ಮೂರು ವರ್ಷಗಳ ನಿರಂತರ ಶ್ರಮ.. ಆಲೂಗಡ್ಡೆ ಕೃಷಿಯಲ್ಲಿ ಮಹಾ ಕ್ರಾಂತಿ! ಯಾವುದು ಆ ಹೊಸ ಕೃಷಿ ಪದ್ಧತಿ?
ಮುಂದಿನ ಮುಂಗಾರು ಬಿತ್ತನೆ ವೇಳೆಗೆ ಕನಿಷ್ಟ 1 ರಿಂದ 2 ಕೋಟಿ ಸಸಿಗಳನ್ನ ರೈತರಿಗೆ ನೀಡಲು ಗುರಿ ಹೊಂದಲಾಗಿದ್ದು, ಇದಕ್ಕಾಗಿ ನರ್ಸರಿ ಮಾಲೀಕರ ಸಭೆಗಳನ್ನು ಕೂಡ ನಡೆಸಿ ಹೆಚ್ಚು ಲಾಭದಾಯಕವಾದ ಈ ಆಲೂಗಡ್ಡೆ ನರ್ಸರಿ ಮಾಡಲು ಉತ್ತೇಜನ ನೀಡಲಾಗುತ್ತಿದೆ
ಹಾಸನ: ಆಲೂಗಡ್ಡೆ ಬಿತ್ತನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಉದ್ದೇಶದಿಂದ ಹಾಸನ ತಾಲೂಕಿನ ಸೋಮನಹಳ್ಳಿಯ ಕಾವಲು ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿಗಳು ಕೈಗೊಂಡಿದ್ದ ಅಂಗಾಂಶ ಕೃಷಿ ಸಂಶೋಧನೆ ಸತತ 3 ವರ್ಷಗಳ ಪರಿಶ್ರಮದಿಂದ ಯಶಸ್ವಿಯಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅಂಗಮಾರಿ ರೋಗ, ಕಳಪೆ ಬಿತ್ತನೆ ಬೀಜ, ಬೆಲೆ ಕುಸಿತ ಹಾಗೂ ಹವಾಮಾನ ವೈಪರೀತ್ಯದಿಂದ ಆಲೂಗಡ್ಡೆ ಬೆಳೆಗಾರರು ನಿರಂತರ ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತಂದುಕೊಡುತ್ತಿದ್ದ ಆಲೂಗಡ್ಡೆ ಬೆಳೆ 50,000 ಹೆಕ್ಟೇರ್‌ನಿಂದ 8,000 ಹೆಕ್ಟೇರ್ಗೆ ಇಳಿದಿದೆ.
ಆದ್ದರಿಂದ ಬಿತ್ತನೆ ಆಲೂಗಡ್ಡೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಅಂಗಾಂಶ ಕೃಷಿಗೆ ಮೊರೆ ಹೋಗಿದ್ದ ಕೇಂದ್ರದ ವಿಜ್ಞಾನಿಗಳು ಅದರಲ್ಲಿ ಯಶಸ್ಸು ಸಾಧಿಸಿದ್ದು, ಈ ನಿಟ್ಟಿನಲ್ಲಿ ಮುಂಗಾರು ಮುಂದಿನ ಹಂಗಾಮಿಗೆ ಅಂಗಾಂಶ ಕೃಷಿಯ ಸಸಿ ವಿತರಿಸಲು ಯೋಜನೆ ರೂಪಿಸಿದೆ. ಪ್ರಾಯೋಗಿಕವಾಗಿ ಅರಸೀಕೆರೆ ತಾಲೂಕಿನ ಬಾಗೇಶಪುರ, ಕೋಡಿಹಳ್ಳಿ, ಹಾಸನದ ತೇಜೂರು ಭಾಗದ ಕೆಲ ರೈತರಿಗೆ ನೀಡಿದ ಬಿತ್ತನೆ ಸಸಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಏನಿದು ಅಂಗಾಂಶ ಕೃಷಿ? ರಾಜ್ಯದ ಎರಡನೇ ಆಲೂಗಡ್ಡೆ ಕೃಷಿ, ಅಂಗಾಂಶ ಪ್ರಯೋಗಾಲಯ ಮತ್ತು ಹಸಿರು ಮನೆ ನಿರ್ಮಿಸಿದ್ದು, ಸಸಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಶಿಮ್ಲಾದಿಂದ ತರಿಸಲಾದ ಮದರ್ ಪ್ಲಾಂಟ್ನಿಂದ ಪಡೆದ ಅಂಗಾಂಶಗಳನ್ನ ಎಂ.ಎಸ್. ಮೀಡಿಯಾಗೆ ಹಾಕಲಾಗುತ್ತಿದ್ದು, ಬೇರು ಬರಲು ಬೇಕಾದ ನ್ಯೂಟ್ರಿಯಂಟ್ಸ್ ನೀಡಲಾಗುತ್ತದೆ.
