7 ದಿನಗಳಲ್ಲಿ 16 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ; 13 ಕೋಟಿ ಆದಾಯ; ಪ್ರೋಟೋಕಾಲ್ ಗಲಾಟೆಗೆ ಕ್ಷಮೆ ಕೇಳಿದ ಡಿಸಿ ಲತಾ

ಹಾಸನಾಂಬೆ ದರ್ಶನಕ್ಕೆ ಭಾರೀ ಭಕ್ತ ಸಾಗರ ಬಂದಿದೆ. ಬರೀ 7 ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, 13 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇದೇ ವೇಳೆ ಪ್ರೋಟೋಕಾಲ್ ಗಲಾಟೆಯೂ ನಡೆದಿದೆ. ಕಂದಾಯ ಅಧಿಕಾರಿಗಳ ವಿರುದ್ಧ ದರ್ಶನಕ್ಕೆ ಬಂದು ಭಕ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ತಿಳಿದ ಡಿಸಿ ಲತಾ ಕುಮಾರಿ ಭಕ್ತ ಬಳಿ ಕ್ಷಮೆ ಕೇಳಿದ ಘಟನೆಯೂ ನಡೆದಿದೆ.

7 ದಿನಗಳಲ್ಲಿ 16 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ; 13 ಕೋಟಿ ಆದಾಯ; ಪ್ರೋಟೋಕಾಲ್ ಗಲಾಟೆಗೆ ಕ್ಷಮೆ ಕೇಳಿದ ಡಿಸಿ ಲತಾ
, ಹಾಸನಾಂಬೆ ದರ್ಶನ
Edited By:

Updated on: Nov 05, 2026 | 4:10 PM

ಹಾಸನ, ನ.5: ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹಾಸನದ ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವ-2026 ಭರದಿಂದ ಸಾಗುತ್ತಿದ್ದು, ಕೇವಲ ಏಳು ದಿನಗಳಲ್ಲಿ 16 ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇವಿಯ ದರ್ಶನ ಪಡೆದಿದ್ದಾರೆ. ದರ್ಶನೋತ್ಸವದ ಮೂಲಕ ದೇವಾಲಯಕ್ಕೆ ಇದುವರೆಗೆ ಬರೋಬ್ಬರಿ 13 ಕೋಟಿ ರೂ.ಗೂ ಹೆಚ್ಚು ಆದಾಯ ಹರಿದುಬಂದಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ತಿಳಿಸಿದ್ದಾರೆ.

ಒಂದೆಡೆ ಭಕ್ತರ ಮಹಾಪೂರವೇ ಹರಿದುಬರುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ಪ್ರಭಾವದಿಂದ ಪ್ರೋಟೋಕಾಲ್‌ನಲ್ಲಿ ಬಂದಿದ್ದ ಕಾರ್ಯಕರ್ತರಿಂದ ಕಂದಾಯ ಇಲಾಖೆ ಸಿಬ್ಬಂದಿಗೆ ಕಿರುಕುಳ ಹಾಗೂ ಹಿರಿಯ ಅಧಿಕಾರಿಗಳ ಕ್ಷಮೆಯಾಚನೆಯ ಘಟನೆ ನಡೆದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Loading...

‘ಉಳಿದ 5 ದಿನಗಳಲ್ಲಿ ಇನ್ನಷ್ಟು ಭಕ್ತರ ದಂಡು’: ಸರತಿ ಸಾಲಿಗೆ ಸಿದ್ಧರಾಗಿ ಬನ್ನಿ ಎಂದ ಡಿಸಿ

ಟಿವಿ9 ನ್ಯೂಸ್ ಚಾನೆಲ್ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು, ದರ್ಶನೋತ್ಸವದ ಸದ್ಯದ ಪರಿಸ್ಥಿತಿ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ. ಟಿವಿ9 ನ್ಯೂಸ್ ಚಾನೆಲ್ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು, ದರ್ಶನೋತ್ಸವದ ಸದ್ಯದ ಪರಿಸ್ಥಿತಿ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ದರ್ಶನ ಪಡೆಯಲು ತಗುಲುವ ಸಮಯವನ್ನು ಕಡಿಮೆ ಮಾಡಲು ಆಡಳಿತ ಮಂಡಳಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ದೇವಿಗೆ ಸಲ್ಲಿಸುವ ನೈವೇದ್ಯದ ಸಮಯವನ್ನು ಕಡಿತಗೊಳಿಸಲಾಗುತ್ತಿದೆ. ಪ್ರೋಟೋಕಾಲ್ ಹಾಗೂ ಶಿಷ್ಟಾಚಾರದಲ್ಲಿ ಬರುವ ಗಣ್ಯರು ಮತ್ತು ವಿಐಪಿಗಳ ಸಂಖ್ಯೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. “ಸಾಮಾನ್ಯ ಭಕ್ತರು ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಲ್ಲಲು ಮಾನಸಿಕವಾಗಿ ತಯಾರಾಗಿ ಬನ್ನಿ, ಅವರಿಗೆ ಸಾಲಿನಲ್ಲಿ ನಿಲ್ಲಲು ಹಾಸನಾಂಬೆ ದೇವಿಯೇ ಚೈತನ್ಯ ನೀಡಲಿ,” ಎಂದು ಡಿಸಿ ಹಾರೈಸಿದ್ದಾರೆ.

