ನಕಲಿ ಔಷಧ ದಂಧೆ: ಇ.ಡಿಯಿಂದ ವೀರೇಶ್ ಕುಮಾರ್‌ಗೆ ಸೇರಿದ 9 ಲಕ್ಷ ರೂ. ಫ್ರೀಜ್; ಮಹತ್ವದ ದಾಖಲೆಗಳ
ನಕಲಿ ಔಷಧ ದಂಧೆಗೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ, ಪ್ರಮುಖ ಆರೋಪಿ ಕೃಪಾ ಹೆಲ್ತ್‌ಕೇರ್‌ನ ವೀರೇಶ್ ಕುಮಾರ್‌ಗೆ ಸೇರಿದ ₹9 ಲಕ್ಷ ಫ್ರೀಜ್ ಮಾಡಿದ್ದು, ನಕಲಿ ಲೇಬಲಿಂಗ್ ದಂಧೆಯ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಿವಿಧ ರಾಜ್ಯಗಳ ಉತ್ಪಾದನಾ ಕೇಂದ್ರಗಳಿಂದ ಕಡಿಮೆ ಬೆಲೆಯ ಬೃಹತ್ ಪ್ರಮಾಣದ ಔಷಧಗಳನ್ನು ಸಂಗ್ರಹಿಸಿ, ಅವುಗಳನ್ನು ಹೊಸ ಸೀಸಿಗಳಿಗೆ ತುಂಬಲಾಗುತ್ತಿತ್ತು. ಬಳಿಕ ದುಬಾರಿ ಬೆಲೆಯ ಫೈಜರ್ ಕಂಪನಿಯ ಆ್ಯಂಟಿಬಯೋಟಿಕ್ ಔಷಧಗಳ ಹೆಸರಿನಲ್ಲಿ ನಕಲಿ ಲೇಬಲ್‌ಗಳನ್ನು ಅಂಟಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು, ನವೆಂಬರ್ 03: ನಕಲಿ ಔಷಧ ದಂಧೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಬೆಂಗಳೂರು ವಲಯದ ಅಧಿಕಾರಿಗಳು ಪ್ರಮುಖ ಆರೋಪಿ, ಕೃಪಾ ಹೆಲ್ತ್ ಕೇರ್ನ ವೀರೇಶ್ ಕುಮಾರ್‌ಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿ ಇದ್ದ ಸುಮಾರು 9 ಲಕ್ಷ ರೂಪಾಯಿಗಳನ್ನು ಫ್ರೀಜ್ ಮಾಡಿದ್ದಾರೆ. ಅಲ್ಲದೆ, ವಿವಿಧ ವ್ಯಕ್ತಿಗಳಿಗೆ ಸೇರಿದ ಡಿಜಿಟಲ್ ಸಾಧನಗಳು, ದಾಖಲೆಗಳು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತ ಮಾಹಿತಿಯನ್ನು ಸ್ವತಃ ಜಾರಿ ನಿರ್ದೇಶನಾಲಯವೇ ಹಂಚಿಕೊಂಡಿದೆ.
ED ತನಿಖೆ ವೇಳೆ ಏನೆಲ್ಲ ಮಾಹಿತಿ ಪತ್ತೆ?
ED, Bangalore has conducted searches across 5 premises in Bengaluru under PMLA, 2002 in connection with counterfeit medicines racket. Operations led t freezing Rs. 9 Lakh in bank accounts belonging to Veeresh Kumar alongside the seizure of digital devices and incriminating documents.
