ಬೆಂಗಳೂರು/ಹಾಸನ, (ಡಿಸೆಂಬರ್ .1): ಕರ್ನಾಟಕ ಬಿಜೆಪಿಯಲ್ಲಿ ಯತ್ನಾಳ್, ವಿಜಯೇಂದ್ರ ಬಣ ರಾಜಕೀಯ ಜೋರಾಗಿದ್ದರೆ, ಇತ್ತ ಇದೀಗ ಕಾಂಗ್ರೆಸ್ನಲ್ಲೂ ಸಹ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಡುವಿನ ಮುಸುಕಿನ ಗುದ್ದಾಟ ಶುರುವಾದಂತಿದೆ. ಹೌದು…ಹಾಸನ ಸಮಾವೇಶದ ವಿಚಾರವಾಗಿ ಸಿಎಂ -ಡಿಸಿಎಂ ಬಣಗಳ ನಡುವೆ ಜಂಗೀಕುಸ್ತಿ ಶುರುವಾಗಿದೆ. ಶೋಷಿತ ವರ್ಗಗಳು ಒಕ್ಕೂಟ ಇದೇ ಡಿಸೆಂಬರ್ 5ರಂದು ಹಾಸನದಲ್ಲಿ ಸಮಾವೇಶ ಮಾಡಲು ಮಾಡಲು ತೀರ್ಮಾನಿಸಿತ್ತು. ಆದ್ರೆ, ಇದಕ್ಕೆ ಡಿಕೆ ಶಿವಕುಮಾರ್ ಬಣ ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷದ ವೇದಿಯಲ್ಲೇ ನಡೆಯಬೇಕೆಂದು ಹೈಕಮಾಂಡ್ಗೆ ಪತ್ರ ಬರೆಯಲಾಗಿದೆ. ಇದರ ಬೆನ್ನಲ್ಲೇ ಇದೀಗ ಹೈಕಮಾಂಡ್, ಶೋಷಿತ ವರ್ಗಗಳು ಒಕ್ಕೂಟ ಹಾಗೂ ಪಕ್ಷದ ಜಂಟಿ ಆಶ್ರಯದಲ್ಲಿ ಸಮಾವೇಶ ಮಾಡುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಅಲರ್ಟ್ ಆದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮಾವೇಶವನ್ನು ಸಮಾವೇಶವನ್ನು ಟೇಕ್ ಓವರ್ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸಿಎಂ, ಕಾಂಗ್ರೆಸ್ ಗ್ಯಾರಂಟಿ ಎಂದು ಬದಲಿಸಿದ್ದಾರೆ.
ಮುಡಾ ಹಗರಣ ಪ್ರಕರಣದ ಆರೋಪಕ್ಕೆ ವಿರೋಧಿಗಳಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಮುಡಾ ಹಗರಣದಲ್ಲಿ ಸಿಎಂ ಸ್ವಾಭಿಮಾನಕ್ಕೆ ಧಕ್ಕೆ ಎಂದು ಸಿಎಂ ಸಿದ್ದರಾಮಯ್ಯ ಆಪ್ತರು ಸಮಾವೇಶ ನಡೆಸಲು ನಿರ್ಧರಿಸಿದ್ದರು. ಆದ್ರೆ, ಇದಕ್ಕೆ ಸ್ವಪಕ್ಷದಲ್ಲೇ ಆಕ್ಷೇಪಗಳು ವ್ಯಕ್ತವಾಗಿದ್ದು, ಪಕ್ಷದ ವೇದಿಕೆಯಲ್ಲೇ ಸಮಾವೇಶ ನಡೆಯಬೇಕೆಂಬ ಕೂಗುಗಳು ಕೇಳಿಬಂದಿದ್ದು, ಈ ಕೂಗು ಹೈಕಮಾಂಡ್ಗೂ ಕೇಳಿಸಿದೆ. ಹೀಗಾಗಿ ಹೈಕಮಾಂಡ್ ಪಕ್ಷವನ್ನೂ ಸಹ ಸೇರಿಸಿಕೊಕೊಂಡು ಈ ಸಮಾವೇಶ ಮಾಡಬೇಕೆಂದು ಸೂಚನೆ ನೀಡಿದೆ. ಹೀಗಾಗಿ ಸಮಾವೇಶದ ಕಂಟ್ರೋಲ್ ತೆಗೆದುಕೊಂಡ ಡಿಕೆ ಶಿವಕುಮಾರ್ , ಹಳೇ ಮೈಸೂರು ಭಾಗದ ಶಾಸಕರ ಸಭೆ ನಡೆಸಿ ಸಮಾವೇಶದ ರೂಪುರೇಷೆಗಳನ್ನೇ ಬದಲಿಸಿದ್ದಾರೆ.
ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸಿಎಂ, ಕಾಂಗ್ರೆಸ್ ಗ್ಯಾರಂಟಿ ಎಂದು ಬದಲಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಣಕ್ಕೆ ನಿರಾಸೆಯಾಗಿದೆ.
