
ಹುಬ್ಬಳ್ಳಿ, ನವೆಂಬರ್ 03: ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಎಂಬುವುದು ಮನುಕುಲಕ್ಕೆ ಎಷ್ಟು ಪೂರಕವಾಗಿದೆಯೋ, ಅಷ್ಟೇ ಮಾರಕವೂ ಆಗಿದೆ. ಅನೇಕರು ಇದೀಗ ಎಐ ಮೂಲಕ ವಿಡಿಯೋಗಳನ್ನು ಮಾಡುತ್ತಿದ್ದಾರೆ. ನಮ್ಮ ನಡುವೆ ಇಲ್ಲದಿರುವವರು ಕೂಡ ಇದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೇ ಎ.ಐ ವಿಡಿಯೋಗಳು ಇದೀಗ ಉತ್ತರ ಕರ್ನಾಟಕದ ಸುಪ್ರಸಿದ್ಧ ಸಿದ್ಧಾರೂಢರ ಮಠದ ಇತಿಹಾಸಕ್ಕೆ, ಮಹಾನ ಸತ್ಪುರುಷರ ಗೌರವಕ್ಕೆ ಚ್ಯುತಿಯುಂಟು ಮಾಡಿದೆ. ಇದರಿಂದಾಗಿ ಮಠದ ಟ್ರಸ್ಟ್ ಎಐ ಬಳಸಿ ವಿಡಿಯೋ ಮಾರುವವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ.
ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಐ ಫೋಟೋ ಹಾಗೂ ವಿಡಿಯೋಗಳ ಟ್ರೆಂಡ್ ಶುರುವಾಗಿದೆ. ಎಐ ಬಳಸಿ ಅನೇಕರು ಅನೇಕ ರೀತಿಯಲ್ಲಿ ಫೋಟೋ, ವಿಡಿಯೋ ಸೃಷ್ಟಿಸುತ್ತಿದ್ದಾರೆ. ಎಐ ಅನೇಕ ರೀತಿಯಿಂದ ಜನರಿಗೆ ಪ್ರಯೋಜನವಾಗುತ್ತಿದೆ. ಅಷ್ಟೇ ಅದರಿಂದ ತೊಂದರೆ ಕೂಡ ಆಗುತ್ತಿದೆ. ಇದು ನೈಜ್ಯ ಘಟನೆಗಳಿಗೆ ಹಾಗೂ ಐತಿಹಾಸಿಕ ಪರಂಪರೆಗೆ ಧಕ್ಕೆಯನ್ನುಂಟು ಮಾಡುತ್ತಿವೆ ಎಂದು ಹುಬ್ಬಳ್ಳಿಯ ಸಿದ್ಧಾರೂಢರ ಮಠ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬರದ ನಡುವೆಯೂ ಈರುಳ್ಳಿ ಬೆಳೆದು ಕೋಟಿ ಆದಾಯ! ಧಾರವಾಡದ ರೈತ ಕುಟುಂಬದ ಯಶೋಗಾಥೆ
ಹುಬ್ಬಳ್ಳಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಅಂತಲೇ ಪ್ರಸಿದ್ಧಿ ಪಡೆದಿರುವುದು ಸಿದ್ಧಾರೂಢ ಮಠ ಮತ್ತು ಸದ್ಗುರು ಸಿದ್ಧಾರೂಢರು. ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಆಧಾರ ಎಂಬುವಂತ ಭಕ್ತಿ ಮಾತುಗಳನ್ನು ಕೇಳಿದ್ದೇವೆ. ರಾಜ್ಯ ಮಾತ್ರವಲ್ಲ, ದೇಶದ ಹಲವಡೆ ಸಿದ್ದಾರೂಢರ ಭಕ್ತರಿದ್ದಾರೆ. ಸಿದ್ದಾರೂಢರನ್ನು ದೇವರಂತೆ ಪೂಜಿಸುವ ದೊಡ್ಡ ಭಕ್ತ ಸಮೂಹವಿದೆ. ಆದರೆ ಇದೀಗ ಎಐ ಬಳಕೆಯ ಪ್ರಮಾಣ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ಗುರು ಶ್ರೀ ಸಿದ್ದಾರೂಢರ ಅಸಲಿ ಚಿತ್ರಗಳನ್ನು ಹಾಗೂ ಮೂಲ ಮೂರ್ತಿಗೆ ಧಕ್ಕೆ ತರುವಂತಹ ವಿಡಿಯೋ ನೋಡಿ ಅಜ್ಜನ ಅಪಾರ ಭಕ್ತ ವೃಂದಕ್ಕೆ ನೋವಾಗಿದೆ.
