ಸರ್ಕಾರದಿಂದಲೇ ಭೂಕಬಳಿಕೆ: ಜಿಲ್ಲೆಜಿಲ್ಲೆಗಳಲ್ಲಿ ಕಾಂಗ್ರೆಸ್​ ಭವನಕ್ಕೆ ಭೂಮಿ ನೀಡಿದ ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಿಂದ ಆರ್​ಎಸ್​ಎಸ್​ಗೆ ಫಂಡ್ ಹೋಗಿದೆ ಎಂಬ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಬಿಜೆಪಿ ತೀಕ್ಷ್ಣ ತಿರುಗೇಟು ನೀಡಿದೆ. ಕಾಂಗ್ರೆಸ್ ಸರ್ಕಾರವೇ ಪಕ್ಷದ ಕಚೇರಿಗಳಿಗಾಗಿ ಪಂಚಾಯಿತಿ ಮಟ್ಟದಲ್ಲಿಯೂ ಭೂಕಬಳಿಕೆ ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಜತೆಗೆ, ಪೂರಕ ದಾಖಲೆಗಳನ್ನೂ ಬಿಡುಗಡೆ ಮಾಡಿದೆ.

ಸರ್ಕಾರದಿಂದಲೇ ಭೂಕಬಳಿಕೆ: ಜಿಲ್ಲೆಜಿಲ್ಲೆಗಳಲ್ಲಿ ಕಾಂಗ್ರೆಸ್​ ಭವನಕ್ಕೆ ಭೂಮಿ ನೀಡಿದ ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Image Credit source: tv9
Edited By:

Updated on: Feb 17, 2026 | 1:48 PM

ಬೆಂಗಳೂರು, ಫೆಬ್ರವರಿ 17: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಪಕ್ಷದ ಕಚೇರಿಗಳಿಗಾಗಿ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ (Civic Amenity) ಸೈಟ್‌ಗಳನ್ನು ಪಡೆದುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ದಾಖಲೆಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪಡೆದುಕೊಳ್ಳಲಾಗುತ್ತಿದೆ. ಬಡವರಿಗೆ ಮನೆ ಭೂಮಿ ನೀಡದೇ ಸರ್ಕಾರವೇ ಭೂ ಕಬಳಿಕೆಯಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.

ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಕಡೆಗಳಲ್ಲಿ ಪಕ್ಷದ ಕಚೇರಿಗಳಿಗಾಗಿ ಸಿಎ ಸೈಟ್‌ಗಳನ್ನು ನೀಡಲಾಗಿದೆ ಎಂದು ದಾಖಲೆಗಳ ಸಮೇತ ತಿಳಿಸಿದರು.

ಎಲ್ಲೆಲ್ಲಿ ಕಡಿಮೆ ಬೆಲೆಗೆ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರಿ ಭೂಮಿ?

ಚಿಕ್ಕಬಳ್ಳಾಪುರದಲ್ಲಿ ಲಕ್ಷಾಂತರ ಮೌಲ್ಯದ ಸೈಟ್ ಕೇವಲ 22 ಲಕ್ಷ ರೂಪಾಯಿಗೆ, ಬಾದಾಮಿಯಲ್ಲಿ 1.22 ಲಕ್ಷ ರೂ,ಗೆ ನೀಡಲಾಗಿದೆ. ಎಸ್‌ಆರ್ ವ್ಯಾಲ್ಯೂನ ಕೇವಲ ಶೇ 5 ರ ಹಣ ನೀಡಿ ಸರ್ಕಾರ ಸೈಟ್‌ಗಳನ್ನು ಕಬಳಿಸುತ್ತಿದೆ ಎಂದು ಅವರು ದೂರಿದರು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬೆಲೆಬಾಳುವ ಸೈಟ್‌ಗಳನ್ನು ಪಡೆದುಕೊಳ್ಳಲಾಗಿದ್ದು, ಸುಮಾರು 40 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 2 ಕೋಟಿ ರೂ.ಗೆ ಪಡೆದುಕೊಂಡಿರುವುದು ಸರ್ಕಾರವೇ ಭೂಕಬಳಿಕೆ ಮಾಡಿರುವುದನ್ನು ತೋರಿಸುತ್ತದೆ ಎಂದು ಹೇಳಿದರು.

ನಗರ ಯೋಜನಾ ನಿಯಮಗಳ ಪ್ರಕಾರ ಸಿಎ ಸೈಟ್‌ಗಳನ್ನು ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆ, ಉದ್ಯಾನವನಗಳಿಗಾಗಿ ಮಾತ್ರ ಬಳಸಬೇಕು. ಆದರೆ ರಾಜಕೀಯ ಪಕ್ಷದ ಕಚೇರಿಗಳಿಗೆ ನೀಡುವುದು ನಿಯಮ ಉಲ್ಲಂಘನೆ ಎನ್ನಲಾಗಿದೆ. ಆದಾಗ್ಯೂ ದೇವನಹಳ್ಳಿ ಪಟ್ಟಣದಲ್ಲಿ ಸುಮಾರು 17 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಿಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೀಡುವ ಪ್ರಸ್ತಾವವೂ ವಿವಾದಕ್ಕೆ ಕಾರಣವಾಗಿದೆ.

ಏತನ್ಮಧ್ಯೆ, ಗ್ರಾಮ ಪಂಚಾಯತ್ ಭೂಮಿಯನ್ನು ಪಕ್ಷದ ಕಚೇರಿಗೆ ಲೀಸ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ಪಷ್ಟಪಡಿಸಿದ್ದು, ಕಾಂಗ್ರೆಸ್ ಪ್ರಸ್ತಾವವನ್ನು ತಿರಸ್ಕರಿಸಿರುವ ಘಟನೆ ಕೂಡ ನಡೆದಿರುವ ಬಗ್ಗೆ ವರದಿಯಾಗಿದೆ.

ವಿಧಾನ ಪರಿಷತ್​​ನಲ್ಲಿ ಸರ್ಕಾರ ತಿಳಿಸಿದ್ದೇನು?

ವಿಧಾನ ಪರಿಷತ್​​ನಲ್ಲಿ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಉಡುಪಿಯ ಅಂಜಾರು ಗ್ರಾಮ, ಕಾರ್ಕಳದ ಕುಕ್ಕುಂದೂರು ಹಾಗೂ ಕುಂದಾಪುರದಲ್ಲಿ ಸರ್ಕಾರಿ ಭೂಮಿಯನ್ನು ಕಾಂಗ್ರೆಸ್ ಭವನಕ್ಕೆ ನೀಡಲಾಗಿದೆ.

ಇದನ್ನೂ ಓದಿ: ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು: ಸಚಿವ ಪ್ರಿಯಾಂಕ್ ಖರ್ಗೆ

ಈ ಎಲ್ಲ ಬೆಳವಣಿಗೆಗಳನ್ನು ಉಲ್ಲೇಖಿಸಿರುವ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಆಸ್ತಿಯನ್ನು ಪಕ್ಷದ ಹಿತಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ತಕ್ಷಣ ಈ ಸೈಟ್‌ಗಳನ್ನು ಸರ್ಕಾರ ವಾಪಸ್ ಪಡೆಯಬೇಕು, ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us