ಇದನ್ನೂ ಓದಿ: ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ತಂತ್ರ: ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಮಾವೇಶ
ಕಾಂಗ್ರೆಸ್ ನೇತೃತ್ವದಲ್ಲಿ ಸಮಾವೇಶ ಆಯೋಜನೆಗೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ನೇತೃತ್ವದಲ್ಲಿಇಂದು(ಡಿಸೆಂಬರ್ 01) ಪೂರ್ವ ಸಿದ್ಧತಾ ಸಭೆ ನಡೆಸಿದ್ರು. ಆದರೆ, ಹಾಸನ ಸಮಾವೇಶದ ನೇತೃತ್ವವಹಿಸಿದ ಯಾವೊಬ್ಬ ಸಚಿವರು ಸಹ ಇದರಲ್ಲಿ ಪಾಲ್ಗೊಳ್ಳದಿರುವುದು ನಾನಾ ಅರ್ಥಗಳಿಗೆ ಕಾರಣವಾಗಿದೆ. ಡಿಕೆ ಇಲ್ಲಿ ಸಭೆ ನಡೆಸ್ತಿದ್ರೆ, ಅತ್ತ ಸಿಎಂ ಆಪ್ತ ಸಚಿವರು ಮತ್ತು ಹಾಸನ ಸಮಾವೇಶದ ಜವಾಬ್ದಾರಿ ಹೊತ್ತ ಸಚಿವರೆಲ್ಲ ಮೈಸೂರಿನಲ್ಲಿ ಸಮಾವೇಶದ ಪೂರ್ವ ಸಿದ್ಧತಾ ಸಭೆ ನಡೆಸಿದರು. ಆದರೆ, ಡಿಕೆ ಮಾತ್ರ ತನ್ನ ನೇತೃತ್ವದಲ್ಲೇ ಹಾಸನ ಸಮಾವೇಶ ನಡೆಯುತ್ತೆ ಎಂದು ಕಡ್ಡಿ ಮುರಿದಂತೆ ಹೇಳಿದಾರೆ. ಹೀಗಾಗಿ ಹಾಸನ ಸಮಾವೇಶ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಸಿದೆ.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಯಾವುದೇ ಗೊಂದಲವಿಲ್ಲ, ಪಕ್ಷದ ಅಡಿಯಲ್ಲಿ ಹಾಸನ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸಿಎಂ, ಸಮ್ಮಿಶ್ರ ಸರ್ಕಾರದ ಸಿಎಂ ಅಲ್ಲ. ಕೆಲವರು ವೈಯಕ್ತಿಕವಾಗಿ ಮಾತಾಡಬಹುದು, ಒಂದೇ ಪಕ್ಷ, ಒಂದೇ ಚಿಹ್ನೆ ಸಮಾವೇಶದ ಬಗ್ಗೆ ಎಐಸಿಸಿ ನಾಯಕರ ಜೊತೆಗೂ ಸಹ ಮಾತನಾಡಿದ್ದೇವೆ. ಜನರ ಹಿತಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರದ ಬಗ್ಗೆ ಸುಳ್ಳು ಆರೋಪ ಮಾಡಿದ್ದಕ್ಕೆ ಜನ ಉತ್ತರ ಕೊಟ್ಟಿದ್ದಾರೆ. ನನ್ನ ನೇತೃತ್ವದಲ್ಲೇ ಹಾಸನ ಸಮಾವೇಶ ಮಾಡ್ತಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲೂ ಇದೇ ರೀತಿಯ ಕಾರ್ಯಕ್ರಮ ಮಾಡಲಿದ್ದೇನೆ. ಇದಕ್ಕೆ ಎಐಸಿಸಿ ನಾಯಕರು ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್ ಯಾವಾಗಲೂ ಒಂದೇ ಪಾರ್ಟಿ, ಸಿಎಂ ಜತೆ ಮಾತಾಡಿದ್ದೇನೆ ಎಂದು ಕಡ್ಡಿ ಮುರಿದಂತೆ ಹೇಳಿದರು.
ಹೌದು…ಈ ಹಿಂದೆ ಸಿಎಂ ಸ್ಥಾನ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಣ ರಾಜಕೀಯ ಶುರುವಾಗಿತ್ತು. ಈ ಎರಡೂ ಬಣಗಳಿಂದ ಬಹಿರಂವಾಗಿಯೇ ಆರೋಪ ಪ್ರತ್ಯಾರೋಪಗಳು ನಡೆದಿದ್ದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು.ಕೊನೆಗೆ ಇದು ತಾರಕಕ್ಕೇರುತ್ತಿದ್ದಂತೆಯೇ ಹೈಕಮಾಂಡ್ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸಭೆ ನಡೆಸಿತ್ತು. ಅಲ್ಲದೇ ಯಾವುದೇ ಕಾರಣಕ್ಕೂ ಬಹಿರಂಗ ಹೇಳಿಕೆ ನೀಡದಂತೆ ಎರಡೂ ಬಣಕ್ಕೂ ಎಚ್ಚರಿಕೆ ಸಂದೇಶ ರವಾನಿಸಿತ್ತು. ಆದ್ರೆ, ಇದೀಗ ಹಾಸನ ಸಮಾವೇಶದ ಮೂಲಕ ಮತ್ತೆ ಬಣ ರಾಜಕೀಯ ಶುರುವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sun, 1 December 24