ಅಪರೂಪದ ರಕ್ತ ಚಂದನ ಬೆಳೆದ ಯುವ ರೈತ; ಯೂಟ್ಯೂಬ್ ನೋಡಿಯೇ ಪ್ರೇರಣೆ ಪಡೆದಿದ್ದರು !
ಬರೋಬ್ಬರಿ 10 ರಿಂದ 15 ವರ್ಷಗಳ ನಂತರ ಕೈಗೆ ಬರುವ ಈ ರಕ್ತ ಚಂದನಕ್ಕೆ ಮಾರುಕಟ್ಟೆಯಲ್ಲಿ ಒಂದು ಗನ್ ಫೀಟ್‍ಗೆ 1 ಲಕ್ಷ ರೂಪಾಯಿ ಬೆಲೆ ಇದೆ. ಇದರಲ್ಲಿ ಎ ಗ್ರೇಡ್‍ಗೆ ಹೆಚ್ಚು ಬೆಲೆ ಇದೆ. ಇದರ ಬೆಳವಣಿಗೆ ಶ್ರೀಗಂಧಕ್ಕಿಂತಲೂ ಶೀಘ್ರ ಎನ್ನುವ ರಮೇಶ್ ಇದು ಎತ್ತರವಾಗುವ ಬದಲು ದಪ್ಪವಾಗುತ್ತ ಹೋಗುವುದರಿಂದ ತುಂಬ ಲಾಭದಾಯಕ ಎಂದು ಹೇಳಿದ್ದಾರೆ.
ಇಂದಿನ ಆಧುನಿಕತೆಯ ಜಂಜಾಟದ ಜೀವನದಲ್ಲಿ ಯುವಕರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ ಎಂಬ ಅಪವಾದದ ಮಧ್ಯೆಯೇ ತೆಲಂಗಾಣದ ಗಡಿಗೆ ಅಂಟಿಕೊಂಡ ಯಾದಗಿರಿ ಜಿಲ್ಲೆಯಲ್ಲೊಬ್ಬ ಯುವ ರೈತ ಕನಿಷ್ಠ ಜಾಗದಲ್ಲಿ ಕೃಷಿ ಮಾಡುತ್ತಿದ್ದಾರೆ.
ಗುರುಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿನ ಯುವ ರೈತ ರಮೇಶ ಪವಾರ್ ಈ ಸಾಧನೆಯ ರೂವಾರಿ. ತಮ್ಮ ಒಂದು ಎಕರೆ ಜಮೀನಿನಲ್ಲಿಯೇ ಅಪರೂಪದ ಸಸ್ಯವೆನಿಸಿದ ರಕ್ತ ಚಂದನ ಗಿಡ ಬೆಳೆಯುತ್ತಿದ್ದು, ಸದ್ಯ ಜಿಲ್ಲೆಯಾದ್ಯಂತ ಸದ್ದು ಮಾಡುತ್ತಿದ್ದಾರೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಅತೀಹೆಚ್ಚು ಕಂಡು ಬರುವ ರಕ್ತ ಚಂದನದ ಗಿಡಗಳು ಉತ್ತರದ ಭಾಗದಲ್ಲಿ ಅಷ್ಟಾಗಿ ಕಾಣ ಸಿಗುವುದಿಲ್ಲ. ಔಷಧಿ ತಯಾರಿಕೆ ಸೇರಿದಂತೆ ಮನೆಗಳ ಬಾಗಿಲು ಹಾಗೂ ಆಯುರ್ವೇದ ಶಾಸ್ತ್ರದಲ್ಲಿ ಈ ರಕ್ತ ಚಂದನ ಮರಗಳಿಗೆ ತನ್ನದೇ ಆದ ಪ್ರಾಶಸ್ತ್ಯವಿದೆ.
