SC, STಗೆ ಮೀಸಲಾತಿ ಹೆಚ್ಚಳ : ಅದು ಅಷ್ಟು ಸುಲಭವೇ? ಕಾನೂನು ಏನು ಹೇಳುತ್ತೆ? ಬೊಮ್ಮಾಯಿ ಮುಂದಿರುವುದು ಒಂದೇ ದಾರಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದ್ರೆ, ಇದಕ್ಕೆ ಕಾನೂನು ತೊಡಕು ಎದುರಾಗಬಹುದು. ಆ ತೊಡಲುಗಳನ್ನು ದಾಟಿ ಮುಂದೆ ಹೋಗಲು ಬೊಮ್ಮಾಯಿ ಇರುವುದು ಇದೊಂದೇ ಹಾದಿ.
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(SC-ST)ಕ್ಕೆ ಬೊಮ್ಮಾಯಿ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಎಸ್ಸಿ, ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಇಂದು(ಅ.7) ನಡೆದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಎಲ್ಲವನ್ನೂ ಅವಲೋಕನ ಮಾಡಿ, ಎಸ್ಸಿ ಗೆ 15% ರಿಂದ 17% ಹಾಗೂ ಎಸ್ ಟಿ ಸಮುದಾಯಕ್ಕೆ 3% ರಿಂದ 7% ಕ್ಕೆ ಮೀಸಲಾತಿ (SC, ST Reservation)ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆದ್ರೆ, ಇದಕ್ಕೆ ಶೇ. 50ರ ಗರಿಷ್ಠ ಮಿತಿ ಅಡ್ಡವಾಗುತ್ತಿದೆ.
ಹೌದು….ಕರ್ನಾಟಕ ಸರ್ಕಾರ ರೂಪಿಸುವ ಮೀಸಲಾತಿ ಶೇ.50 ರಷ್ಟನ್ನು ಮೀರಲಿದೆ. ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ.50 ರಷ್ಟನ್ನು ಮೀರುವಂತಿಲ್ಲ. ಮಹಾರಾಷ್ಟ್ರ ಸರ್ಕಾರ, ಮರಾಠ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದ್ದನ್ನು ಸುಪ್ರೀಂಕೋರ್ಟ್ 2021 ರಲ್ಲಿ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎಸ್‌ಟಿ, ಎಎಸ್ಸಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾನೂನು ತೊಡಕುಗಳು ಎದುರಾಗಲಿವೆ. ಈ ಬಗ್ಗೆ ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ ಸರ್ಕಾರ ಸವಾಲು ಎದುರಿಸಬೇಕಿದೆ.
ಕರ್ನಾಟಕದ ಮೀಸಲಾತಿ ವಿವರ ಇಂತಿದೆ.
ಪ್ರಸ್ತುತ ಕರ್ನಾಟಕದಲ್ಲಿ ಯಾವೆಲ್ಲ ಸಮುದಾಯಗಳಿಗೆ ಎಷ್ಟು ಮೀಸಲಾತಿ ಇದೆ ಎನ್ನುವುದನ್ನು ನೋಡುವುದಾದರೆ ಪ್ರವರ್ಗ 1ಕ್ಕೆ ಶೇ.4 ಮೀಸಲಾತಿ ( 95 ಜಾತಿಗಳು ), ಪ್ರವರ್ಗ 2 (ಎ) ಶೇ.15% ( 102 ಜಾತಿಗಳು), ಪ್ರವರ್ಗ 3ಬಿ ಶೇ.4( ಮುಸ್ಲಿಮರು ), ಪ್ರವರ್ಗ 3ಎ ಶೇ.4 4% (ಒಕ್ಕಲಿಗ&ಬಲಿಜ), ಪ್ರವರ್ಗ 3ಬಿ ಶೇ.5 5% ( ಲಿಂಗಾಯತರು & ಇತರೆ 5), ಪರಿಶಿಷ್ಟ ಜಾತಿಗಳ ಮೀಸಲಾತಿ ಶೇ.15( 101 ಜಾತಿಗಳು) , ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಶೇ 3% ((50 ಜಾತಿಗಳು) ಮೀಸಲಾತಿ ಇದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ.50 ರಷ್ಟನ್ನು ಮೀರುವಂತಿಲ್ಲ. ಅಸಾಧಾರಣ, ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ಶೇ. 50 ಮೀಸಲಾತಿ ಮೀರಬಹುದು ಎಂದು 1992 ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿದ್ದು, ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಸರ್ಕಾರದ ಮುಂದಿರುವ ಒಂದು ದಾರಿ ಅಂದ್ರೆ ಅದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಶೆಡ್ಯೂಲ್ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಷ್ಟೇ.
