ಮುಂದುವರೆದ ಟೆಂಪಲ್ ರನ್: ಬಿಡುಗಡೆಯಾಗಿ 3 ದಿನ ಕಳೆದ್ರೂ ಪತ್ನಿ ಭವಾನಿ ಭೇಟಿಯಾಗದ ರೇವಣ್ಣ
ತಲೆಮರೆಸಿಕೊಂಡಿರುವ ಪುತ್ರ ಪ್ರಜ್ವಲ್ ಮಾತ್ರ ಇನ್ನು ವಾಪಸ್ ಆಗುತ್ತಿಲ್ಲ. ವಿದೇಶದಲ್ಲಿ ಕುಳಿತು ಕಳ್ಳಾಟ ಆಡುತ್ತಿರುವ ಪ್ರಜ್ವಲ್ ನಿನ್ನೆ ಕೂಡ ಮತ್ತೊಮ್ಮೆ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡಿದ್ದರು. ಇತ್ತ ಜೈಲು ಸೇರಿದ್ದ ಮಾಜಿ ಸಚಿವ ರೇವಣ್ಣ, ಬೇಲ್ ಮೇಲೆ ಹೊರಬಂದು ಟೆಂಪಲ್ ರನ್ ಆರಂಭಿಸಿದ್ದಾರೆ. ಆದರೆ ಬಿಡುಗಡೆ ಆಗಿ ಮೂರು ದಿನ ಕಳೆದರೂ ಕೂಡ ಇದುವರೆಗೆ ಪತ್ನಿ ಭವಾನಿ ಅವರನ್ನು ಭೇಟಿ ಮಾಡಿಲ್ಲ.
ಹಾಸನ, ಮೇ 16: ಮಹಿಳೆ ಕಿಡ್ಯ್ಯಾಪ್ ಕೇಸ್‌ನಲ್ಲಿ ಆರು ದಿನದಿಂದ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ (HD Revanna) ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಜೈಲಿನಿಂದ ಹೊರಬಂದ ಬಳಿಕ ರೇವಣ್ಣ ಟೆಂಪಲ್ ರನ್ ಮಾಡುತ್ತಿದ್ದಾರೆ. ಮಾಜಿಪ್ರಧಾನಿ, ತಂದೆ ಹೆಚ್ಡಿ ದೇವೇಗೌಡರ ನಿವಾಸದಲ್ಲೇ ಉಳಿದಿರುವ ಹೆಚ್.ಡಿ.ರೇವಣ್ಣ ಇದುವರೆಗೂ ಪತ್ನಿ ಭವಾನಿ (Bhavani Revanna) ಅವರನ್ನು ಭೇಟಿ ಮಾಡಿಲ್ಲ. ಬಿಡುಗಡೆಯಾಗಿ 3 ದಿನ ಕಳೆದ್ರೂ ಟೆಂಪಲ್ ರನ್ ಮುಂದುವರೆಸಿದ್ದಾರೆ.
ಸದ್ಯ ಮೈಸೂರು ಜಿಲ್ಲೆ ಸಾಲಿಗ್ರಾಮದಲ್ಲೇ ಪತ್ನಿ ಭವಾನಿ ಏಕಾಂಗಿಯಾಗಿದ್ದು, ಹೊಳೆನರಸೀಪುರದ ಮನೆಗೆ ಬಂದು ಹೋಗುತ್ತಾರೆ. ಈಗಾಗಲೇ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಎರಡು ನೋಟಿಸ್ ಜಾರಿ ಮಾಡಲಾಗಿದೆ. ಈ ಮಧ್ಯೆ ಮಾವ ದೇವೇಗೌಡರು ಹಾಗೂ ಅತ್ತೆ ಚೆನ್ನಮ್ಮರನ್ನೂ ಭವಾನಿ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ವಿಮಾನ ಹತ್ತದೆ ಅಲ್ಲೇ ಉಳಿದುಕೊಂಡ ಪ್ರಜ್ವಲ್, ವಿದೇಶದಲ್ಲಿ ಕುಳಿತು ಕಣ್ಣಾಮುಚ್ಚಾಲೆ ಆಟ ಮುಂದುವರಿಕೆ!
ಪತಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ವಿರುದ್ಧದ ಪ್ರಕರಣದಿಂದಾಗಿ, ಭವಾನಿಗೂ ಸಂಕಷ್ಟ ಎದುರಾಗಿತ್ತು. ಲೈಂಗಿಕ ಕಿರುಕುಳ, ಕಿಡ್ನ್ಯಾಪ್ ಎರಡೂ ಕೇಸ್ನಲ್ಲೂ ಭವಾನಿ ರೇವಣ್ಣ ಹೆಸರು ಉಲ್ಲೇಖವಾಗಿದೆ. ಭವಾನಿ ಕರೆದ್ರು ಅಂತಾ ಹೇಳಿಯೇ ಮಹಿಳೆಯನ್ನ ಕಿಡ್ನ್ಯಾಪ್ ಮಾಡಿರುವ ಆರೋಪವಿದೆ. ತನಿಖೆ ವೇಳೆ ಭವಾನಿ ವಿರುದ್ಧ ಸಾಕ್ಷಿ ಸಿಕ್ಕರೆ ಅವ್ರಿಗೂ ಸಂಕಷ್ಟ ತಪ್ಪಿದ್ದಲ್ಲ. ಈ ಮಧ್ಯೆ ಹೊಳೆನರಸೀಪುರದ ಜೆಡಿಎಸ್ ನಾಯಕರು ಭವಾನಿ ರೇವಣ್ಣರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು.
ಜಾಮೀನು ರದ್ದು ಕೋರಿ SIT ಮೇಲ್ಮನವಿ ಸಲ್ಲಿಸುವ ಸಾಧ್ಯತೆ
ಹೆಚ್.ಡಿ.ರೇವಣ್ಣ ವಿರುದ್ಧ ಸಾಕ್ಷಿ ಕಲೆಹಾಕಲು SIT ಆ್ಯಕ್ಟಿವ್ ಆಗಿದ್ದು, ಜಾಮೀನು ರದ್ದು ಕೋರಿ ಹೈಕೋರ್ಟ್ಗೆ SIT ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ತನಿಖಾ ಹಂತದಲ್ಲಿ ಕೆಲವು ಸಾಕ್ಷಿ ಕಲೆಹಾಕಿರುವ ಎಸ್ಐಟಿ ಮತ್ತೆ ವಶಕ್ಕೆ ಪಡೆದು 2ನೇ ಆರೋಪಿ ಸತೀಶ್ ವಿಚಾರಣೆ ಮಾಡಲಿದೆ.
ಇದನ್ನೂ ಓದಿ: ಜೈಲಿನಿಂದ ಬಿಡುಗಡೆ ಆಗ್ತಿದ್ದಂತೆ ಎಚ್.ಡಿ ರೇವಣ್ಣ ಟೆಂಪಲ್ ರನ್: ಹೇಳಿದ್ದೇನು?
ಒಂದಿಷ್ಟು ಮಾಹಿತಿ ಬಾಯಿಬಿಟ್ಟಿರುವ ಸತೀಶ್ ಬಾಬು, ರೇವಣ್ಣ ವಿರುದ್ಧ ಬಲವಾದ ಸಾಕ್ಷಿ ಕಲೆ ಹಾಕಲು ತಯಾರಿ ನಡೆಸಿದ್ದಾರೆ. ಸಂತ್ರಸ್ತೆ ವಿಡಿಯೋ ಬಗ್ಗೆಯೂ ಸತ್ಯಾಸತ್ಯತೆ ಪರಿಶೀಲನೆ ಮಾಡಲಾಗುತ್ತಿದ್ದು, ಎಲ್ಲ ಅಂಶ ಮುಂದಿಟ್ಟುಕೊಂಡು ಜಾಮೀನು ರದ್ದುಪಡಿಸುವಂತೆ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.