ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್: ಷರತ್ತುಗಳು ಅನ್ವಯ
ಕಳೆದ ವರ್ಷ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಯಾಗಿತ್ತು. ಇದೀಗ ಹುಬ್ಬಳ್ಳಿ-ಧಾರವಾಡ ಪಾಲಿಕೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದು, ಕೆಲ ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಹುಬ್ಬಳ್ಳಿ ಗಣೇಶ ಉತ್ಸವ ಮಂಡಳಿಗಳಿಗೆ ಪೊಲೀಸ್ ಕಮೀಷನರ್ ಶಶಿಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಹುಬ್ಬಳ್ಳಿ, ಸೆ.03: ವಿವಾದಿತ ಹುಬ್ಬಳ್ಳಿಯ ಈದ್ಗಾ ಮೈದಾನ(Hubli Idgah Maidan)ದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಅನುಮತಿ ನೀಡಿದೆ. ಈ ಕುರಿತು ಹುಬ್ಬಳ್ಳಿಯ ಗಜಾನನ ಉತ್ಸವ ಮಹಾ ಮಂಡಳಿಗೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ನೀಡಿದ್ದು, ಮೂರು ದಿನಗಳ ಕಾಲ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಇನ್ನು ಕಳೆದ ವರ್ಷ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಯಾಗಿತ್ತು. ಈ ವರ್ಷ ಪ್ರತಿಷ್ಠಾಪನೆಗೆ 4 ರಿಂದ 5 ಸಂಘಟನೆಗಳು ಅರ್ಜಿ ಸಲ್ಲಿಸಿತ್ತು. ಈ ಹಿನ್ನಲೆ ಪಾಲಿಕೆ ಕೆಲ ಷರತ್ತು ವಿಧಿಸಿ 3 ದಿನಗಳ ಕಾಲ ಅನುಮತಿ ನೀಡಿದೆ.
ಮೊದಲು ಮನುಷ್ಯ ಆಗಬೇಕು, ಆ ಮೇಲೆ ಹಿಂದೂ- ಮೂರು ಸಾವಿರ ಮಠದ ಸ್ವಾಮೀಜಿ
ಈ ಕುರಿತು ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದ ಮೂರು ಸಾವಿರ ಮಠದ ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿ, ‘ ನಂಬಿಕೆ ಆಧಾರದ ಮೇಲೆ ಗಣೇಶ ಉತ್ಸವ ಆಚರಣೆ ಮಾಡೋಣ. ಮೊದಲು ಮನುಷ್ಯ ಆಗಬೇಕು, ಆ ಮೇಲೆ ಹಿಂದೂ ಆಗಬೇಕು. ಮೊದಲು ಮಾನವ, ಆ ಮೇಲೆ ಮುಸ್ಲಿಂ, ಶಿಖ್ ಆಗಬೇಕು ಎಂದರು. ನಾವೆಲ್ಲರೂ ಶಾಂತಿಯಿಂದ ಹಬ್ಬ ಮಾಡೋಣ. ಕಳೆದ ನಾಲ್ಕು ತಿಂಗಳ ಹಿಂದೆ ಹು-ಧಾ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಇರಲಿಲ್ಲ. ಆ ಸಮಯದಲ್ಲಿ ಹುಬ್ಬಳ್ಳಿ ಧಾರವಾಡಕ್ಕೆ ಕೆಟ್ಟ ಹೆಸರು ಬಂದಿತ್ತು. ಇದೀಗ ಹೊಸ ಪೊಲೀಸ್ ಕಮೀಷನರ್ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಫ್ಲೈ ಓವರ್ಗಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಕಾಂಪೌಂಡ್ ತೆರವಿಗೆ ಪತ್ರ: ಮತ್ತೆ ವಿವಾದ ಮುನ್ನಲೆಗೆ?
ಗಣೇಶ ಉತ್ಸವ ಮಂಡಳಿಗಳಿಗೆ ಪೊಲೀಸ್ ಕಮೀಷನರ್ ಖಡಕ್ ವಾರ್ನ್
ಇನ್ನು ಹುಬ್ಬಳ್ಳಿ ಗಣೇಶ ಉತ್ಸವ ಮಂಡಳಿಗಳಿಗೆ ಖಡಕ್ ವಾರ್ನ್ ಕೊಟ್ಟ ಪೊಲೀಸ್ ಕಮೀಷನರ್ ಶಶಿಕುಮಾರ್, ‘ ರಾತ್ರಿ 10 ಗಂಟೆಗೆ ಡಿಜೆ ಬಂದ್ ಆಗಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವೇ ಇದೆ. ಹೀಗಾಗಿ 10 ಗಂಟೆಗೆ ಡಿಜೆ ಬಂದ್ ಆಗಬೇಕು. ಹುಬ್ಬಳ್ಳಿ-ಧಾರವಾಡದ ಗಣೇಶ ಉತ್ಸವಕ್ಕೆ, ಹೆಸರಿಗೆ ಆ ಇತಿಹಾಸ ಮತ್ತೆ ಮರುಕಳಿಸಬೇಕು. ಹೀಗಾಗಿ ಹತ್ತು ಗಂಟೆಯ ನಂತರ ನಿಮ್ಮ ಮನೆಯ ಹೆಣ್ಣು ಮಕ್ಕಳ ಜೊತೆ ಹಬ್ಬ ಮಾಡಿ. ಯಾವುದೇ ಗಲಾಟೆ ಮಾಡಬಾರದು. ನೀವು ಚೂರಿ, ಚಾಕು ಇಟ್ಟುಕೊಂಡು ಓಡಾಡತೀವಿ. ಗ್ಯಾಂಗ್ ಕಟ್ಡಕೊಂಡ ಸುತ್ತುತ್ತೇವೆ ಎಂದರೆ, ನಾವು ನಿಮ್ಮನ್ನು ಎಲ್ಲಿ ಕೂರಿಸಬೇಕು ಅಲ್ಲಿ ಕೂರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