ನಂತರದಲ್ಲಿ ಬಾಟಲ್ ಒಳಗೆ ಪುಟ್ಟದಾಗಿ ಬೆಳೆದ ಸಸಿಗಳನ್ನ ತೆಂಗಿನ ನಾರಿನ ಪುಡಿಯಿಂದ ತಯಾರಿಸಲಾದ ಮಡಿಗಳಲ್ಲಿ ನಾಟಿ ಮಾಡಲಾಗುತ್ತದೆ. 12 ದಿನಗಳ ಬಳಿಕ ಸಸಿಯ ಎಳೆಯ 3 ಎಲೆಗಳುಳ್ಳ ಕುಡಿ ಕಾಂಡ ಕಡ್ಡಿಗಳನ್ನು ಚಿವುಟಲಾಗುತ್ತದೆ.
ಹೀಗೆ ಚಿವುಟಿದ ಕುಡಿಯನ್ನು ಮತ್ತೆ ಕೋಕೊ ಪಿಟ್ಗೆ ನೆಡಲಾಗುತ್ತದೆ. ಅಲ್ಲಿ ಬೇರು ಬಿಟ್ಟ ಸಸಿಗಳನ್ನು ನರ್ಸರಿ ಟ್ರೈಗೆ ಹಾಕಿ, ನಂತರ 12 ರಿಂದ 15 ದಿನಗಳ ಬಳಿಕ ಸಸಿಗಳು ನಾಟಿ ಮಾಡಲು ಸಿದ್ಧಗೊಳ್ಳುತ್ತವೆ. ಈಗಾಗಲೆ ವಿಯೆಟ್ನಾಂ, ನೇಪಾಳ, ಬಾಂಗ್ಲಾದೇಶ ಸೇರಿ ಹಲವು ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಆಲೂಗಡ್ಡೆ ಅಂಗಾಂಶ ಕೃಷಿ ಬೆಳೆಯುತ್ತಿರುವ ಆಲೂಗಡ್ಡೆ ಬೇಸಾಯಕ್ಕೆ ಪರ್ಯಾಯವಾಗಿದ್ದು, ಹೆಚ್ಚು ಸುಲಭ, ಲಾಭದಾಯಕ ಹಾಗೂ ರೋಗಮುಕ್ತವಾಗಿರಲಿದೆ.
ಸಸ್ಯಾಭಿವೃದ್ಧಿಯ ಆರ್ಥಿಕತೆ: ಅಂದಾಜು 1 ಸಸಿ ಉತ್ಪಾದಿಸಲು 30 ಪೈಸೆ ವೆಚ್ಚ ತಗುಲಬಹುದು. ಜೊತೆಗೆ ಹೆಚ್ಚುವರಿಯಾಗಿ 30 ಪೈಸೆ ಖರ್ಚಿನಲ್ಲಿ ಇತರ ಸಾಧನಗಳ ಲೆಕ್ಕ ಹಾಕಿದರೆ 1 ಸಸಿಗೆ 60 ಪೈಸೆ ಬೆಲೆ ನಿಗದಿಪಡಿಸಲು ನಿರ್ಧರಿಸಬಹುದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಈ ರೀತಿಯ ಸಸ್ಯಾಭಿವೃದ್ಧಿಯು ಉದ್ಯಮವಾಗಿ ಮಾರ್ಪಾಟಾಗಿದ್ದು, ಆರ್ಥಿಕವಾಗಿ ಲಾಭ ಗಳಿಸಲು ನೆರವಾಗುತ್ತದೆ.
ಕುಡಿ, ಕಾಂಡ, ಕಡ್ಡಿಗಳ ನರ್ಸರಿ ಉತ್ಪಾದನೆಯಿಂದ ಉತ್ಪಾದಕರಿಗೆ ಉದ್ಯೋಗವಕಾಶ ಸೃಷ್ಟಿಯಾಗುವ ನಿರೀಕ್ಷೆಯೂ ಇದೆ. ಆಲೂಗಡ್ಡೆ ಜೊತೆಗೆ ತರಕಾರಿ ಬೆಳೆ ಮಾಡುವ ಮೂಲಕ ರೈತರು ಆರ್ಥಿಕ ಚೇತರಿಕೆ ಕಂಡುಕೊಳ್ಳಬಹುದು. ಬೀಜೋತ್ಪಾದನೆ ನಂತರ ಬೀಜ ಗಡ್ಡೆಗಳನ್ನು ಸಾಮಾನ್ಯ ಗಡ್ಡೆಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅವಕಾಶ ಸಿಗಲಿದ್ದು, ಈ ಸಸಿಗಳನ್ನು ನೆಟ್ಟು ಬೆಳೆಸಿದ ಬಳಿಕ ಬರುವ ಫಸಲನ್ನು ಇಟ್ಟುಕೊಂಡು ಮುಂದಿನ ವರ್ಷದ ಬೆಳೆಗೆ ಬಿತ್ತನೆ ಬೀಜವಾಗಿಯೂ ಬಳಸಲು ಅವಕಾಶ ಇದೆ. ಹೀಗಾಗಿಯೇ ಇದು ಬೀಜ ಸ್ವಾವಲಂಬನೆಗೆ ಹೆಚ್ಚು ಸಹಕಾರಿಯಾಗಲಿದೆ.
ಮೂರು ವರ್ಷ ಸತತ ಪರಿಶ್ರಮ: ಅಂಗಾಂಶ ಕೃಷಿ ಮೂಲಕ ಆಲೂಗಡ್ಡೆ ಬಿತ್ತನೆಯಲ್ಲಿ ಸಮಗ್ರ ಬದಲಾವಣೆ ತರಲು ಸೋಮನಹಳ್ಳಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು 3 ವರ್ಷ ಪರಿಶ್ರಮ ವಹಿಸಿದ್ದಾರೆ. ಕುಫ್ರಿ ಜ್ಯೋತಿ ಮತ್ತು ಕುಫ್ರಿ ಹಿಮಾಲಿನಿ ತಳಿಯ ಕುಡಿ, ಕಾಂಡ, ಸಸಿಗಳ ಮೌಲ್ಯ ಮಾಪನ, ವಿವಿಧ ಕಾಲಗಳಿಗೆ ಹೊಂದಾಣಿಕೆ, ಗಡ್ಡೆಗಳ ಸಂಖ್ಯೆ, ಒಟ್ಟು ಇಳುವರಿ, ನಂಜಾಣು, ರೋಗಕ್ಕೆ ತುತ್ತಾದ ಗಿಡಗಳ ಸಂಖ್ಯೆ ಮತ್ತು ಇತರ ವಿಷಯಗಳ ಬಗ್ಗೆ 2019ರಲ್ಲಿ ಅಧ್ಯಯನ ನಡೆಸಲಾಯಿತು.
ಅಧ್ಯಯನಗಳ ಫಲಿತಾಂಶದ ಪ್ರಕಾರ ಪ್ರತಿ ಗಿಡದಿಂದ ಸರಾಸರಿ 8 ರಿಂದ 10 ಗಡ್ಡೆ ಮತ್ತು 30 ರಿಂದ 50 ಗ್ರಾಂ ತೂಕವಿರುವ ಬೀಜಕ್ಕಾಗಿ ಬಳಸಲು ಸೂಕ್ತವಾಗಿರುವ ಗಡ್ಡೆಗಳನ್ನು ಬೆಳೆಯಬಹುದು ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿಕೊಂಡಿದ್ದಾರೆ. ಒಂದು ಎಕರೆಯಲ್ಲಿ 8 ರಿಂದ 10 ಟನ್ ಗಡ್ಡೆಯ ಇಳುವರಿ ಪಡೆಯಬಹುದೆಂದು ಅಂದಾಜಿಸಲಾಗಿದ್ದು. ಎಕರೆಗೆ 60,000 ರೂಪಾಯಿ ಖರ್ಚು ಮಾಡಿದರೆ 1.60 ಲಕ್ಷ ರೂಪಾಯಿ ಲಾಭ ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಜಿಲ್ಲೆಯಲ್ಲಿ ಹೆಚ್ಚು ಪ್ರಚಾರ: ತೋಟಗಾರಿಕೆ ಸಂಶೋಧನಾ ವಿಭಾಗದ ಆಲೂಗಡ್ಡೆ ಅಂಗಾಂಶ ಕೃಷಿ ಸಂಶೋಧನೆ ಸಾಕಾರಗೊಳ್ಳುತ್ತಲೇ ಕಾರ್ಯ ಪ್ರವೃತ್ತರಾಗಿರುವ ತೋಟಗಾರಿಕೆ ಇಲಾಖೆ ಈ ಪದ್ಧತಿಯನ್ನ ಹೆಚ್ಚು ಜನಪ್ರಿಯಗೊಳಿಸಲು ಯತ್ನ ನಡೆಸುತ್ತಿದೆ. ಈಗಾಗಲೆ ಜಿಲ್ಲೆಯ 25ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಸಸಿಗಳನ್ನ ನೀಡಿ ಪ್ರಾಯೋಗಿಕವಾಗಿ ಬೇಸಾಯ ಮಾಡಿಸಲಾಗುತ್ತಿದ್ದು, ಜೊತೆಗೆ ಅಲ್ಲಿ ಬೆಳೆದ ಹೊಲಗಳಿಗೆ ರೈತರನ್ನ ಕರೆದೊಯ್ದು ಪ್ರಾತ್ಯಕ್ಷಿಕೆ ಮೂಲಕ ಹೆಚ್ಚು ಈ ಬೆಳೆಯನ್ನು ಜನಪ್ರಿಯ ಗೊಳಿಸಲಾಗುತ್ತಿದೆ.
