ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಸಿಕ್ಕ ವಿಶಿಷ್ಟ ವ್ಯಕ್ತಿಯನ್ನು ಪರಿಚಯಿಸಿದ ಮಾಜಿ ಸಚಿವ ಸುರೇಶ್ ಕುಮಾರ್
ಮನೆ ಮನೆ ಕಾರ್ಯಕ್ರಮದಲ್ಲಿ ಭೇಟಿಯಾದ ವಿಶಿಷ್ಟ ವ್ಯಕ್ತಿಯೊಬ್ಬರ ಕುರಿತು ಮಾಹಿತಿ ಹಂಚಿಕೊಳ್ಳುವ ಮೂಲಕ ಮಾಜಿ ಸಚಿವ ಸುರೇಶ್ ಕುಮಾರ್ ಎಲ್ಲರಿಗೂ ಅವರ ಪರಿಚಯ ಮಾಡಿಕೊಟ್ಟಿದ್ದಾರೆ.
![ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಸಿಕ್ಕ ವಿಶಿಷ್ಟ ವ್ಯಕ್ತಿಯನ್ನು ಪರಿಚಯಿಸಿದ ಮಾಜಿ ಸಚಿವ ಸುರೇಶ್ ಕುಮಾರ್](https://images.tv9kannada.com/wp-content/uploads/2022/11/New-Project-2022-11-23T150340.002.jpg?w=1280)
ಮನೆ ಮನೆ ಕಾರ್ಯಕ್ರಮದಲ್ಲಿ ಭೇಟಿಯಾದ ವಿಶಿಷ್ಟ ವ್ಯಕ್ತಿಯೊಬ್ಬರ ಕುರಿತು ಮಾಹಿತಿ ಹಂಚಿಕೊಳ್ಳುವ ಮೂಲಕ ಮಾಜಿ ಸಚಿವ ಸುರೇಶ್ ಕುಮಾರ್ ಎಲ್ಲರಿಗೂ ಅವರ ಪರಿಚಯ ಮಾಡಿಕೊಟ್ಟಿದ್ದಾರೆ. ಅವರೇ ಹೇಳಿರುವಂತೆ, ನಮ್ಮ ರಾಜಾಜಿನಗರ ಕ್ಷೇತ್ರದ ಮನೆ ಮನೆ ಭೇಟಿ ಕಾರ್ಯದ ಸಂದರ್ಭದಲ್ಲಿ ನಿನ್ನೆ ವಿಶಿಷ್ಟ ವ್ಯಕ್ತಿಯ ಭೇಟಿಯಾಯಿತು. ಇವರ ಸಾಧನೆ ನಿಜಕ್ಕೂ ಮೆಚ್ಚಲೇಬೇಕಾದದ್ದು.
1963 ರಲ್ಲಿ ಜನಿಸಿದ ರಾಜನ್_ಬಾಬು ಎಲ್ಲರಂತೆ ಶಾಲೆಗೆ ಹೋಗಿ ಶಿಕ್ಷಣ ಪಡೆಯುವ ಅದೃಷ್ಟ ಹೊಂದಿರಲಿಲ್ಲ. ಬಾಲ್ಯದಿಂದಲೇ ಎಲ್ಲೆಲ್ಲೋ ಕೆಲಸಗಳನ್ನು ಮಾಡುತ್ತಾ 1981ರಲ್ಲಿ ನೇರವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತಮ ಅಂಕಗಳೊಂದಿಗೆ ಪಾಸ್ ಮಾಡಿದವರು.
ಅವರೇ ಹೇಳುವಂತೆ ಬೇರೆಯವರ ಮನೆಯ ದೀಪದ ಬೆಳಕಿನಲ್ಲಿ ಓದಿ ಬೆಳೆದವರು ಇವರು. ನಂತರ ಮೈಕೋ ಬಾಶ್ ಸಂಸ್ಥೆಯಲ್ಲಿ 1985 ರಾlಲ್ಲಿ apprentice ತರಬೇತಿ ಪೂರ್ಣಗೊಳಿಸಿದ ರಾಜನ್ ಬಾಬು, ಎಸ್ ಜೆ ಪಿ ಪಾಲಿಟೆಕ್ನಿಕ್ ನಲ್ಲಿ ಸಂಜೆ ತರಗತಿಗಳಿಗೆ ಸೇರಿ 1989 ರಲ್ಲಿ ಡಿಪ್ಲೋಮಾ ಮುಗಿಸಿದರು.
ನಂತರ 1992 ರಲ್ಲಿ AMIE ಪದವಿಯನ್ನು ಪಡೆಯುವುದರಲ್ಲಿ ಶಕ್ಯರಾದರು. ನಂತರ 1997 ರಲ್ಲಿ ಪ್ರಸಿದ್ಧ BITS Pilani ಮೂಲಕ MS ಪದವಿಯನ್ನೂ ಗಳಿಸಿದ್ದು ಇವರ ಹೆಗ್ಗಳಿಕೆ.
ಇದಾದ ಮೇಲೆ ಇಸ್ರೋ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶ್ರೀ ರಾಜನ್ ನಂತರ ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕಾಗೆ ಹೋಗಿ ಅಲ್ಲಿ ಕೆಲಸ ಮಾಡಿದರು.
ಮತ್ತೆ ಭಾರತಕ್ಕೆ ವಾಪಸ್ಸು ಬಂದ ಮೇಲೆ ಅವರಿಗೆ ಬಲವಾದ ಇಚ್ಛೆ ಮೂಡಿ 2020ರಲ್ಲಿ ಪಿಯುಸಿ ಪರೀಕ್ಷೆ ಪಾಸ್ ಮಾಡಿದರು. ಅವರ ಮನಸ್ಸಿನಲ್ಲಿ ಇದ್ದಿದ್ದು NEET ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದು.
ಅವರ ಪರಿಶ್ರಮದಿಂದ NEET ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಸಹ. ಈಗ ಅವರೊಂದು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅದರ ಕುರಿತು ನನ್ನೊಡನೆ ಚರ್ಚಿಸಿದರು. ಅವರ ಶ್ರೀಮತಿಯವರು ಬೆಸ್ಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಮಗಳು NEET ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ರಾಜನ್ ಬಾಬು ರವರ ಈ ರೀತಿಯ ಪಯಣ ಕೇಳಿ ನಾನು ಬೆರಗಾದೆ. ಅವರಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Wed, 23 November 22