ಮರಾಠ ಮೀಸಲಾತಿಯನ್ನು ರದ್ದು ಮಾಡಿದ್ದ ಸುಪ್ರೀಂ
ಈ ಹಿಂದೆ ಮಹಾರಾಷ್ಟ್ರ ಸರ್ಕಾರ, ಮರಾಠ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದ್ದನ್ನು ಸುಪ್ರೀಂಕೋರ್ಟ್ 2021 ರಲ್ಲಿ ರದ್ದುಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶೇ.50 ರ ಮೀಸಲಾತಿ ಮಿತಿ ಮೀರುವಂತಹ ಅಸಾಧಾರಣ, ಅಸಾಮಾನ್ಯ ಸಂದರ್ಭವಿಲ್ಲ ಎಂದಿತ್ತು.
ತಮಿಳುನಾಡು ಸರ್ಕಾರದಿಂದ ಶೇ.69 ಮೀಸಲಾತಿ
ಮರಾಠ ಸಮುದಾಯಕ್ಕೆ ಮಹಾ ಸರ್ಕಾರ ನೀಡಿದ್ದ ಮೀಸಲಾತಿಯನ್ನು ರದ್ದು ಮಾಡಿದ್ದ ಸುಪ್ರೀಂ ಕೋರ್ಟ್ , ತಮಿಳುನಾಡು ಸರ್ಕಾರ ಶೇ.69 ಮೀಸಲಾತಿ ನೀಡಿತ್ತು. ಹಿಂದು ವರ್ಗಗಳಿಗೆ ಶೇ.26.5, ಅತಿ ಹಿಂದುಳಿದ ವರ್ಗಗಳಿಗೆ ಶೇ.20, ಹಿಂದುಳಿದ ಮುಸಲ್ಮಾನರಿಗೆ ಶೇ.3.5. ಪರಿಶಿಷ್ಟ ಜಾತಿಗೆ ಶೇ.18 ಪರಿಶಿಷ್ಟ ಪಂಗಡಕ್ಕೆ ಶೇ.1 ರಷ್ಟು ಮೀಸಲಾತಿ ನೀಡಿತ್ತು. 1993ರಲ್ಲಿ ವಿಶೇಷ ಅಧಿವೇಶನ ಕರೆದು ಕಾಯ್ದೆ ರೂಪಿಸಿದ್ದ ಜಯಲಲಿತಾ ಸರ್ಕಾರ, ಶೇ.69 ರಷ್ಟು ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿತ್ತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಿತ್ತು. ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಿದರೆ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ತಮಿಳುನಾಡು ಸರ್ಕಾರದ ಮೀಸಲಾತಿ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಬಾಕಿಯಿದೆ.
ಮೀಸಲಾತಿ ಹೆಚ್ಚಳಕ್ಕೆ ಬೊಮ್ಮಾಯಿ ಸರ್ಕಾರ ಏನು ?
ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಿಸಿದರೆ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ. ಇನ್ನೊಂದು ಕೆಲವು ವಿಶೇಷ ಸಂದರ್ಭದಲ್ಲಿ ಮಿತಿಗಿಂತ ಹೆಚ್ಚಿನ ಮೀಸಲಾತಿ ನೀಡಬಹುದು ಎಂದು ಕೂಡ ಸುಪ್ರೀಂ ಕೋರ್ಟ್ನ ಆದೇಶ ಇದೆ. ಇದನ್ನೇ ಇಟ್ಟುಕೊಂಡು ಇದೀಗ ರಾಜ್ಯದಲ್ಲಿ ಮೀಸಲಾತಿ ಶೇ.50ರಷ್ಟು ಗರಿಷ್ಠ ಮಿತಿಯನ್ನು ಹೆಚ್ಚಿಸಲು ಮುಂದಾಗಬಹುದು. ಅಂದು ತಮಿಳುನಾಡು ಸರ್ಕಾರ ಅನುಸರಿಸಿದ ವಿಧಾನವನ್ನು ಕರ್ನಾಟಕ ಸರ್ಕಾರ ಸಹ ಅನುಸರಿಸಬಹುದು.