ಇದನ್ನೂ ಓದಿ: ಶತಮಾನದ ಮೂರ್ತಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಸ್ವಾಮೀಜಿ: ಬೆಂಗಳೂರು ಪೊಲೀಸರ ತನಿಖೆಯಲ್ಲಿ ಸತ್ಯ ಬಯಲು, ಬಾಳೆಕುದ್ರು ಶ್ರೀ ನಾಪತ್ತೆ

ಹಾಸನಾಂಬೆ ದರ್ಶನದಲ್ಲಿ ಪ್ರೋಟೋಕಾಲ್ ಗಲಾಟೆ:

ಮತ್ತೊಂದೆಡೆ, ರಾಮನಗರ ಹಾಗೂ ಕನಕಪುರ ಮೂಲದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಕುಟುಂಬಸ್ಥರು ಪ್ರೋಟೋಕಾಲ್ ಹೆಸರಿನಲ್ಲಿ ನಡೆಸಿರುವ ಧಾಂದಲೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಪ್ರಭಾವದಿಂದ ಪ್ರವಾಸಿ ಮಂದಿರದಿಂದ ಪ್ರೋಟೋಕಾಲ್ ವಾಹನದಲ್ಲಿ ಬಂದಿದ್ದ ಐದಾರು ಮಂದಿಯನ್ನು ಗ್ರಾಮ ಲೆಕ್ಕಾಧಿಕಾರಿ ಮನು ಅವರು ಮುಖ್ಯದ್ವಾರದ ಗೇಟ್‌ವರೆಗೆ ಕರೆತಂದು, ಒಳಗೆ ಕರೆದೊಯ್ಯುವಂತೆ ಮತ್ತೊಬ್ಬ ಸಿಬ್ಬಂದಿಗೆ ಸೂಚಿಸಿದ್ದರು. “ಎಡಿಸಿ ಅವರ ಸೂಚನೆಯಂತೆ ನಾವು ಗೇಟ್‌ವರೆಗೆ ಮಾತ್ರ ಬರಲು ಸಾಧ್ಯ” ಎಂದು ಹೇಳಿದ್ದಕ್ಕೆ ಕೋಪಗೊಂಡ ಕಾರ್ಯಕರ್ತರು ವಿಎ ಮನು ಅವರ ಮೇಲೆಯೇ ಕೂಗಾಡಿದ್ದಾರೆ.

ದರ್ಶನ ಪಡೆದು ಬಂದ ಬಳಿಕ ಕಾರ್ಯಕರ್ತರು ನೇರವಾಗಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ವಿಎ ಮನು ಹಾಗೂ ಮತ್ತೊಬ್ಬ ಅಧಿಕಾರಿ ಸುಪ್ರಿತ್ ವಿರುದ್ಧ ದೂರು ನೀಡಿದ್ದಾರೆ. ಇದರಿಂದ ಗರಂ ಆದ ಡಿಸಿ, “ಮನು ಅವರನ್ನು ಕರೆಯಿರಿ, ನಾನು ಬಿಡಲ್ಲ, ಸಸ್ಪೆಂಡ್ ಮಾಡ್ತೀನಿ,” ಎಂದು ಸ್ವಂತ ಸಿಬ್ಬಂದಿ ಮೇಲೆಯೇ ರೊಚ್ಚಿಗೆದ್ದಿದ್ದಾರೆ. “ಇವರೆಲ್ಲಾ ನಮ್ಮ ಅತಿಥಿಗಳು, ಸಮಾಧಾನದಿಂದ ವರ್ತಿಸಿ” ಎಂದು ಕಂದಾಯ ಸಿಬ್ಬಂದಿಗೆ ತಾಕೀತು ಮಾಡಿದ ಡಿಸಿ, ಕಾಂಗ್ರೆಸ್ ಕಾರ್ಯಕರ್ತರ ಎದುರು ಕ್ಷಮೆ ಕೋರಿದ್ದಾರೆ. ಕಾರ್ಯಕರ್ತರು “ಮೇಡಂ ಹಾಸನಾಂಬ ದೇವಿ ಇಲ್ಲೇ ನೋಡಿದಂತೆ ಆಯಿತು” ಎಂದು ಹೇಳಿ ನಿರ್ಗಮಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us