ಎಐನಿಂದ, ಸಿದ್ಧಾರೂಢ ಮಠ ಮತ್ತು ಸಿದ್ದಾರೂಢರ ಭವ್ಯ ಇತಿಹಾಸ, ಪರಂಪರೆಗೆ ಧಕ್ಕೆ ತರುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಸಿದ್ಧಾರೂಢರ ಮುಖದಲ್ಲಿ ನಟನೆಯ ನವರಸ ತೋರಿಸುವುದು, ಹಬ್ಬದ ಶುಭಾಶಯ ಹಾಗೂ ಇತರ ಸಂದೇಶ ಹೇಳಿಸಿರುವ ಅನೇಕ ವಿಡಿಯೋಗಳನ್ನು ಮಾಡಿ ಹರಿಬಿಡಲಾಗಿದೆ. ನೈಜ ಜೀವನದಲ್ಲಿ 14 ಭಾಷೆ ಮಾತನಾಡುತ್ತಿದ್ದ ಅಜ್ಜನನ್ನು AI ವಿಡಿಯೋದಲ್ಲಿ ಮಾತನಾಡುವಾಗ ತೊದಲುವ ಹಾಗೆ ತೋರಿಸಿರುವುದು, ಇತರೆ ಅನೇಕ ವಿಡಿಯೊಗಳು ಅಜ್ಜನ ಚರಿತ್ರೆಯಲ್ಲಿ ವಿವರಿಸಿದ ಅಂಶಗಳಿಗೆ ಧಕ್ಕೆ ತರುತ್ತಿವೆ. ನೈಜ ಅಜ್ಜನ ಭಕ್ತರು ಹಾಗೂ ಅಜ್ಜನ ಚರಿತ್ರೆ ಓದಿ ತಿಳಿದುಕೊಂಡವರು ಈ ರೀತಿಯ AI ಎಡಿಟ್ ಮಾಡುವುದಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಯಾರು ಕೂಡ ಮೂಲ ಭಾವಚಿತ್ರ ಇಟ್ಟುಕೊಂಡು ಎಐ ವಿಡಿಯೋ ಮಾಡಬಾರದು. ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ರಸ್ಟ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸರ್ಕಾರಕ್ಕೆ ಜೈನಮುನಿ 10 ದಿನಗಳ ಡೆಡ್‌ಲೈನ್: ಜೈನ ಅಭಿವೃದ್ಧಿ ನಿಗಮ ಸ್ಥಾಪಿಸದಿದ್ದರೆ ಸುವರ್ಣಸೌಧ ಮುಂದೆ ದೇಹತ್ಯಾಗ ಎಚ್ಚರಿಕೆ
ಇನ್ನು ಭಕ್ತರು ಈ ತರಹ ವಿಡಿಯೋ ಕಂಡಲ್ಲಿ ಅಡ್ಮಿನ್ಗಳಿಗೆ ವಿಡಿಯೋ ಅಥವಾ ಫೋಟೋ ತೆಗೆದು ಹಾಕಲು ಹೇಳಲಾಗಿದೆ. ಇದೆ ರೀತಿ ಭಕ್ತರು ಹಾಗೂ ಅಜ್ಜನ ಇತರೆ ಮಠದ ಸ್ವಾಮಿಗಳು ನಿಮ್ಮ ಜೊತೆ ಇರುವ ಹಾಗೂ ನಿಮ್ಮ ಸಾಮಾಜಿಕ ಜಾಲತಾಣ ಪುಟ ನೋಡಿಕೊಳ್ಳುವ ಹುಡುಗರಿಗೆ ತಿಳಿ ಹೇಳಿ AI ವಿಡಿಯೋ ಹಾಗೂ ಫೋಟೋ ಡಿಲೀಟ್ ಮಾಡಿಸಿ ಎಂದು ಟ್ರಸ್ಟ್ ಕಮಿಟಿ ಆದೇಶ ಹೊರಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Tue, 3 November 26