Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಮುದ್ದಿನ ಮಗ, ವಿಕ್ಟೋರಿಯಾ ಕೆರೆಯಲ್ಲಿ ಈಜಲು ಹೋದವನು ಬಾರದ ಲೋಕಕ್ಕೆ ಪಯಣ ಬೆಳೆಸಿದ

ಮುದ್ದಿನ ಮನೆ ಮಗನನ್ನು ಕಳೆದುಕೊಂಡು ಕುಟುಂಬಸ್ಥರೂ ಕಣ್ಣೀರು ಆಗಿದ್ದಾರೆ. ಅಪ್ಪನ ಪಕ್ಕವೇ ಮಲಗೋ ನೀನು ಹೋದೆಯಲ್ಲೋ ಅಣ್ಣಾ ಅಂತ ತಂಗಿಯ ರೋದನ. ಬಾಳಿ ಬದುಕಬೇಕಾದ ಮೊಮ್ಮಗನ ಕಳೆದುಕೊಂಡು ಅಜ್ಜಿಯ ಗೋಳಾಟ. ಪ್ರೀತಿಯ ಓಣಿ ಹುಡುಗನ ಕಳೆದುಕೊಂಡು ಮಹಿಳೆಯರ ಕಣ್ಣೀರು.

ಮನೆಯ ಮುದ್ದಿನ ಮಗ, ವಿಕ್ಟೋರಿಯಾ ಕೆರೆಯಲ್ಲಿ ಈಜಲು ಹೋದವನು ಬಾರದ ಲೋಕಕ್ಕೆ ಪಯಣ ಬೆಳೆಸಿದ
ವಿಕ್ಟೋರಿಯಾ ಕೆರೆಯಲ್ಲಿ ಈಜಲು ಹೋದವನು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 02, 2023 | 3:30 PM

ಆತ ಮನೆಯ ಮುದ್ದಿನ ಮಗ. ಆತನಿಗೂ ಅಜ್ಜಿ, ಅಪ್ಪ, ಅಮ್ಮ, ಅಕ್ಕ ಅಂದ್ರೆ ಬಲು ಪ್ರೀತಿ. ಅದ್ರಲ್ಲೂ ಅಪ್ಪನಿಗೆ ಈತ ಇಲ್ಲ ಅಂದ್ರೆ ನಿದ್ದೆಯೇ ಬರಲ್ಲ. ಆದ್ರೆ, ಈ ಮನೆಯ ಮುದ್ದಿನ ಮಗ ಈಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ಗೆಳೆಯರ ಜೊತೆ ಕೆರೆಗೆ ಈಜಲು (Swimming) ಹೋದ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ. ಮುದ್ದಿನ ಮಗನನ್ನು ಕಳೆದುಕೊಂಡು ಇಡೀ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿ ಹೋಗಿದೆ. ಮನೆ ಕೆಲಸ ಮುಗಿಸಿ ಗೆಳೆಯರ ಜೊತೆ ಈಜಲು ಕೆರೆಗೆ (victoria lake) ಹೋದ ಬಾಲಕ…! ಬೃಹತ್ ಕೆರೆಯಲ್ಲಿ ಈಜುವಾಗ ಕೈಸೋತು ಮುಳುಗಿದ ಬಾಲಕ ಹೆಣವಾಗಿ ಪತ್ತೆ (Death)…! ಬೃಹತ್ ಕೆರೆಗೆ ಬೇಲಿ ಇಲ್ಲ.. ವರ್ಷಕ್ಕೆ ಎರಡ್ಮೂರು ಬಾಲಕರು, ಯುವಕ್ರು ಬಲಿ…! ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ವಿರುದ್ಧ ಗ್ರಾಮಸ್ಥರು ಆಕ್ರೋಶ…! ಬಾರದ ಲೋಕಕ್ಕೆ ಪಯಣ ಬೆಳೆಸಿದ ಬಾಲಕ ಕಣ್ಣೀರಲ್ಲಿ ಮುಳುಗಿದ ಕುಟುಂಬ….! ಕೆರೆ ಹತ್ತಿರ ಜಮಾಯಿಸಿದ ನೂರಾರು ಜನ ಕೂತುಹಲದಿಂದ ನೋಡ್ತಾಯಿದ್ದ ಜನ…! ಇದು ಒಟ್ಟಾರೆ ಘಟನೆಯನ್ನು ಕಟ್ಟಿಕೊಡುವ ತುಣುಕು ದೃಶ್ಯಗಳು.

