
ಹಾಸನ, ಜೂನ್ 14: ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಪ್ರವಾಸಿ ತಾಣವಾದ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಹೋಗಿದ್ದ ಬೆಂಗಳೂರು ಮೂಲದ ಮೂವರು ಯುವಕರು (Youths) ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ (death). ಸ್ನೇಹಿತರ ಕಣ್ಣೆದುರೇ ಮೂವರು ಯುವಕರು ಜಲಸಮಾಧಿಯಾದ ಕರುಣಾಜನಕ ಘಟನೆ ಹಾಸನ ತಾಲೂಕಿನ ಗೊರೂರು ಬಳಿಯಿರುವ ಹೇಮಾವತಿ ಜಲಾಶಯದಲ್ಲಿ ನಡೆದಿದೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ಹತ್ತು ಜನ ಯುವಕರ ತಂಡವೊಂದು ಧರ್ಮಸ್ಥಳ ಪ್ರವಾಸಕ್ಕೆ ತೆರಳಿತ್ತು. ಶ್ರೀಕ್ಷೇತ್ರದ ದರ್ಶನ ಮುಗಿಸಿ ವಾಪಸ್ ಬರುವಾಗ ಹಾಸನ ತಾಲೂಕಿನ ಗೊರೂರು ಬಳಿಯಿರುವ ಪ್ರಸಿದ್ಧ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ಬಂದಿದ್ದಾರೆ. ಈ ವೇಳೆ ಚರ್ಚ್ ಬಳಿ ಹಿನ್ನೀರನ್ನು ಕಂಡು ಖುಷಿಯಾದ ಯುವಕರು ನೀರಿನಲ್ಲಿ ಈಜಲು ಮುಂದಾಗಿದ್ದಾರೆ. ಆದರೆ, ಈಜು ಬಾರದಿದ್ದರೂ ಯುವಕರು ಹಿನ್ನೀರಿಗೆ ಇಳಿದಿರುವುದೇ ಈ ಭೀಕರ ದುರಂತಕ್ಕೆ ಕಾರಣವಾಗಿದೆ. ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಮೃತ ದುರ್ದೈವಿಗಳು.
ಇನ್ನು ಯುವಕರು ನೀರಿನಲ್ಲಿ ಮುಳುಗುತ್ತಿದ್ದಂತೆ ಆತಂಕಗೊಂಡ ಉಳಿದ ಸ್ನೇಹಿತರು, ರಕ್ಷಿಸುವಂತೆ ದಡಕ್ಕೆ ಬಂದು ಜೋರಾಗಿ ಕಿರುಚಾಡಿದ್ದಾರೆ. ಆದರೆ ಸಕಾಲಕ್ಕೆ ಯಾವುದೇ ನೆರವು ಸಿಗದ ಕಾರಣ ಮೂವರು ಯುವಕರು ಸ್ನೇಹಿತರ ಕಣ್ಣೆದುರೇ ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ಕು ಮಕ್ಕಳು ಜಲಸಮಾಧಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಸದ್ಯ ಘಟನಾ ಸ್ಥಳಕ್ಕೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಮೃತದೇಹಗಳನ್ನು ಹೊರತೆಗೆಯಲು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಜತೆಗಿದ್ದ ಗೆಳೆಯರನ್ನು ಕಣ್ಣೆದುರೇ ಕಳೆದುಕೊಂಡ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.