ಪ್ರಾಸಿಕ್ಯೂಷನ್ ವಿರುದ್ಧ ಫೈಟ್: ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ

‘ಮುಡಾ ಹಗರಣದಲ್ಲಿ ನಾನೇನು ತಪ್ಪು ಮಾಡಿಲ್ಲ, ಯಾಕೆ ರಾಜೀನಾಮೆ ಕೊಡಲಿ. ಪ್ರಾಸಿಕ್ಯೂಷನ್ ನೀಡಿರುವುದೇ ಕಾನೂನು ಬಾಹಿರ. ಕಾನೂನು ಸಮರ ನಡೆಸುತ್ತೇವೆ’ ಎಂದು ಹಗರಣದ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ. ಇಂದು ಅವರು ಹೈಕೋರ್ಟ್ ಮೊರೆ ಹೋಗಿದ್ದು, ರಾಜ್ಯಪಾಲರ ಅನುಮತಿ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಪ್ರಾಸಿಕ್ಯೂಷನ್ ವಿರುದ್ಧ ಫೈಟ್: ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
Ramesha M
| Updated By: Ganapathi Sharma

Updated on:Aug 19, 2024 | 10:39 AM

ಬೆಂಗಳೂರು, ಆಗಸ್ಟ್ 19: 4 ದಶಕಗಳ ರಾಜಕೀಯ ಜೀವನದಲ್ಲೇ ಸಿದ್ದರಾಮಯ್ಯಗೆ ಅತಿದೊಡ್ಡ ಅಗ್ನಿ ಪರೀಕ್ಷೆ ಎದುರಾಗಿದೆ. ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಟಗರು ಎಂದೇ ಖ್ಯಾತರಾರ ಸಿದ್ದರಾಮಯ್ಯ ವಿಚಲಿತಗೊಳ್ಳುವಂತೆ ಮಾಡಿದೆ. ಹೀಗಾಗಿ ಸಂಕಷ್ಟದಿಂದ ಪಾರಾಗಲು ಅವರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಭಾನುವಾರ ಕೂಡ ಸಚಿವರು, ಆಪ್ತರು ಮತ್ತು ವಕೀಲರ ಜೊತೆ ಸಭೆ ನಡೆಸಿದ್ದ ಸಿಎಂ, ಪ್ರಾಸಿಕ್ಯೂಷನ್ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಿದ್ದಾರೆ.

ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ರದ್ದುಪಡಿಸುವಂತೆ ರಿಟ್ ಅರ್ಜಿಯಲ್ಲಿ ಸಿದ್ದರಾಮಯ್ಯ ಹೈಕೋರ್ಟ್​​ಗೆ ಮನವಿ ಮಾಡಿದ್ದಾರೆ.

ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕೂಡ ಚಿಂತನೆ ನಡೆದಿತ್ತು. ಈ ಮೂಲಕ ರಾಷ್ಟ್ರಮಟ್ಟದಲ್ಲೂ ರಾಜ್ಯಪಾಲರ ನಡೆ ಪ್ರತಿಧ್ವನಿಸುವಂತೆ ಮಾಡಿದರೆ, ರಾಜಕೀಯವಾಗಿ ಅನುಕೂಲವಾಗುತ್ತದೆಂಬ ಲೆಕ್ಕಾಚಾರವಿತ್ತು. ಆದರೆ, ಸುಪ್ರೀಂ ಮೊರೆ ಹೋದರೆ, ಪ್ರಕರಣ ಹೈಕೋರ್ಟ್‌ಗೆ ವರ್ಗಾವಣೆಯಾಗಬಹುದು ಎಂದು ವಕೀಲರು ಸಲಹೆ ನೀಡಿದ್ದಾರೆ. ಹೀಗಾಗಿ ಹೈಕೋರ್ಟ್‌ನಲ್ಲೇ ಇಂದು ರಿಟ್ ಅರ್ಜಿ ಸಲ್ಲಿಸಲಿದ್ದಾರೆ.

ಸಿದ್ದರಾಮಯ್ಯ ಕಾನೂನು ಹೋರಾಟ ಹೇಗಿರಲಿದೆ?

ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿರುವ ಸಿಎಂ ಪರ ವಕೀಲರು, ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಕಾನೂನು ಬಾಹಿರ ಎಂದು ವಾದ ಮಂಡಿಸಲಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17ಎ ಅಡಿ ಪ್ರಾಸಿಕ್ಯೂಷನ್ ನೀಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಅಲ್ಲದೇ, ಪ್ರಾಸಿಕ್ಯೂಷನ್‌ ನೀಡುವ ಬಗ್ಗೆ 2021ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರ್ಕಾರವೇ ಚೆಕ್‌ಲಿಸ್ಟ್ ನೀಡಿದೆ. ಆ ಚೆಕ್‌ಲಿಸ್ಟ್ ಕೂಡಾ ಪಾಲನೆಯಾಗಿಲ್ಲ. ಇನ್ನು ಡಿಜಿ-ಐಜಿಪಿ ಮಟ್ಟದ ಅಧಿಕಾರಿಗಳು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಬೇಕು. ಅನುಮತಿ ಕೇಳಲು ತನಿಖಾ ವರದಿ ಇರಬೇಕು. ಆದರೆ ಇಲ್ಲಿ ತನಿಖಾ ವರದಿಯೂ ಇಲ್ಲ, ಅಧಿಕಾರಿಗಳೂ ಇಲ್ಲ. ಖಾಸಗಿ ವ್ಯಕ್ತಿಗಳ ದೂರಿನನ್ವಯ ಪ್ರಾಸಿಕ್ಯೂಷನ್‌ಗೆ ನೀಡಿದ್ದಾರೆ. ರಾಜ್ಯಪಾಲರೇ ತನಿಖಾಧಿಕಾರಿಯಂತೆ ವರ್ತಿಸಿದ್ದಾರೆ ಎಂದು ಸಿಎಂ ಪರ ವಕೀಲರು ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಇದರ ಜೊತೆಗೆ ಸುಪ್ರೀಂಕೋರ್ಟ್‌ ಈ ಹಿಂದೆ ತೀರ್ಪು ನೀಡಿದ್ದ ಬೇರೆ ಬೇರೆ 7 ಪ್ರಕರಣಗಳನ್ನ ಉಲ್ಲೇಖಿಸಿ, ಪ್ರಾಸಿಕ್ಯೂಷನ್‌ಗೆ ನೀಡುವ ನಿಯಮ ಇದಲ್ಲ ಎಂದು ಹೈಕೋರ್ಟ್‌ನಲ್ಲಿ ಕಾನೂನು ಯುದ್ಧ ನಡೆಸಲಿದ್ದಾರೆ.

