ನಕಲಿ ಔಷಧ ಜಾಲಕ್ಕೆ ವಿದೇಶಿ ಹಣಕಾಸು? ಟರ್ಕಿ, ಯುಎಇ, ಅಜರ್‌ಬೈಜಾನ್ ಲಿಂಕ್ ಬಗ್ಗೆ ಇಡಿ ತನಿಖೆ
ನಕಲಿ ಔಷಧ ಜಾಲ ಪ್ರಕರಣದಲ್ಲಿ ತನಿಖೆಯನ್ನು ಜಾರಿ ನಿರ್ದೇಶನಾಲಯ ವಿಸ್ತರಿಸಿದ್ದು, ಪ್ರಮುಖ ಆರೋಪಿಯ ಟರ್ಕಿ, ಅಜರ್‌ಬೈಜಾನ್ ಮತ್ತು ಯುಎಇ ಸಂಪರ್ಕಗಳು ಹಾಗೂ ವಿದೇಶಿ ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಪರಾಧದಿಂದ ಬಂದ ಹಣದ ವರ್ಗಾವಣೆ ಮತ್ತು ಆಸ್ತಿಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮುಖ್ಯಾಂಶಗಳು
- ಟರ್ಕಿ, ಯುಎಇ, ಅಜರ್‌ಬೈಜಾನ್ ಸಂಪರ್ಕದ ತನಿಖೆ ಚುರುಕು
- ವಿದೇಶಿ ಹಣಕಾಸು ವ್ಯವಹಾರಗಳ ಪರಿಶೀಲನೆ ಆರಂಭಿಸಿದ ಇಡಿ
- ಅಪರಾಧದ ಹಣ ಮತ್ತು ಆಸ್ತಿಗಳ ತನಿಖೆ
ಬೆಂಗಳೂರು, ನವೆಂಬರ್ 5: ನಕಲಿ ಔಷಧ ಜಾಲ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತಷ್ಟು ವಿಸ್ತರಿಸಿದ್ದು, ಪ್ರಮುಖ ಆರೋಪಿಯ ವಿದೇಶಿ ಹಣಕಾಸು ವ್ಯವಹಾರಗಳು ಹಾಗೂ ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಅಜರ್‌ಬೈಜಾನ್‌ನಲ್ಲಿನ ಸಂಪರ್ಕಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಬೆಂಗಳೂರು ನಗರದ ಹೊರವಲಯದ ತಾವರೆಕೆರೆಯಲ್ಲಿ ಆಗಸ್ಟ್ 18ರಂದು ಬಯಲಾದ ನಕಲಿ ಔಷಧ ಜಾಲದ ಕುರಿತು ಕರ್ನಾಟಕ ವಿಶೇಷ ತನಿಖಾ ದಳ (ಎಸ್ಐಟಿ) ಪ್ರತ್ಯೇಕ ತನಿಖೆ ನಡೆಸುತ್ತಿದೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯೂ ತನಿಖೆ ಆರಂಭಿಸಿದ್ದು, ಹೊಸದಾಗಿ ದಾಳಿ ನಡೆಸಿ, ಮಿನರ್ವಾ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್ ಮಾಲೀಕ ವೀರೇಶ್ ಕುಮಾರ್ ಜೈನ್ ಅವರಿಗೆ ಸೇರಿದ ಸುಮಾರು 9 ಲಕ್ಷ ರೂ. ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಪ್ರಮುಖ ಆರೋಪಿಯ ವಿದೇಶಿ ವ್ಯವಹಾರಗಳ ಪರಿಶೀಲನೆ
ಪ್ರಕರಣದ ಪ್ರಮುಖ ಶಂಕಿತ ಆರೋಪಿಯಾಗಿರುವ ಆರ್. ಪ್ರಶಾಂತ್ ಅಲಿಯಾಸ್ ಪ್ರಶಾಂತ್ ರಾಜನ್ ಬಾಬು ಅವರ ವಿದೇಶಿ ಹಣಕಾಸು ವ್ಯವಹಾರಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ ಎಂದು ಮೂಲಗಳ ಹೇಳಿಕೆ ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಅಜರ್‌ಬೈಜಾನ್ ಮತ್ತು ಟರ್ಕಿಯಲ್ಲಿ ಅವರ ಸಂಪರ್ಕಗಳ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಶಾರ್ಜಾ ಸೇರಿದಂತೆ ಯುಎಇ ಸಂಪರ್ಕಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ, ಎಸ್ಐಟಿ ತನಿಖೆಯಲ್ಲಿ ಪ್ರಶಾಂತ್ ಹಲವು ಬಾರಿ ಟರ್ಕಿಗೆ ಪ್ರಯಾಣಿಸಿದ್ದ ಮಾಹಿತಿ ದೊರೆತಿತ್ತು. ದುಬಾರಿ ಬ್ರ್ಯಾಂಡ್ ಔಷಧಗಳಿಗೆ ಸಂಬಂಧಿಸಿದ ಲೇಬಲ್‌ಗಳನ್ನು ಪಡೆಯಲು ಅವರು ಟರ್ಕಿಗೆ ತೆರಳುತ್ತಿದ್ದರು ಎಂಬ ಅನುಮಾನ ತನಿಖಾ ಸಂಸ್ಥೆಗಳಿಗಿದೆ. ಮಧ್ಯವರ್ತಿಗಳ ದೊಡ್ಡ ಜಾಲದ ಮೂಲಕ ಈ ಚಟುವಟಿಕೆ ನಡೆಸಲಾಗುತ್ತಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ. ಜಾಗತಿಕ ಔಷಧ ಬ್ರ್ಯಾಂಡ್‌ಗಳ ಹೆಸರಿನ ನಕಲಿ ಕ್ಯುಆರ್ ಕೋಡ್‌ಗಳು ಮತ್ತು ಸ್ಟ್ಯಾಂಪ್‌ಗಳನ್ನು ಬಳಸಲಾಗುತ್ತಿತ್ತೇ ಎಂಬ ಬಗ್ಗೆಯೂ ಇಡಿ ಪರಿಶೀಲಿಸುತ್ತಿದೆ.
ಅಜರ್‌ಬೈಜಾನ್, ಶಾರ್ಜಾ ಸಂಪರ್ಕದ ಮೇಲೂ ಕಣ್ಣಿಟ್ಟ ಇಡಿ
ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅಲ್ಲಿ ಯಾವುದೇ ವ್ಯವಹಾರ ನಡೆಸಿದ್ದರೇ ಎಂಬ ಅನುಮಾನವೂ ತನಿಖಾ ವ್ಯಾಪ್ತಿಗೆ ಬಂದಿದೆ. ಇದೇ ವೇಳೆ ಯುಎಇಯ ಶಾರ್ಜಾಗೆ ಅವರ ಪ್ರಯಾಣ ಹಾಗೂ ಅಲ್ಲಿನ ಸಂಪರ್ಕಗಳ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಇಡಿ ತನಿಖೆ ಆರಂಭಿಸಿದೆ. ತನಿಖೆಯಲ್ಲಿ ದೊರೆಯುವ ಮಾಹಿತಿ ಆಧರಿಸಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999ರ ಅಡಿಯಲ್ಲೂ ಪರಿಶೀಲನೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅಪರಾಧದ ಹಣ ಎಲ್ಲಿ ಹೂಡಿಕೆಯಾಗಿದೆ ಎಂಬ ಬಗ್ಗೆ ತನಿಖೆ ಚುರುಕು
ನಕಲಿ ಔಷಧ ಜಾಲದಿಂದ ಬಂದಿರುವ ದೊಡ್ಡ ಮೊತ್ತದ ಹಣವನ್ನು ಹೇಗೆ ವರ್ಗಾಯಿಸಲಾಯಿತು ಮತ್ತು ಎಲ್ಲಿ ಹೂಡಿಕೆ ಮಾಡಲಾಯಿತು ಎಂಬುದರ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ. ಇತ್ತೀಚಿನ ಐಷಾರಾಮಿ ಖರೀದಿಗಳು, ಸ್ಥಿರಾಸ್ತಿ, ಶೆಲ್ ಕಂಪನಿಗಳು ಹಾಗೂ ಬೇನಾಮಿ ಆಸ್ತಿಗಳ ಕುರಿತು ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಶಾಂತ್ ತಮ್ಮ ವಿದೇಶಿ ಪ್ರಯಾಣಗಳಿಗೆ ಹಣವನ್ನು ಹೇಗೆ ಹೊಂದಿಸುತ್ತಿದ್ದರು ಹಾಗೂ ದೇಶದೊಳಗೆ ಸಾಮಾನ್ಯ ಔಷಧಗಳ ಪೂರೈಕೆ ಜಾಲವನ್ನು ಹೇಗೆ ರೂಪಿಸಿದ್ದರು ಎಂಬ ಪ್ರಶ್ನೆಗಳಿಗೂ ತನಿಖೆ ಉತ್ತರ ಹುಡುಕುತ್ತಿದೆ.
ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ಮರುಪ್ಯಾಕಿಂಗ್ ಆರೋಪದ ಬಗ್ಗೆಯೂ ತನಿಖೆ
ತನಿಖೆಯಲ್ಲಿ ಪ್ರಶಾಂತ್ ಅವರು ಬಿಡದಿ ಸಮೀಪದ ಫಾರ್ಮ್‌ಹೌಸ್ ಒಂದರಲ್ಲಿ ಅಗತ್ಯ ಔಷಧ ಪರವಾನಗಿ ಅಥವಾ ಅನುಮತಿಯಿಲ್ಲದೆ ಔಷಧಗಳನ್ನು ತಯಾರಿಸುವುದು, ಮರುಪ್ಯಾಕ್ ಮಾಡುವುದು ಮತ್ತು ಮರುಲೇಬಲ್ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದರು ಎಂಬ ಆರೋಪವೂ ತನಿಖೆಗೆ ಒಳಪಟ್ಟಿದೆ. ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ ನಂತರ ಸೆಪ್ಟೆಂಬರ್‌ನಲ್ಲಿ ಎಸ್ಐಟಿ ಅವರನ್ನು ಬಂಧಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ವಿವಿಧ ರಾಜ್ಯಗಳ ಉತ್ಪಾದನಾ ಕೇಂದ್ರಗಳಿಂದ ಕಡಿಮೆ ಬೆಲೆಯ ಸಾಮಾನ್ಯ ಔಷಧಗಳನ್ನು ದೊಡ್ಡ ಪ್ರಮಾಣದಲ್ಲಿ ತರಿಸಿ, ಅವುಗಳನ್ನು ಹೊಸ ವಯಲ್‌ಗಳಲ್ಲಿ ಮರುಪ್ಯಾಕ್ ಮಾಡಿ ದುಬಾರಿ ಔಷಧಗಳ ಹೆಸರಿನಲ್ಲಿ ಮರುಲೇಬಲ್ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಫೈಜರ್ ಕಂಪನಿಯ ಆ್ಯಂಟಿಬಯೋಟಿಕ್ ಔಷಧಗಳ ಲೇಬಲ್‌ಗಳನ್ನು ಬಳಸಿ ವಯಲ್‌ಗಳಿಗೆ ಮರುಲೇಬಲ್ ಮಾಡಲಾಗುತ್ತಿತ್ತು ಎಂಬ ಆರೋಪವಿದೆ. ವಯಲ್‌ಗಳಲ್ಲಿ ಸಾಮಾನ್ಯ ಔಷಧಗಳಿದ್ದರೂ, ಅವುಗಳ ಮೇಲೆ ಪ್ರಸಿದ್ಧ ಬ್ರ್ಯಾಂಡ್‌ನ ಲೇಬಲ್‌ಗಳನ್ನು ಅಳವಡಿಸಲಾಗುತ್ತಿತ್ತೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.
ನಕಲಿ ಔಷಧ ಜಾಲದ ದೇಶೀಯ ಕಾರ್ಯವೈಖರಿಯಷ್ಟೇ ಅಲ್ಲದೆ, ವಿದೇಶಿ ಪ್ರಯಾಣ, ಹಣಕಾಸು ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳವರೆಗೂ ತನಿಖೆ ವಿಸ್ತರಿಸಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