— ED (@dir_ed) November 3, 2026
ಆಗಸ್ಟ್ 18, 2026ರಂದು ಔಷಧ ನಿಯಂತ್ರಣ ಪ್ರಾಧಿಕಾರ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಸಿ.ಕೆ. ತಾಂಡ್ಯ ಗ್ರಾಮದ ನಿವಾಸವೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳು ಪರವಾನಗಿ, ಅನುಮತಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಔಷಧಗಳು ಮತ್ತು ಔಷಧೀಯ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿತ್ತು. ಅಲ್ಲದೆ, ಸಂಗ್ರಹಿಸಿಟ್ಟಿದ್ದ ಔಷಧಗಳ ಮೇಲಿನ ಲೇಬಲ್‌ಗಳನ್ನು ಬದಲಾಯಿಸುತ್ತಿರುವುದು ಕಂಡುಬಂದಿತ್ತು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 318(4) ಮತ್ತು ಹಕ್ಕುಸ್ವಾಮ್ಯ ಕಾಯ್ದೆ, 1957ರ ಸೆಕ್ಷನ್ 63ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಎರಡೂ ಅಪರಾಧಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಿಗದಿತ ಅಪರಾಧಗಳಾಗಿವೆ. ಹೀಗಾಗಿ, ಇ.ಡಿ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ನಕಲಿ ಔಷಧ ಜಾಲ: 15 ಆಸ್ಪತ್ರೆಗೆಳ ಫಾರ್ಮಸಿಗಳಿಗೆ ನೋಟಿಸ್, ಡಿಸ್ಟ್ರಿಬ್ಯೂಟರ್ಗಳ ವಿರುದ್ಧವೂ ಕ್ರಮ
ತನಿಖೆಯಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ, ಆರ್. ಪ್ರಶಾಂತ್ ಎಂಬಾತ ಬಿಡದಿ ಸಮೀಪದ ಫಾರ್ಮ್‌ಹೌಸ್ ಒಂದನ್ನು ವ್ಯವಸ್ಥೆ ಮಾಡಿದ್ದ. ಇಲ್ಲಿ ಔಷಧ ಪರವಾನಗಿ ಅಥವಾ ಅನುಮತಿಯಿಲ್ಲದೆ ಔಷಧಗಳ ತಯಾರಿಕೆ, ಮರುಪ್ಯಾಕಿಂಗ್ ಮತ್ತು ಮರುಲೇಬಲಿಂಗ್ ನಡೆಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ವಿವಿಧ ರಾಜ್ಯಗಳ ಉತ್ಪಾದನಾ ಕೇಂದ್ರಗಳಿಂದ ಕಡಿಮೆ ಬೆಲೆಯ ಬೃಹತ್ ಪ್ರಮಾಣದ ಔಷಧಗಳನ್ನು ಸಂಗ್ರಹಿಸಿ, ಅವುಗಳನ್ನು ಹೊಸ ಸೀಸಿಗಳಿಗೆ ತುಂಬಲಾಗುತ್ತಿತ್ತು. ಬಳಿಕ ದುಬಾರಿ ಬೆಲೆಯ ಫೈಜರ್ ಕಂಪನಿಯ ಆ್ಯಂಟಿಬಯೋಟಿಕ್ ಔಷಧಗಳಾದ ಜಾವಿಸೆಫ್ಟಾ (Zavicefta), ಎಮ್ಬ್ಲೇವಿಯೊ (Emblaveo) ಮುಂತಾದವುಗಳ ಹೆಸರಿನಲ್ಲಿ ನಕಲಿ ಲೇಬಲ್‌ಗಳನ್ನು ಅಂಟಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಸೀಸಿಗಳಲ್ಲಿ ಜೆನೆರಿಕ್ ಔಷಧಗಳಿದ್ದರೂ, ಅವುಗಳ ಮೇಲೆ ಫೈಜರ್ ಕಂಪನಿಯ ಬ್ರ್ಯಾಂಡ್‌ನ ಲೇಬಲ್‌ಗಳನ್ನು ಅಂಟಿಸಲಾಗಿತ್ತು ಎನ್ನಲಾಗಿದೆ. ಈ ಔಷಧಗಳನ್ನು ಕೃಪಾ ಹೆಲ್ತ್‌ಕೇರ್‌ಗೆ ಪೂರೈಸಲಾಗುತ್ತಿತ್ತು. ಬಳಿಕ ಕೃಪಾ ಹೆಲ್ತ್‌ಕೇರ್ ಇತರ ಔಷಧೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಅಸಲಿ ಔಷಧಗಳ ಜೊತೆಯಲ್ಲೇ ಈ ಔಷಧಗಳನ್ನೂ ಪೂರೈಸುತ್ತಿತ್ತು ಎಂದು ಇಡಿ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:17 pm, Tue, 3 November 26




