ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಬೇಡ ಎನ್ನಲಾಗುತ್ತದಾ? ಅಣ್ಣನ ಸ್ಥಾನದ ಮೇಲೆಯೇ ಕಣ್ಣಿಟ್ಟರೇ ಡಿಕೆ ಸುರೇಶ್!
ಕೆಪಿಸಿಸಿಯ ಮುಂದಿನ ಅಧ್ಯಕ್ಷರಾಗಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಆಯ್ಕೆಯಾಗಬಹುದು ಎಂಬ ವದಂತಿಗಳ ಬೆನ್ನಲ್ಲೇ ಅವರು ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ, ಅವರು ನೀಡಿದ ಹೇಳಿಕೆಯಿಂದ ಹುದ್ದೆಯ ಮೇಲೆ ಅವರಿಗೆ ಆಕಾಂಕ್ಷೆ ಇರುವ ಅನುಮಾನ ಮೂಡಿದೆ. ಹಾಗಾದರೆ ಅವರು ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ಬೆಂಗಳೂರು, ಮೇ 31: ಕೆಪಿಸಿಸಿಯ ಮುಂದಿನ ಅಧ್ಯಕ್ಷರನ್ನಾಗಿ (KPCC President) ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ನೇಮಕವಾಗುವ ಸಾಧ್ಯತೆ ಇದೆ ಎಂಬ ವದಂತಿಗಳ ಬಗ್ಗೆ ಇದೀಗ ಅವರೇ ಪ್ರತಿಕ್ರಿಯಿಸಿದ್ದಾರೆ. ಆ ಬಗ್ಗೆ ನನಗೆ ಮಾಹಿತಿಯಿಲ್ಲ. ಮಾಧ್ಯಮಗಳಲ್ಲಿ ವಿಶ್ಲೇಷಣೆ ಆಗಬಹುದು. ಯಾರೋ ಬೇರೆ ಕಾರಣಕ್ಕೆ ಹೇಳಬಹುದು. ಈಗ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಹಾಗೆಂದು ಮುಂದಿನ ದಿನಗಳಲ್ಲಿ ಕೊಟ್ಟರೆ ಬೇಡ ಎನ್ನಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಎಸ್ಟಿ ನಿಗಮದ ಅಧಿಕಾರಿ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸಿಬಿಐ ತನಿಖೆ ಬಿಟ್ಟು ಬೇರೆ ಕೇಳಲ್ಲ. ಕರ್ನಾಟಕ ಪೊಲೀಸ್ ಸಮರ್ಥರಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಅವರಿಗೆ ಅನುಕೂಲವಾಗಬೇಕು ಎಂದು ಹಾಗೆ ಆಗ್ರಹಿಸುತ್ತಿರಬಹುದು ಎಂದರು.
ಈ ಹಿಂದೆ ನಾಲ್ಕೈದು ಪ್ರಕರಣ ಸಿಬಿಐಗೆ ಕೊಟ್ಟಿದ್ದೆವು. ಯಾವುದೂ ಋಜುವಾತು ಆಗಲಿಲ್ಲ. ಎಲ್ಲದಕ್ಕೂ ರಾಜೀನಾಮೆಗೆ ಆಗ್ರಹಿಸುತ್ತಿರುತ್ತಾರೆ. ಹಾಗಂತ ಎಲ್ಲದಕ್ಕೂ ರಾಜೀನಾಮೆ ಕೊಡಲು ಆಗುತ್ತದೆಯೇ? ಸಿಎಂ ಈಗಾಗಲೇ ತನಿಖೆಗೆ ಆದೇಶ ಮಾಡಿದ್ದಾರೆ. ತಪ್ಪಿದ್ದರೆ ನಾಗೇಂದ್ರ ತಲೆಬಾಗಬೇಕು. ಆದರೆ, ನಾಗೇಂದ್ರ ಅಂತಹ ವ್ಯಕ್ತಿ ಅಲ್ಲ. ಪರ್ಸನಲ್ ಅಕೌಂಟಿಗೆ ದುಡ್ಡು ಹೋಗುತ್ತದೆ ಅಂದರೆ ಅದು ಹೇಗೆ ಸಾಧ್ಯ ಹೇಳಿ? ತನಿಖೆಗೆ ಆದೇಶ ಮಾಡಲಾಗಿದೆ. ತನಿಖೆ ನಡೆಯಲಿ, ಆಮೇಲೆ ಸತ್ಯಾಂಶ ಹೊರಬರಲಿದೆ ಎಂದರು.
ಬಿಜೆಪಿ 6ನೇ ತಾರೀಕು ಡೆಡ್ ಲೈನ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಹಾಗೆ ಮಾಡಲೇಬೇಕು, ಮಾಡೋದು ಒಳ್ಳೆಯದೇ ಎಂದರು.
