದಂತೆ ವೈರಸ್ ಅನ್ನು ನಿಯಂತ್ರಣದಲ್ಲಿಡಲು ಕಟ್ಟುನಿಟ್ಟಾದ ಕ್ರಮಗಳನ್ನು ಮುಂದುವರೆಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮಳೆಯ ನಂತರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಎಚ್ಚರದಿಂದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟುನಿಟ್ಟಾದ ಕ್ರಮಗಳನ್ನು ಮುಂದುವರಿಸಿದೆ ಎಂದು ಇಲಾಖೆಯ ಆಯುಕ್ತ ಶಿವಕುಮಾರ್ ಕೆಬಿ ತಿಳಿಸಿದ್ದಾರೆ.
ಪ್ರತಿ ತಿಂಗಳ ಮೊದಲ 15 ದಿನಗಳಲ್ಲಿ ಇಲಾಖೆಯ ಸ್ವಯಂಸೇವಕರು 90-95 ಲಕ್ಷ ಕುಟುಂಬಗಳನ್ನು ಒಳಗೊಂಡಂತೆ ಪರಿಶೀಲನೆ ನಡೆಸುತ್ತಾರೆ. ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳು ಸ್ವಚ್ಛತೆ ಕಾಪಾಡದ ಪ್ರದೇಶಗಳನ್ನು ಗುರುತಿಸಿ ಅಂಥವರ ಮಾಲೀಕರ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಹೊಂದಿರುವ ಆಸ್ತಿ ಮಾಲೀಕರಿಂದ 6.5 ಲಕ್ಷ ರೂ. ಮತ್ತು ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 35,000 ರೂ. ದಂಡವನ್ನು ಸಂಗ್ರಹಿಸಿದ್ದೇವೆ ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕೇಂದ್ರದ (ಎನ್‌ಸಿವಿಬಿಡಿಸಿ) ಉಪ ನಿರ್ದೇಶಕ ಡಾ.ಶರೀಫ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ರಾಜ್ಯದ ಪ್ರಸ್ತುತ 12 ಹಾಟ್‌ಸ್ಪಾಟ್‌ಗಳಲ್ಲಿ ಬಿಬಿಎಂಪಿಯಲ್ಲಿ ಒಂಬತ್ತು, ಕಲಬುರಗಿಯಲ್ಲಿ ಎರಡು ಮತ್ತು ರಾಯಚೂರಿನಲ್ಲಿ ಒಂದು ಹಾಟ್‌ಸ್ಪಾಟ್ ಸೇರಿವೆ ಎಂದು ಅವರು ತಿಳಿಸಿದ್ದಾರೆ.
ಡೆಂಗ್ಯೂ ಹಾಟ್ಸ್ಪಾಟ್ಗೆ ಮಾನದಂಡವೇನು?
100 ಮೀಟರ್ ವ್ಯಾಪ್ತಿಯೊಳಗೆ ಕನಿಷ್ಠ ಎರಡು ಡೆಂಗ್ಯೂ ಪಾಸಿಟಿವ್ ಪ್ರಕರಣಗಳಿದ್ದಾಗ ಆ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗುತ್ತದೆ. ಈ ವರ್ಷ ರಾಜ್ಯಾದ್ಯಂತ ಈವರೆಗೆ 66,784 ಸೊಳ್ಳೆ ನಿವಾರಕಗಳನ್ನು ವಿತರಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಆರೋಗ್ಯ ಇಲಾಖೆಯು ಸೊಳ್ಳೆಗಳ ನಿರ್ಮೂಲನೆಗೆ ಅಸ್ತಿತ್ವದಲ್ಲಿರುವ ಕ್ರೀಮ್‌ಗಳಿಗೆ ಪರ್ಯಾಯವಾಗಿ ಬೇವಿನ ಎಣ್ಣೆಯನ್ನು ಜನಪ್ರಿಯಗೊಳಿಸುತ್ತಿದೆ. ಇದು ಆರ್ಥಿಕವಾಗಿಯೂ ಜನರಿಗೆ ಅನುಕೂಲಕರವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಡೆಂಗ್ಯೂ ಪಾಸಿಟಿವ್ ರೋಗಿಗಳ ತಪಾಸಣೆ ಮತ್ತು ಅವರ ಮೇಲ್ವಿಚಾರಣೆಗಾಗಿ ಆರಂಭಿಸಲಾಗಿರುವ ಸಹಾಯವಾಣಿಗೆ ದಾಖಲೆ ಸಂಖ್ಯೆಯ 86,318 ಕರೆಗಳು ಬಂದಿವೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ದಸರಾ ಹಬ್ಬದ ನಿಮಿತ್ತ ಮೈಸೂರಿನಿಂದ ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರಿಗೆ ವಿಶೇಷ ರೈಲು
ಪ್ಯಾರೆಸಿಟಮಾಲ್, ಟೆಸ್ಟಿಂಗ್ ಕಿಟ್‌ಗಳು ಮತ್ತು ಇತರ ಔಷಧಿಗಳನ್ನು ಸಾಕಷ್ಟು ದಾಸ್ತಾನು ಇರಿಸಲಾಗಿದೆ. ಮೊದೆಲಲ್ಲ ದಿನಕ್ಕೆ 450 ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದರೆ, ಈಗ ದಿನಕ್ಕೆ 90 ಕ್ಕೆ ಇಳಿದಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಎಬಿಎಆರ್ಕೆ ನಿಧಿಯಡಿ ಔಷಧ ಖರೀದಿಸಲು ಅನುವು ಮಾಡಿಕೊಡಲಾಗಿದೆ ಎಂದೂ ಡಾ. ಷರೀಫ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