ಯುಟ್ಯೂಬ್ ನೋಡಿ ಪ್ರೇರಣೆ ಪಡೆದ ರೈತ ರಮೇಶ್! ತೆಲಂಗಾಣದ ಗಡಿಗೆ ಅಂಟಿಕೊಂಡಿರುವ ಬದ್ದೆಪಲ್ಲಿ ಗ್ರಾಮದಲ್ಲಿನ ತಮ್ಮ ಅಲ್ಪ ಜಮೀನಿನಲ್ಲಿ ಮೊದಲು ರಮೇಶ ಕುರಿ ಸಾಕಣಿಕೆ ಮಾಡಬೇಕು ಎಂಬ ಯೋಜನೆ ಹೂಡಿದ್ದರು. ಆದರೆ ಯುಟ್ಯೂಬ್‍ನಲ್ಲಿ ಆಂಧ್ರ ಪ್ರದೇಶದ ನೆಲ್ಲೂರಿನ ರೈತರೊಬ್ಬರು ರಕ್ತ ಚಂದನದ ಕೃಷಿಯ ಬಗ್ಗೆ ಮಾಡಿದ ವಿಡಿಯೋ ತುಣುಕನ್ನು ಗಮನಿಸಿದಾಗ ಯುವ ರೈತ ರಮೇಶ್ಗೆ ತಾವ್ಯಾಕೆ ರಕ್ತ ಚಂದನ ಗಿಡ ಬೆಳೆಸಬಾರದು ಎಂಬ ಆಲೋಚನೆ ತಲೆಯಲ್ಲಿ ಬಂದಿದ್ದು, ತಕ್ಷಣವೇ ಆ ಮರಗಳ ವೈಶಿಷ್ಟ್ಯ, ಬೆಳೆಸಲು ಬೇಕಾದ ಮಣ್ಣಿನ ಗುಣ, ಅದಕ್ಕೆ ತಗುಲಬಹುದಾದ ಖರ್ಚು ಹೀಗೆ ನಾನಾ ಆಯಾಮಗಳನ್ನು ವಿಚಾರಿಸಿ 2017ರ ಮುಂಗಾರು ಹಂಗಾಮಿನಲ್ಲಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಆಂಧ್ರದ ಗುಂಟೂರು ಹಾಗೂ ಕಡಪ ಜಿಲ್ಲೆಗಳಿಂದ ತಂದು ನಾಟಿ ಮಾಡಿದ ರಕ್ತಚಂದನದ ಗಿಡಗಳಿಗೆ ಇದೀಗ ಮೂರು ವರ್ಷ ಪ್ರಾಯ.
12.5 ಫೀಟ್‍ಗೆ ಒಂದರಂತೆ 250 ಗಿಡಗಳನ್ನು ರಮೇಶ ನೆಟ್ಟಿದ್ದು, ಅಕ್ಕಪಕ್ಕದಲ್ಲಿ ಹೆಬ್ಬೇವು, ಪೇರಲೆ, ದಾಳಿಂಬೆ, ಲಿಂಬೆ, ಸೇರಿದಂತೆ ಕರಿಬೇವು, ಟೊಮೆಟೊ, ಬದನೆಕಾಯಿ ಬೆಳೆಗಳನ್ನು ಬೆಳೆಯುತ್ತಿರುವುದು ಮತ್ತೊಂದು ವಿಶೇಷ. 250 ಸಸಿಗಳನ್ನು ದೂರದ ಕಡಪ ಮತ್ತು ಗುಂಟೂರು ಜಿಲ್ಲೆಗಳಿಂದ ತರಬೇಕಾದರೆ 30ರಿಂದ 35 ಸಾವಿರ ರೂಪಾಯಿ ಖರ್ಚು ತಗುಲಿದೆ. ಒಂದು ಎಕರೆ ಜಮೀನಿನ ಸುತ್ತಲೂ ಡೈಮಂಡ್ ತಂತಿಯಿಂದ ಸುತ್ತಿ ಸಸಿಗಳನ್ನು ಪ್ರಾಣಿಗಳು ಹಾಳು ಮಾಡದಂತೆ ರಕ್ಷಿಸಿದ್ದು, ಇದರ ಜತೆಗೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದಾರೆ. ಇದಕ್ಕೆ ತಗುಲಿದ ವೆಚ್ಚ ಬರೋಬ್ಬರಿ 1.50 ಲಕ್ಷ ರೂಪಾಯಿ. ಮೊದಲೆರಡು ವರ್ಷ ಹಗಲಿರುಳು ಕಷ್ಟ ಪಟ್ಟಿದ್ದರಿಂದ ಇದೀಗ ರಕ್ತ ಚಂದನದ ಗಿಡಗಳು ಆಳೆತ್ತರ ಬೆಳೆದು ನಿಂತಿವೆ.
ಹೆಚ್ಚಿನ ಆರೈಕೆ ಬಯಸದ ಮರಗಳಿವು: ಬರೋಬ್ಬರಿ 10 ರಿಂದ 15 ವರ್ಷಗಳ ನಂತರ ಕೈಗೆ ಬರುವ ಈ ರಕ್ತ ಚಂದನಕ್ಕೆ ಮಾರುಕಟ್ಟೆಯಲ್ಲಿ ಒಂದು ಗನ್ ಫೀಟ್‍ಗೆ 1 ಲಕ್ಷ ರೂಪಾಯಿ ಬೆಲೆ ಇದೆ. ಇದರಲ್ಲಿ ಎ, ಬಿ, ಸಿ ಎಂಬ ಕೆಟಗರಿ ಇದ್ದು, ಎ ಗ್ರೇಡ್‍ಗೆ ಹೆಚ್ಚು ಬೆಲೆ ಇದೆ. ಇದರ ಬೆಳವಣಿಗೆ ಶ್ರೀಗಂಧಕ್ಕಿಂತಲೂ ಶೀಘ್ರ ಎನ್ನುವ ರಮೇಶ್ , ಇದು ಎತ್ತರವಾಗುವ ಬದಲು ದಪ್ಪವಾಗುತ್ತ ಹೋಗುವುದರಿಂದ ತುಂಬ ಲಾಭದಾಯಕ ಎಂದು ಹೇಳಿದ್ದಾರೆ. ಇನ್ನು ಬೆಲೆ ಒಂದು ಕಿಲೋಗೆ ಸಾವಿರ ರೂಪಾಯಿಂದ ಶುರುವಾಗುತ್ತದೆ. ಉತ್ತಮ ವರ್ಗಕ್ಕೆ ಬೆಲೆ ಇನ್ನೂ ಹೆಚ್ಚು. ಒಂದು ಮರದಿಂದ ಕನಿಷ್ಠ ಎರಡು ಕ್ವಿಂಟಾಲು ಕೊರಡು ನಿರೀಕ್ಷಿಸಬಹುದಾಗಿದ್ದು, ಒಮ್ಮೆ ಗಿಡ ಬದುಕಿದರೆ ಮತ್ತೆ ಹೆಚ್ಚಿನ ಆರೈಕೆ ಬಯಸದೆ ಬೆಳೆಯುತ್ತದೆ.