ಮುಂದಿನ ಮುಂಗಾರು ಬಿತ್ತನೆ ವೇಳೆಗೆ ಕನಿಷ್ಟ 1 ರಿಂದ 2 ಕೋಟಿ ಸಸಿಗಳನ್ನ ರೈತರಿಗೆ ನೀಡಲು ಗುರಿ ಹೊಂದಲಾಗಿದ್ದು, ಇದಕ್ಕಾಗಿ ನರ್ಸರಿ ಮಾಲೀಕರ ಸಭೆಗಳನ್ನು ಕೂಡ ನಡೆಸಿ ಹೆಚ್ಚು ಲಾಭದಾಯಕವಾದ ಈ ಆಲೂಗಡ್ಡೆ ನರ್ಸರಿ ಮಾಡಲು ಉತ್ತೇಜನ ನೀಡಲಾಗುತ್ತಿದೆ.
ಕಳೆದ 2 ದಶಕಗಳಲ್ಲಿ ನಿರಂತರವಾಗಿ ಇಳಿಮುಖವಾಗುತ್ತಿರುವ ಆಲೂಗಡ್ಡೆ ಕೃಷಿಗೆ ಮತ್ತೆ ಚೈತನ್ಯ ನೀಡುವ ಈ ಪ್ರಯತ್ನ ಇದೀಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಸದ್ಯ ರೈತರ ಜೊತೆಗೆ ಅಧಿಕಾರಿಗಳಿಗೂ ಖುಷಿ ತಂದಿದೆ.
ಅಂಗಾಂಶ ಕೃಷಿಯಿಂದ ರೈತರಿಗೆ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆ ದೃಢವಾಗಿದೆ. ಕಳೆದ ಬಾರಿ 5 ರಿಂದ 10 ಗುಂಟೆಯಲ್ಲಿ ಬಿತ್ತನೆ ಮಾಡುವ ರೈತರಿಗೆ ಉಚಿತವಾಗಿ ಬಿತ್ತನೆ ಆಲೂಗಡ್ಡೆ ವಿತರಿಸಲಾಗಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುವುದು.
ಈ ಸಂಬಂಧ ಜನವರಿ ಮೊದಲ ವಾರದಲ್ಲಿ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಪದ್ದತಿಯನ್ನ ಹೆಚ್ಚು ಜನಪ್ರಿಯಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಎಚ್. ಅಮರನಂಜುಂಡೇಶ್ವರ ಹೇಳಿದ್ದಾರೆ.
ಈ ಪದ್ಧತಿಯಲ್ಲಿ ರೈತರೇ ನರ್ಸರಿ ಮಾಡಿ ತಮ್ಮ ಸಸಿಗಳನ್ನು ತಾವೇ ತಯಾರಿ ಮಾಡಿಕೊಳ್ಳಬಹುದಾಗಿದ್ದು, ಕಡಿಮೆ ಖರ್ಚಿನಲ್ಲಿಯೂ ಇದು ಸಾಧ್ಯವಾಗಲಿದೆ. ಈ ಪದ್ಧತಿ ಬಗ್ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ವರ್ಷದ ಮುಂಗಾರು ಹಂಗಾಮಿನ ವೇಳೆಗೆ ಕನಿಷ್ಟ ಒಂದು ಕೋಟಿ ಸಸಿಗಳನ್ನು ಬಿತ್ತನೆಯಾಗುವಂತೆ ನೋಡಿಕೊಳ್ಳಲು ಚಿಂತನೆ ನಡೆದಿದೆ ಎಂದು ಹಾಸನ ಜಿಲ್ಲೆಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಹೇಳಿದ್ದಾರೆ.