ಹುಬ್ಬಳ್ಳಿ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರಹ್ಲಾದ್ ಜೋಶಿ ಬಳಿ ಅನ್ನದಾತರ ಮನವಿ
ಮಹದಾಯಿಗಾಗಿ ಉತ್ತರ ಕರ್ನಾಟಕದ ಅನ್ನದಾತರು ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಹೋರಾಟ ಮಾಡಿದ ಫಲವಾಗಿ ನ್ಯಾಯಾಧೀಕರಣ 2018 ರಲ್ಲಿ ಕರ್ನಾಟಕದ ಪರವಾಗಿ ಆದೇಶ ಹೊರಡಿಸಿದೆ. ಇದಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಕೊಕ್ಕೆ ಹಾಕಿದ್ದು ಅಲ್ಲದೆ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ರಾಜ್ಯಕ್ಕೆ ಕಹಿ-ಗೋವಾಕ್ಕೆ ಸಿಹಿ ಸಿಕ್ಕಿದೆ. ಇದರಿಂದಾಗಿ ಅನ್ನದಾತ ಕೇಂದ್ರ ಸಚಿವರ ಮನೆಗೆ ತೆರಳಿ ನಮ್ಮ ರಾಜ್ಯಕ್ಕೆ ಸಿಹಿ ಕೊಡಿಸಿ ಎಂದು ಮನವಿ ಕೊಟ್ಟಿದ್ದಾರೆ.
ಹುಬ್ಬಳ್ಳಿ, ಸೆ.08: ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆಗಾಗಿ ಉತ್ತರ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಯ 11 ತಾಲೂಕಿನ ರೈತರು ಸತತ 44 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದರ ಪ್ರತಿಫಲವಾಗಿ ಅನ್ನದಾತರಿಗೆ ಸಿಕ್ಕಿದ್ದು ಲಾಠಿ ಏಟು, ಜೈಲಿನ ಊಟ. ಮಹದಾಯಿ ನೀರು ಮಾತ್ರ ಸಿಕ್ಕಿಲ್ಲ. ಮಹದಾಯಿ ಯೋಜನೆಗೆ ತಕರಾರು ಎತ್ತಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಗಿರುವ ಕಾರಣ ಮುಂದಿಟ್ಟುಕೊಂಡು ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕರಿಸಿದೆ. ಆದರೆ, ಕರ್ನಾಟಕದ 435 ಎಕರೆ ಅರಣ್ಯ ಬಳಕೆಯಾಗುವ ಗೋವಾ- ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಮಂಡಳಿಯು ಷರತ್ತು ಬದ್ಧ ಒಪ್ಪಿಗೆ ನೀಡಿದೆ.
ಪ್ರಹ್ಲಾದ್ ಜೋಶಿ ಹೊರ ಬರುತ್ತಿದ್ದಂತೆಯೇ ರೈತರು ಮನವಿ
ಗೋವಾದ ಹೆಚ್ಚುವರಿ ವಿದ್ಯುತ್ ಮಾರ್ಗ ಯೋಜನೆಗೆ ರಾಜ್ಯದ ಕಾಡು ಒದಗಿಸುವ ಯೋಜನೆಗೆ ವಿರೋಧ ಇದೆ. ಹೀಗಿದ್ದರೂ ವನ್ಯಜೀವಿ ಮಂಡಳಿಯ ತೀರ್ಮಾನವು ರಾಜ್ಯಕ್ಕೆ ಕಹಿಯಾಗಿದ್ದರೆ, ಗೋವಾಕ್ಕೆ ಸಿಹಿಯಾಗಿದೆ. ಗೋವಾ ವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಡಿಸಿದ್ರೆ, ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತೆ ನಿರಾಕರಿಸಿದೆ. ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಿಸಿದ್ದರಿಂದ ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೊರ ಬರುತ್ತಿದ್ದಂತೆಯೇ ರೈತರು ಮನವಿ ಕೊಟ್ಟಿದ್ದಾರೆ.
ಇದನ್ನೂ ಓದಿ:ಮಹದಾಯಿ ಯೋಜನೆ: ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ
ಗೋವಾ ರಾಜ್ಯಕ್ಕೆ ವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗಿದೆ. ಆದ್ರೆ, ಕರ್ನಾಟಕ ಮಹದಾಯಿಗೆ ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ಯೋಜನೆಗೆ ಅನುಮತಿ ಕೊಡುವ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಲು ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿದ ಜೋಶಿ, ‘ವನ್ಯಜೀವಿ ಮಂಡಳಿ ಅನುಮತಿ ನಿರಾಕರಿಸಿಲ್ಲ. ರಾಷ್ಟ್ರೀಯ ಹುಲಿ ಪ್ರಾಧಿಕಾರ ಯಾವುದೇ ವರದಿ ಕೊಟ್ಟಿಲ್ಲ. ಹೀಗಾಗಿ ವನ್ಯಜೀವಿ ಮಂಡಳಿ ಯಾವುದೇ ನಿರ್ಧಾಕ್ಕೆ ಬಂದಿಲ್ಲ ಎಂದು ರೈತರನ್ನ ಸಮಜಾಯಿಷಿದ್ದಾರೆ. ರೈತರನ್ನ ಮನೆಯೊಳಗೆ ಕರೆದು ಮಾತುಕತೆ ನಡೆಸಿದರು. ಈ ವೇಳೆ ಮಹದಾಯಿ ಯೋಜನೆಗೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ರೈತರ ಒತ್ತಾಯಿಸಿದರು.
ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು, ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಈ ಯೋಜನೆಗೆ ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್ 14ರಂದು 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿತ್ತು. ಈ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಗೋವಾ ಫೌಂಡೇಷನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವರದಿ ನೀಡುವಂತೆ ಸಿಇಸಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಮಹದಾಯಿ ಯೋಜನೆಗೆ 2 ಲಕ್ಷ ಗಿಡ ಕತ್ತರಿಸಬೇಕಾಗುತ್ತದೆ. ಹೀಗಾಗಿ ಅಷ್ಟು ಸಲುಭವಾಗಿ ಇದಕ್ಕೆ ಅನುಮತಿ ಸಿಗಲ್ಲ.
ಇದನ್ನೂ ಓದಿ:ಮಹದಾಯಿ ಜಲ ವಿವಾದ; ಕಣಕುಂಬಿಗೆ ಕೇಂದ್ರ ತಂಡ ಭೇಟಿ, ಹೋರಾಟದ ಎಚ್ಚರಿಕೆ ನೀಡಿದ ಅಶೋಕ ಚಂದರಗಿ
ಮಹದಾಯಿ ವಿಚಾರದಲ್ಲಿ ತಪ್ಪುದಾರಿಗೆಳೆಯುವ ಕೆಲಸ ನಡೀತಿದೆ. ರಾಷ್ಟ್ರೀಯ ಹುಲಿ ಪ್ರಾಧಿಕಾರ ವರದಿ ಕೊಡದೇ ಇರುವುದರಿಂದ ವನ್ಯಜೀವಿ ಮಂಡಳಿ ಕ್ರಮ ಕೈಗೊಂಡಿಲ್ಲ. ಗೋವಾಕ್ಕೆ ಬೇಕಾದ ವಿದ್ಯುತ್ ಯೋಜನೆಗೆ ಅನುಮತಿ ಕೊಡಲಾಗಿದೆ. ಗೋವಾ ರಾಜ್ಯಕ್ಕೆ ಮಾತ್ರ ವಿದ್ಯುತ್ ಅಂತ ಅಲ್ಲ. ದಾಬೋಲ್ ನಿಂದ ಬರುವ ಮಾರ್ಗಗಳಲ್ಲಿ ಬರುವ ಪ್ರದೇಶಕ್ಕೆ ನೆರವಾಗುತ್ತೆ. ರೈತರಿಗೆ, ಸಾಮಾನ್ಯ ಜನರಿಗೆ 24 ತಾಸು ವಿದ್ಯುತ್ ಕೊಡುವ ಯೋಜನೆ ಇದಾಗಿದೆ. ಮಹದಾಯಿ ಯೋಜನೆಯಲ್ಲಿ ಸುಮಾರು 2 ಲಕ್ಷ ಗಿಡ ಕತ್ತರಿಸಬೇಕಾಗುತ್ತದೆ. ಹೀಗಾಗಿ ಅನುಮತಿ ಸಿಗೋದು ವಿಳಂಬವಾಗ್ತಿದೆ.
ರಾಜ್ಯದ ಹಿತದೃಷ್ಟಿಯಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವಿದ್ಯುತ್ ಯೋಜನೆ ಬರೀ ಗೋವಾಕ್ಕೆ ಸಂಬಂಧಿಸಿಲ್ಲ. ಇಲ್ಲಿಯೂ ಗಿಡಗಳನ್ನು ಕಡಿಯಬೇಕಾಗುತ್ತದೆ, ನಿಯಮಗಳನ್ನು ಪಾಲಿಸಲೇಬಾಕಾಗುತ್ತೆ. ವಿದ್ಯುತ್ ಯೋಜನೆ ಹೋಗವಲ್ಲಿ ಟೈಗರ್ ಕಾರಿಡಾರ್ ಇಲ್ಲ. ಆನೆ, ಟೈಗರ್ ಕಾರಿಡಾರ್ ಕಾರಣಕ್ಕೆ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳೂ ನಿಂತಿವೆ ಎಂದು ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರದ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಗೋವಾ-ತಮ್ಮಾರ್ ಯೋಜನೆ ಬಗ್ಗೆ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಇನ್ನೂ ನಿರ್ಧಾರವನ್ನೇ ಕೈಗೊಂಡಿಲ್ಲ. ಹೀಗಿರುವಾಗ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ತರಾತುರಿಯಲ್ಲಿ ನಿರ್ಧಾರವನ್ನು ಕೈಗೊಂಡಿದ್ದೇಕೆ?. ಗೋವಾ ವ್ಯಾಪ್ತಿಯಲ್ಲಿ ಅನುಮತಿ ನೀಡಿ ಕರ್ನಾಟಕದ ಅನುಮತಿ ಪಡೆದ ನಂತರ ಕಾಮಗಾರಿ ಆರಂಭಿಸಬೇಕೆಂಬ ಮಂಡಳಿಯ ಈ ನಿರ್ಧಾರ ಒತ್ತಡದ ತಂತ್ರ ಎನಿಸುತ್ತಿದೆ. ಅಲ್ಲದೇ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಗೋವಾ ರಾಜ್ಯದ ಈ ಯೋಜನೆಯನ್ನು ನಮ್ಮ ರಾಜ್ಯದ ನಾಯಕರು ಪಕ್ಷಭೇದ ಮರೆತು ವಿರೋಧಿಸಬೇಕಿದೆ. ಅಂದಾಗ ಮಾತ್ರ ಮಹದಾಯಿ ಯೋಜನೆಗೆ ನ್ಯಾಯ ಸಿಗಲು ಸಾಧ್ಯ ಆಗುತ್ತದೆ ಎಂಬುದು ರೈತರ ಒತ್ತಾಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