ಘಟಾನುಘಟಿ ವಕೀಲರೇ ಕಣಕ್ಕೆ!

ಇನ್ನು ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಲು ಹಿರಿಯ ವಕೀಲರಾದ ಅಭಿಷೇಕ್ ಸಿಂಘ್ವಿ ಮತ್ತು ಕಪಿಲ್ ಸಿಬಲ್ ಇಂದು ಬೆಂಗಳೂರಿಗೆ ಆಗಮಿಸ್ತಿದ್ದಾರೆ. ಹೀಗಾಗಿ ಇಂದು ಮಂತ್ರಾಲಯ ಪ್ರವಾಸ ಕೈಗೊಳ್ಳಬೇಕಿದ್ದ ಸಿಎಂ ಬೆಂಗಳೂರಿನಲ್ಲೇ ಉಳಿಯಲಿದ್ದಾರೆ.

ಆಗಸ್ಟ್ 22ಕ್ಕೆ ಶಾಸಕಾಂಗ ಪಕ್ಷದ ಸಭೆ, 23ಕ್ಕೆ ದೆಹಲಿಗೆ ಸಿಎಂ

ರಾಜಕೀಯ ಒತ್ತಡವೂ ಇರುವುದರಿಂದ ಪ್ರತಿ ಹಂತದಲ್ಲೂ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಸಿಎಂ ಸಿದ್ದರಾಮಯ್ಯ ಆಗಸ್ಟ್ 22ರಂದು ಶಾಸಕಾಂಗ ಸಭೆ ಕರೆದಿದ್ದಾರೆ. ಈಗಾಗಲೇ ಹೈಕಮಾಂಡ್ ಮತ್ತು ಸಚಿವರ ಬಲ ಸಿಕ್ಕಿದೆ. ಆದರೆ, ಸಿದ್ದರಾಮಯ್ಯಗೆ ಶಾಸಕರೇ ಬಲವಾಗಿದ್ದು, ವಿಶ್ವಾಸಕ್ಕೆ ತೆಗೆದುಕೊಳ್ಳಲು ಬುಧವಾರ ಶಾಸಕಾಂಗ ಸಭೆ ನಡೆಸಲಿದ್ದಾರೆ. ಬಳಿಕ ಆಗಸ್ಟ್ 23ಕ್ಕೆ ದೆಹಲಿಗೆ ತೆರಳಲಿರುವ ಸಿಎಂ, ವರಿಷ್ಠರ ಜೊತೆ ಪ್ರಾಸಿಕ್ಯೂಷನ್ ಬಗ್ಗೆ ಚರ್ಚಿಸಲಿದ್ದಾರೆ.

ಮತ್ತೊಂದೆಡೆ ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ ವಿಚಾರದಲ್ಲಿ ರಾಜಕೀಯ ಕಾಂಗ್ರೆಸ್ ಬಿಜೆಪಿ ನಾಯಕರ ನಡುವೆ ಜಟಾಪಟಿ ಮುಂದುವರಿದಿದೆ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ಸಿಎಂ ವಿರುದ್ಧ ದೂರು ನೀಡಿರೋ ಟಿಜೆ ಅಬ್ರಾಹಂ ಮತ್ತು ಪ್ರದೀಪ್ ಈಗಾಗಲೇ ಕೇವಿಯಟ್ ಸಲ್ಲಿಸಿದ್ದಾರೆ. ದೂರುದಾರರ ಪರ ವಕೀಲರು ಪ್ರಾಸಿಕ್ಯೂಷನ್‌ ನೀಡಿರೋದು ಕಾನೂನು ಬದ್ಧವಾಗಿದೆ ಅಂತಾ ವಾದ ಮಂಡಿಸುವ ಸಾಧ್ಯತೆ ಇದೆ. ಇಂದು ಸಿಎಂ ಸಿದ್ದರಾಮಯ್ಯಗೆ ಮಹತ್ವದ ದಿನವಾಗಿದ್ದು, ಹೈಕೋರ್ಟ್‌ನಲ್ಲಿ ಏನಾಗುತ್ತದೆ ಎಂಬ ಕುತೂಹಲ ಗರಿಗೆದರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:27 am, Mon, 19 August 24