ಮುದ್ದಿನ ಮನೆ ಮಗನನ್ನು ಕಳೆದುಕೊಂಡು ಕುಟುಂಬಸ್ಥರೂ ಕಣ್ಣೀರು ಆಗಿದ್ದಾರೆ. ಅಪ್ಪನ ಪಕ್ಕವೇ ಮಲಗೋ ನೀನು ಹೋದೆಯಲ್ಲೋ ಅಣ್ಣಾ ಅಂತ ತಂಗಿಯ ರೋದನ. ಬಾಳಿ ಬದುಕಬೇಕಾದ ಮೊಮ್ಮಗನ ಕಳೆದುಕೊಂಡು ಅಜ್ಜಿಯ ಗೋಳಾಟ. ಪ್ರೀತಿಯ ಓಣಿ ಹುಡುಗನ ಕಳೆದುಕೊಂಡು ಮಹಿಳೆಯರ ಕಣ್ಣೀರು. ವಿಧಿಯ ಆಟಕ್ಕೆ ಹಿಡಿಶಾಪ ಹಾಕ್ತಾಯಿರೋ ಕುಟುಂಬಸ್ಥರು. ಈ ಮನಕಲುಕುವ ದೃಶ್ಯಗಳು ಕಂಡಿದ್ದು ಗದಗ (Gadag) ಜಿಲ್ಲೆಯ ಮುಂಡರಗಿ (Mundargi) ತಾಲೂಕಿನ ಡಂಬಳ ಗ್ರಾಮದಲ್ಲಿ.

ಈ ಫೋಟೋದಲ್ಲಿ ಇರೋ ಬಾಲಕನ ಹೆಸ್ರು ಅರುಣ ಯತ್ನಳ್ಳಿ ಅಂತ. ನಿನ್ನೆ ಜಮೀನು, ಮನೆಯಲ್ಲಿ ಕೆಲಸ ಮುಗಿಸಿದ್ದಾನೆ. ಸಂಜೆ ಗೆಳೆಯರ ಜೊತೆ ಗ್ರಾಮದ ವಿಕ್ಟೋರಿಯಾ ಕೆರೆಗೆ ಈಜಲು ಹೋಗಿದ್ದಾನೆ. ಯುವಕ್ರು ಎಲ್ಲರೂ ಸೇರಿ ಭರ್ಜರಿ ಈಜು ಹೊಡೆಯುತ್ತಾ ಕೆರೆಯಲ್ಲಿ ಮುಂದೆ ಸಾಗಿದ್ದಾರೆ. ಆದ್ರೆ, ಅರುಣಗೆ ಕೈಸೋತು ಸುಸ್ತಾಗಿದ್ದಾನೆ. ಎಷ್ಟೇ ಪ್ರಯತ್ನ ಮಾಡಿದ್ರು ಮುಂದೆ ಸಾಗಲು ಆಗಿಲ್ಲ. ಆಗ ಕೆರೆಯಲ್ಲಿ ಮುಳುಗಿ ಹೋಗಿದ್ದಾನೆ.

ಆಗ ಜೊತೆ ಇದ್ದ ಯುವಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಓಡೋಡಿ ಕೆರೆಯತ್ತ ಆಗಮಿಸುತ್ತಿದ್ದಂತೆ ಅರುಣ ಅಷ್ಟರಲ್ಲೆ ಕರೆಯಲ್ಲಿ ಮುಳುಗಿ ಹೋಗಿದ್ದ. ಗ್ರಾಮಸ್ಥರು ಬದುಕಿಸಲು ಎಷ್ಟೇ ಹುಡುಕಿದ್ರೂ ಆದ್ರೆ, ಅರುಣ ಮಾತ್ರ ತನ್ನ ಬಾಳಿಯ ಪಯಣ ಮುಗಿಸಿಬಿಟ್ಟಿದ್ದ. ಇಂದು ಗ್ರಾಮಸ್ಥರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸ್ರು ಜಂಟಿ ಕಾರ್ಯಾಚರಣೆ ಮಾಡಿದ್ದಾರೆ.

ನೂರಾರು ಎಕರೆ ಬೃಹತ್ ಕೆರೆ ಅಪಾರ ಪ್ರಮಾಣದಲ್ಲಿ ನೀರು ಇದೆ. ಹೀಗಾಗಿ ಅರುಣ ಶವ ಶೋಧಕ್ಕೆ ಸಾಕಷ್ಟು ಹೆಣಗಾಡಿದ್ರು. ಸ್ಥಳೀಯ ಈಜು ತಜ್ಞರು ಬಾಲಕ ಶವ ಪತ್ತೆ ಮಾಡಿದರು. ಮುದ್ದಿನ ಮೊಮ್ಮಗನ ಕಳೆದುಕೊಂಡು ಅಜ್ಜಿಯ ಗೋಳಾಟ ನೆರೆದ ಜನ್ರ ಕಣ್ಣಂಚು ತೇವಗೊಳಿಸಿತ್ತು.