‘ಲೋಕಸಭೆ ಚುನಾವಣೆ ಇದೇ ಮೊದಲಲ್ಲ’
ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ನಡೆಯುತ್ತಿರುವ ವಿವಿಧ ವಿಶ್ಲೇಷಣೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಸಾಕಷ್ಟು ಚುನಾವಣೆ ಎದುರಿಸಿದ್ದೇನೆ. ಈ ಚುನಾವಣೆ ಕೂಡಾ ನಮ್ಮ ಕಾರ್ಯಕರ್ತರು ನಡೆಸಿಕೊಟ್ಟಿದ್ದಾರೆ. ಗೆಲುವಿನ ವಿಶ್ವಾಸ ಇದೆ. ಆದರೂ ಮಾಧ್ಯಮಗಳು, ಬಿಜೆಪಿ, ಜೆಡಿಎಸ್ನವರು ಎಲ್ಲಾ ಒಂದೊಂದು ರೀತಿ ಮಾತನಾಡುತ್ತಾರೆ. ಜನರ ತೀರ್ಪು ಮತ ಪೆಟ್ಟಿಗೆಯಲ್ಲಿ ಗಟ್ಟಿ ಇದೆ. ಬಿಜೆಪಿ ನನಗೆ ಸೋಲು ಅಂತ ಹೇಳಿದ್ರೆ ಅವರಿಗೆ ಒಳ್ಳೆಯದಾಗಲಿ. ಬಿಜೆಪಿ 275 ಒಳಗೆ ನಿಲ್ಲಬಹುದು, 400 ಸ್ಥಾನ ಬರುವುದಿಲ್ಲ ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಯಾಗ ಮಾಡುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ಮಾತನಾಡಿದ ಅವರು, ಮೊದಲಿಂದಲೂ ರಾಜಕಾರಣಿಗಳು ಹಾಗೂ ಒಂದು ಪಕ್ಷ ಅದಕ್ಕೆ ಹೆಸರುವಾಸಿ. ಯಾರು ಅಂತ ನನಗೆ ಗೊತ್ತಿಲ್ಲ. ಈ ಹಿಂದೆಯೂ ಇಂತಹ ಮಂತ್ರ, ತಂತ್ರ, ಕುತಂತ್ರ ಮಾಡಿಕೊಂಡು ಬಂದಿದ್ದು ಇದೆ. ಅದನ್ನೇ ಮುಂದುವರೆಸಿಕೊಂಡು ಬಂದಿರಬಹುದು. ಡಿಸಿಎಂ ಹೆಸರು ಹೇಳಿದ್ರೆ ಪಕ್ಷ ಸಂಘಟನೆ ಮಾಡಬಹುದು ಎಂಬ ಯೋಚನೆ ಇರಬಹುದು. ಕಾರ್ಯಕರ್ತರನ್ನು ಎತ್ತಿಕಟ್ಟಲು ಡಿಕೆ ಶಿವಕುಮಾರ್ ಹೆಸರು ಬಳಸುತ್ತಾರೆ. ನಾನು ಇದರ ಬಗ್ಗೆ ಜಾಸ್ತಿ ಮಾತನಾಡಲ್ಲ ಎಂದರು.
ಇದನ್ನೂ ಓದಿ: ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ: ಅಶೋಕ್ಗೆ ಸಿದ್ದರಾಮಯ್ಯ ಹೀಗೆಂದಿದ್ದೇಕೆ?
ದೇಶದ ಬೆಳವಣಿಗೆ ಜನ ಗಮನಿಸುತ್ತಿದ್ದಾರೆ. ಕರ್ನಾಟಕದ ಪೆನ್ ಡ್ರೈವ್ ಪ್ರಕರಣ ವಿಶ್ವದ ಗಮನ ಸೆಳೆದಿದೆ. ಅದನ್ನ ಸಮರ್ಥನೆ ಮಾಡಿ ರಾಜಕಾರಣ ಮಾಡ್ತಿದ್ದಾರೆ. ಯಾವ ಮಟ್ಟದ ವ್ಯವಸ್ಥೆ ರೂಪಿಸಲು ಅ ಪಕ್ಷ ಹೋಗಿದೆ ಎಂದು ಅರ್ಥ ಮಾಡಿಕೊಳ್ಳಿ. ಬೇರೆಯವರು ಚೆನ್ನಾಗಿ ಇರಬಾರದು ಅಂತ ಅ ಕುಟುಂಬ ಮಾಡಿಕೊಂಡು ಬಂದಿದೆ. ಅ ಕುಟುಂಬ ಅವತ್ತಿನಿಂದಲೂ ಅದನ್ನೇ ಮಾಡಿಕೊಂಡು ಬಂದಿದೆ. ಅದರಿಂದ ಫಲ ಸಿಗುತ್ತಾ ನನಗೆ ಗೊತ್ತಿಲ್ಲ. ಅವರು ಯಾಕೆ ಹೀಗೆ ಮಾಡ್ತಾರೆ ಗೊತ್ತಿಲ್ಲ. ಕುಮಾರಸ್ವಾಮಿ, ರೇವಣ್ಣ, ದೇವೇಗೌಡ ಏನ್ ಮಾಡುತ್ತಾರೋ ಗೊತ್ತಿಲ್ಲ. ಅವರು ಎಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಸುರೇಶ್ ಹೇಳಿದರು.




