ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಸಿಐಡಿ ಹಳೆಯ ಅಧಿಕಾರಿಗಳಿಗೆ ಕೊಕ್ ನೀಡಿ ಇಬ್ಬರು ಐಪಿಎಸ್ ಅಧಿಕಾರಿಗಳ ಎಸ್‌ಐಟಿ ರಚಿಸಿದ ಹೈಕೋರ್ಟ್
KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯವು ದಕ್ಷ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿದೆ. ಸಿಐಡಿ ಅಧಿಕಾರಿಗಳನ್ನು ಹೊರಗಿಟ್ಟು, ಸಂಪೂರ್ಣ ಸ್ವತಂತ್ರ ತನಿಖೆಗೆ ನಿರ್ದೇಶಿಸಿದೆ. ED ಜೊತೆ ಸಮನ್ವಯದಿಂದ ಕೆಲಸ ಮಾಡಲು ಸೂಚಿಸಿದ್ದು, ಹಗರಣದ ಸಂತ್ರಸ್ತ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ಬೆಂಗಳೂರು, ನ,2: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿರುವ ನ್ಯಾಯಾಲಯ, ತಂಡದ ನೇತೃತ್ವಕ್ಕೆ ಇಬ್ಬರು ದಕ್ಷ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಹಿಂದೆ ನಡೆದ ತನಿಖಾ ಅಧಿಕಾರಿಗಳ ಕುರಿತು ಅರ್ಜಿದಾರರ ಪರ ವಕೀಲ ಗಿರೀಶ್ ಭಾರದ್ವಾಜ್ ಆಕ್ಷೇಪಣೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಈ ಪ್ರಮುಖ ಆದೇಶವನ್ನು ಪ್ರಕಟಿಸಿದೆ.
ಹಗರಣದ ಸಮಗ್ರ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಆರ್. ಹಿತೇಂದ್ರ ಹಾಗೂ ಸೌಮೇಂದು ಮುಖರ್ಜಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ಹೈಕೋರ್ಟ್ ಆದೇಶಿಸಿದೆ. ಈ ಹಿಂದೆ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ (CID) ಅಧಿಕಾರಿಗಳನ್ನು ಎಸ್‌ಐಟಿಯಲ್ಲಿ ಮುಂದುವರಿಸಬಾರದು ಎಂದು ಪೀಠ ಸ್ಪಷ್ಟಪಡಿಸಿದೆ.
ಯಾರ ಮುಲಾಜಿಗೂ ಒಳಗಾಗದೆ ಸಂಪೂರ್ಣ ಸ್ವತಂತ್ರ ಹಾಗೂ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ರೀತಿಯಲ್ಲಿ ತನಿಖೆ ನಡೆಸುವಂತೆ ಎಸ್‌ಐಟಿಗೆ ಕೋರ್ಟ್ ನಿರ್ದೇಶಿಸಿದೆ. ಎಸ್‌ಐಟಿ ಅಧಿಕಾರಿಗಳು ತನಿಖೆಗೆ ಅಗತ್ಯವೆಂದು ಸೂಚಿಸುವ ಸಿಬ್ಬಂದಿಗಳನ್ನು ಸರ್ಕಾರ ತಕ್ಷಣವೇ ನೇಮಿಸಬೇಕು. ಜೊತೆಗೆ ಎಸ್‌ಐಟಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ರಾಜ್ಯ ಸರ್ಕಾರವೇ ಒದಗಿಸಬೇಕು.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಸೇರಿ ಮೂವರಿಗೆ ಬಿಗ್ ರಿಲೀಫ್
ಪ್ರಕರಣದ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ಹಾಗೂ ನೂತನ ಎಸ್‌ಐಟಿ (SIT) ಪರಸ್ಪರ ಪೂರಕವಾಗಿ ಮತ್ತು ಸಮನ್ವಯದಿಂದ ಕೆಲಸ ಮಾಡುವಂತೆ ಹೈಕೋರ್ಟ್ ಸೂಚಿಸಿದೆ. KPSC ಮಾಜಿ ಅಧ್ಯಕ್ಷರೇ ಜೈಲು ಪಾಲಾಗಿರುವ ಈ ಬಹುಕೋಟಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಹೈಕೋರ್ಟ್ ಸ್ವತಃ ಪ್ರವೇಶಿಸಿ ದಕ್ಷ ಅಧಿಕಾರಿಗಳ ಎಸ್‌ಐಟಿ ರಚಿಸಿರುವುದು ಹಗರಣದ ಸಂತ್ರಸ್ತ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




