ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಬೇಬಿ ವರ್ಮರ್, ಸಿಬ್ಬಂದಿ ಕೊರತೆ: ಸಾವಿಗೀಡಾಗುತ್ತಿವೆ ನವಜಾತ ಶಿಶುಗಳು
ಹುಬ್ಬಳ್ಳಿಯಲ್ಲಿನ ಕಿಮ್ಸ್ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜನರು ಇದೇ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ, ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಸಾವಿಗೀಡಾಗುತ್ತಿವೆ. ಬೇಬಿ ವಾರ್ಮರ್ಗಳ ಕೊರತೆ ಇದ್ದು, ಒಂದು ಬೇಬಿ ವರ್ಮರ್ ಮೂಲಕ ಎರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ಕೊರತೆ ಜೊತೆಗೆ ಹತ್ತಾರು ಸೌಲಭ್ಯಗಳ ಕೂಡ ಇದೆ.

ಹುಬ್ಬಳ್ಳಿ, ಆಗಸ್ಟ್ 24: ಹುಬ್ಬಳ್ಳಿಯ ಕಿಮ್ಸ್ (Hubballi KIMS) ನಲ್ಲಿ ರೋಗದಿಂದ ಬಳಲುವ ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರು (Doctors) ಮತ್ತು ಬೇಬಿ ವರ್ಮರ್ಗಳ ಕೊರತೆ ಇದೆ. ಕಿಮ್ಸ್ನಲ್ಲಿ 240 ಕ್ಕೂ ಹೆಚ್ಚು ಬೇಬಿ ವರ್ಮರ್ಗಳ ಅವಶ್ಯಕತೆ ಇದೆ. ಆದರೆ, ಸದ್ಯ ಕೇವಲ 110 ಬೇಬಿ ವರ್ಮರ್ಗಳು ಮಾತ್ರ ಇವೆ. ನವಜಾತ ಶಿಶುಗಳನ್ನು ಎನ್ಐಸಿಯು, ಎಸ್ಎನ್ಸಿಯುಗೆ ದಾಖಲಿಸಿದರೇ, ಒಂದೇ ಬೇಬಿ ವರ್ಮರ್ ಮೂಲಕ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ. ಒಂದು ಬೇಬಿ ವರ್ಮರ್ನಲ್ಲಿ ಒಂದೇ ಮಗುವಿಗೆ ಚಿಕಿತ್ಸೆ ನೀಡಬೇಕು ಎಂಬ ನಿಯಮವಿದ್ದರೂ ಕೂಡ, ಬೇಬಿ ವರ್ಮರ್ಗಳ ಕೊರತೆಯಿಂದ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಿಮ್ಸ್ಗೆ ಭೇಟಿ ನೀಡಿದಾಗ, ಒಂದೇ ಬೇಬಿ ವರ್ಮರ್ನಲ್ಲಿ ಎರಡೆರಡು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಕಿಮ್ಸ್ನಲ್ಲಿ ಪ್ರತಿ ತಿಂಗಳು ಸಾವಿರಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಹುಟ್ಟುವಾಗಲೇ ಕೆಲ ಮಕ್ಕಳು ಅನೇಕ ತೊಂದರೆಯಿಂದ ಹುಟ್ಟುವದರಿಂದ, ಅವುಗಳನ್ನು ನವಜಾತ ಶಿಶುಗಳನ್ನು ತೀರ್ವ ನಿಘಾ ಘಟಕದಲ್ಲಿ ಕೆಲ ದಿನಗಳ ಕಾಲ ಇಟ್ಟು, ಚಿಕಿತ್ಸೆ ನೀಡಲಾಗುತ್ತದೆ. ನಂತರ ಹೆತ್ತವರಿಗೆ ನೀಡಲಾಗುತ್ತದೆ. ಚಿಕಿತ್ಸೆ ನೀಡಿದ ನಂತರವೂ ಕೂಡ ಅನೇಕ ಮಕ್ಕಳು ಮೃತಪಟ್ಟಿವೆ. ಕಳೆದ ವರ್ಷ ಎಸ್ಎನ್ಸಿಯು, ಎನ್ಸಿಯು ಸೇರಿದಂತೆ ಮಕ್ಕಳ ತುರ್ತು ಆರೈಕೆ ಘಟಕಗಳಿಗೆ ಐದು ಸಾವಿರ ಮಕ್ಕಳು ದಾಖಲಾಗಿದ್ದವು. ಅವುಗಳಲ್ಲಿ 454 ಮಕ್ಕಳು ಮೃತಪಟ್ಟಿವೆ. ಈ ವರ್ಷ ಇಲ್ಲಿಯವರಗೆ 2794 ಮಕ್ಕಳು ದಾಖಲಾಗಿದ್ದರೇ, 291 ಮಕ್ಕಳು ಮೃತಪಟ್ಟಿವೆ. ಇದಕ್ಕೆ ಕಾರಣ, ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ಕೊರತೆ ಕಾರಣ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಕೈಗಾರಿಕರಣಕ್ಕೆ ಶುಕ್ರದೆಸೆ: 28 ಎಕರೆ ವಿಶೇಷ ಆರ್ಥಿಕ ವಲಯಕ್ಕೆ ಗೆಜೆಟ್
ಸೂಕ್ತ ಚಿಕಿತ್ಸೆ ನೀಡಲು ಬೇಬಿ ವರ್ಮರ್ಗಳು ಇರಬೇಕು. ಆದರೆ, ಕಿಮ್ಸ್ನಲ್ಲಿ ಬೇಡಿಕೆಗಿಂತ ಕಡಿಮೆ ಬೇಬಿ ವರ್ಮರ್ಗಳ ಕೊರತೆ ಇದೆ. ವೈದ್ಯಕೀಯ ಸಿಬ್ಬಂದಿ ಕೂರತೆ ಕೂಡ ಇದೆ. ಎಸ್ಎನ್ಸಿಯುನಲ್ಲಿಯೇ ನಾಲ್ವರು ತಜ್ಞ ವೈದ್ಯರು ಇರಬೇಕು. ಆದರೆ, ಓರ್ವ ವೈದ್ಯ ಮಾತ್ರ ಇದ್ದಾರೆ. ಐವರು ಸ್ನಾತಕೋತ್ತರ ವಿದ್ಯಾರ್ಥಿಗಳು ಇರಬೇಕು. ಆದರೆ, ಓರ್ವ ಸ್ನಾತಕೋತ್ತರ ವಿದ್ಯಾರ್ಥಿ ಇದ್ದಾರೆ . ಇನ್ನು, ನರ್ಸಿಂಗ್ ಸಿಬ್ಬಂದಿ ಕೂರತೆ ಕೂಡ ಇದೆ. ಈ ಎಲ್ಲ ಕಾರಣಗಳಿಂದ ನವಜಾತ ಶಿಶುಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿವೆ. ಇನ್ನು, ಕಿಮ್ಸ್ನಲ್ಲಿ ಬೇಬಿ ವರ್ಮರ್ಗಳ ಕೊರತೆ ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಕಿಮ್ಸನ್ನ ಮುಖ್ಯಸ್ಥರು ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರಂತೆ. ಆದರೆ, ಇಲ್ಲಿವರಗೆ ಸರ್ಕಾರ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಲ್ಲ.
ಹುಬ್ಬಳ್ಳಿ ಕಿಮ್ಸ್ ಗೆ ಬೇಕಾದ ಸವಲತ್ತುಗಳನ್ನು ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ನವಜಾತ ಶಿಶುಗಳ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಲಕರಣೆಗಳನ್ನು ಆದಷ್ಟು ಬೇಗನೆ ಸರಬರಾಜು ಮಾಡಿ, ಮಕ್ಕಳ ಜೀವ ಉಳಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Sun, 24 August 25