ರಕ್ತ ಚಂದನ ಜೊತೆ ಪರ್ಯಾಯ ಬೆಳೆಗೂ ಸೈ! ರಕ್ತ ಚಂದನದ ಜೊತೆಯಲ್ಲಿ ಲಿಂಬೆ, ದಾಳಿಂಬೆ, ಪೇರಲೆ ಗಿಡಗಳನ್ನ ಬೆಳೆದಿದ್ದಾರೆ. ಸುಮಾರು 12.5 ಅಡಿಗೊಂದು ರಕ್ತ ಚಂದನ ಗಿಡ ಬೆಳೆದಿರುವ ಕಾರಣ ಭೂಮಿಯನ್ನ ಖಾಲಿ ಏಕೆ ಬಿಡಬೇಕು ಎಂಬ ಕಾರಣಕ್ಕೆ ರಮೇಶ್ ಈ ತರಹದ ಗಿಡಗಳನ್ನ ಬೆಳೆಯುತ್ತಿದ್ದಾರೆ. ಇನ್ನು ಲಿಂಬೆ, ದಾಳಿಂಬೆ ಹಾಗೂ ಪೇರಲೆ ಗಿಡಗಳು ಹೂ ಬಿಡುವ ಹಂತಕ್ಕೆ ಬಂದಿವೆ. ಹೀಗಾಗಿ ಮುಂದಿನ ವರ್ಷ ಕಾಯಿ ಬಿಟ್ಟು ಫಸಲು ಕೈಗೆ ಬರುವ ನಿರೀಕ್ಷೆಯಿದೆ. ರಕ್ತ ಚಂದನದ ಜೊತೆ ಈ ಬೆಳೆಗಳೂ ಸಹ ಚೆನ್ನಾಗಿ ಲಾಭ ತಂದು ಕೊಡುವ ನಿರೀಕ್ಷೆಯಿದೆ ಎಂದು ರಮೇಶ್ ಹೇಳಿದ್ದಾರೆ.
ನಷ್ಟದ ಬಗ್ಗೆ ಚಿಂತೆಯಾಗಿತ್ತು.. ಮೊದಲಿಗೆ ನಾನೂ ಸಹ ರಕ್ತ ಚಂದನದ ಸಸಿ ನೆಡಬೇಕಾದರೆ ಲಾಭಕ್ಕಿಂತ ನಷ್ಟದ ಬಗ್ಗೆ ಹೆಚ್ಚು ಆಲೋಚನೆ ಮಾಡಿದ್ದೆ. ಆದರೆ ಭೂತಾಯಿಯ ನಂಬಿದವರಿಗೆ ಆಕೆ ಎಂದಿಗೂ ಕೈ ಬಿಡುವುದಿಲ್ಲ. ನಮ್ಮದು ಒಣಭೂಮಿಯಿಂದ ಕೂಡಿದ ಪ್ರದೇಶವಾದ್ದರಿಂದ ಇಲ್ಲಿ ತಂಪಿಗಿಂತ ಬಿಸಿಲು ಹೆಚ್ಚು. ಆದರೆ ರಕ್ತ ಚಂದನ ಗಿಡ ನೆಟ್ಟ ಮೇಲೆ ನಮ್ಮ ಜಮೀನಿಗೆ ತೋಟದ ಕಳೆ ಬಂದಿದೆ. ವಾರಾಂತ್ಯದಲ್ಲಿ ಇಲ್ಲಿಗೆ ಸಾಕಷ್ಟು ಜನ ಭೇಟಿ ನೀಡಿ, ಇವುಗಳನ್ನು ಬೆಳೆಯುವ ಬಗೆಯ ಬಗ್ಗೆ ನನ್ನಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರಮೇಶ ಪವಾರ್.
Published On - 1:43 pm, Sat, 26 December 20