ಅರುಣ ಎರಡನೇ ಪುತ್ರ. ಹೆತ್ತವ್ರಿಗೆ ಭಾರವಾಗಬಾರದು ಅನ್ನೋ ಭಾವನೆ ಉಳ್ಳವನಾಗಿದ್ದ. ಪಿಯುಸಿ ಪ್ರಥಮ ವರ್ಷ ಮುಗಿಸಿದ ಅರುಣ ಐಟಿಐ ಕಲಿಯಬೇಕು ಅನ್ನೋ ಆಸೆ ಇತ್ತು. ಹೀಗಾಗಿ ಸ್ವತಃ ತಾನೇ ಕೃಷಿ ಕಲಸಕ್ಕೆ ಹೋಗಿ ದುಡಿದು ಹಣ ಸಂಗ್ರಹ ಮಾಡ್ತಾಯಿದ್ದ. ತಂದೆ, ತಾಯಿ ಕೊಟ್ರೆ ಎಲ್ಲವೂ ಖರ್ಚು ಮಾಡ್ತಾರೆ ಅಂತ ತಾನು ದುಡಿದ ಹಣ ಅಜ್ಜಿ ಗಂಗವ್ವಗೆ ನೀಡ್ತಾಯಿದ್ದ.

ಐಟಿಐ ಕಲಿಯಬೇಕು. ಕಂಪನಿಯಲ್ಲಿ ಕೆಲಸ ಮಾಡಿ ತಂದೆ, ತಾಯಿ, ಅಜ್ಜಿ, ತಂಗಿಯನ್ನು ಸಾಕಬೇಕು ಅನ್ನೋ ಕನಸು ಅರುಣನದ್ದಾಗಿತ್ತು. ಹೀಗಾಗಿ ಬೆಳಗ್ಗೆ ಎದ್ದು ಕಡಲೆ ರಾಶಿ ಸೇರಿದಂತೆ ಕೃಷಿ ಕೆಲಸಕ್ಕೆ ಹೋಗಿ ದುಡಿಯುತ್ತಿದ್ದ. ಅಜ್ಜಿಯ ಪ್ರೀತಿಯ ಮಗನಾಗಿದ್ದ ಅರುಣ ತಂದೆಯ ಮುದ್ದಿನ ಮಗನಾಗಿದ್ದ. ನಿತ್ಯವೂ ತಂದೆ ಸಿದ್ದಣ್ಣ ಅರುಣ ಇಬ್ಬರು ಅಕ್ಕಪಕ್ಕದಲ್ಲೇ ಮಲಗುತ್ತಿದ್ರು. ಮಗ ಇಲ್ಲಾಂದ್ರೆ ತಂದೆಗೂ ನಿದ್ದೆ ಬರ್ತಾಯಿರಲಿಲ್ಲವಂತೆ.

ಹೀಗಾಗಿ ಅಣ್ಣ ನೀ ಇಲ್ಲದೇ ಅಪ್ಪ ಒಬ್ಬನೇ ಹೇಗೆ ಮಲಗಬೇಕು ಅಂತ ಕಣ್ಣೀರು ಹಾಕುವ ದೃಶ್ಯ ಕರಳು ಹಿಂಡುವಂತಿತ್ತು. ಇವತ್ತು ಈ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ನೂರಾರು ಜನ್ರು ಕೆರೆಯತ್ತ ಹರಿದುಬಂದಿದ್ದಾರೆ. ಸ್ಥಳೀಯ ಈಜು ತಜ್ಞರು, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಆಳಕ್ಕೆ ಇಳಿದು ಶೋಧ ನಡೆಸಿದ್ರು. ಮಗನಿಗೆ ಐಟಿಐ ಕಲಿತು ಕಂಪನಿಯಲ್ಲಿ ಕೆಲಸ ಮಾಡಬೇಕು ಅನ್ನೋ ಕನಸು ಇತ್ತು. ಆದ್ರೆ ವಿಧಿಯಾಟ ಮಗನೇ ಹೋಗಿ ಬಿಟ್ಟ ಅಂತ ತಂದೆ ಕಣ್ಣೀರು ಹಾಕುತ್ತಿದ್ದಾರೆ

ಈ ದುರಂತಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೇ ಕಾರಣ ಅಂತಾನೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸುಮಾರು 500 ಎಕರೆ ಪ್ರದೇಶದಲ್ಲಿರೋ ಬೃಹತ್ ಕೆರೆ ಫುಲ್ ತುಂಬಿದೆ. ಆದ್ರೆ, ಕೆರೆಗೆ ಯಾವುದೇ ಸೇಫ್ಟಿ ಇಲ್ಲ. ಕಾವಲುಗಾರು ಇಲ್ಲ. ಹೀಗಾಗಿ ಪ್ರತಿ ವರ್ಷವೂ ಎರಡ್ಮೂರು ಯುವಕ್ರು ಈ ರೀತಿ ಸಾವನ್ನಪುತ್ತಿದ್ದಾರೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಲೂ ಸಾಕಷ್ಟು ಯುವಕರು ನಿತ್ಯವೂ ಈಜಲು ಕೆರೆಗೆ ಹೋಗ್ತಾರೆ. ಸಾಕಷ್ಟು ಆಳವಾಗಿರೋದ್ರಿಂದ ಈ ದುರಂತ ನಡೆದಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆಗೆ ಕಾವಲುಗಾರನನ್ನು ನೇಮಕ ಮಾಡುವ ಮೂಲಕ ದುರಂತ ತಡೆಯುವ ಕೆಲಸ ಮಾಡಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