ಮೀಸಲಾತಿ ಪ್ರಮಾಣ ಶೇ. 50ರಷ್ಟು ಮೀರಬಾರದು ಎಂದು ನ್ಯಾಯಾಲಯದ ತೀರ್ಪಿದೆ. ಈಗ ಮೀಸಲಾತಿ ಪ್ರಮಾಣ ಹೆಚ್ಚಾಗುವುದರಿಂದ ನ್ಯಾಯಾಲಯ ತಗಾದೆ ತೆಗೆಯಬಹುದು. ಹಾಗಾಗಿ ಶೆಡ್ಯೂಲ್ 9 ರಲ್ಲಿ ಈ ಮೀಸಲಾತಿ ಏರಿಕೆಯನ್ನು ಸೇರಿಸುವುದರಿಂದ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಆಗುವುದಿಲ್ಲ. ತಮಿಳುನಾಡು, ರಾಜಸ್ಥಾನ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಶೆಡ್ಯೂಲ್ 9 ರಲ್ಲಿ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ರಾಜ್ಯ ಸರ್ಕಾರವೂ ಶೆಡ್ಯೂಲ್ 9 ರಲ್ಲಿ ಈ ಮೀಸಲಾತಿ ಹೆಚ್ಚಳವನ್ನು ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ.
ಶೇ. 50 ಕ್ಕಿಂತ ಹೆಚ್ಚಳಕ್ಕೆ ಸಿದ್ದು ಕೊಟ್ಟಿದ್ದ ಸಲಹೆ
ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಶೇ 69 ಗೆ ಹೆಚ್ಚಿಸಿದ್ದಾರೆ, ಇದು ಸುಪ್ರೀಂ ಕೋರ್ಟ್ ನ ಮುಂದಿದೆ. ಬೇರೆ ಬೇರೆ ರಾಜ್ಯಗಳು ಕೂಡ ಶೇ 50 ಗಿಂತ ಹೆಚ್ಚು ಮೀಸಲಾತಿ ನೀಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ ಏರಿಕೆ ಮಾಡಲು ಅವಕಾಶ ಇದೆ. ರಾಜ್ಯ ಸರ್ಕಾರ ಸುಭಾಷ್ ಆಡಿಯವರ ನೇತೃತ್ವದ ಸಮಿತಿಯ ವರದಿಯನ್ನು ಪಡೆದುಕೊಳ್ಳಲಿ, ಇದರ ಜೊತೆಗೆ ಮೀಸಲಾತಿ ಪ್ರಮಾಣವನ್ನು ಶೇ. 50 ಕ್ಕಿಂತ ಹೆಚ್ಚು ಮಾಡಲಿ. ಇಲ್ಲದಿದ್ದರೆ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯವಾಗಲಿದೆ ಎಂದು ಹಿಂದೆ ಸಿದ್ದರಾಮಯ್ಯ ಹೇಳಿದ್ದರು.
ಸಮಾಜದ ಎಲ್ಲ ವರ್ಗದವರಿಗೂ ನ್ಯಾಯ ಸಿಗಬೇಕಾದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ. 50 ಕ್ಕಿಂತ ಹೆಚ್ಚು ಮಾಡಬೇಕು. ಆ ಮೂಲಕ ಎಲ್ಲಾ ಸಮುದಾಯದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾದ ಮೀಸಲಾತಿ ಸೌಲಭ್ಯ ಸಿಗುವಂತಾಗಬೇಕು ಎಂದು ಈ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು. ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ, ಅದೇ ರೀತಿ ಮುಂದುವರೆದು ಕೆಲವು ವಿಶೇಷ ಸಂದರ್ಭದಲ್ಲಿ ಮೇಲ್ಕಂಡ ಮಿತಿಗಿಂತ ಹೆಚ್ಚಿನ ಮೀಸಲಾತಿ ನೀಡಬಹುದು ಎಂದು ಕೂಡ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹದು.
ಮೀಸಲಾತಿಗಾಗಿ ಹಲವು ಸಮುದಾಯಗಳಿಂದ ಪ್ರತಿಭಟನೆ
ಕರ್ನಾಕದಲ್ಲಿ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿವೆ. ಲಿಂಗಾಯತರಲ್ಲಿ ಬಹುಸಂಖ್ಯಾತರು ಎನ್ನಲಾದ ಪಂಚಮಸಾಲಿಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಕುರುಬ ಸಮುದಾಯ ಎಸ್‌ಟಿ ಪಂಗಡಕ್ಕೆ ಸೇರಿಸಲು ಆಗ್ರಹ ಮಾಡುತ್ತಿದೆ. ಇನ್ನು ವಾಲ್ಮೀಕಿ ಜನಾಂಗ ಕೂಡ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ ಮಾಡಿದೆ.
ಈಗಾಗಲೇ ಕರ್ನಾಟಕದಲ್ಲಿ ವಿವಿಧ ಜಾತಿಯ ಸಮುದಾಯಗಳು ತಮ್ಮನ್ನು ಎಎಸ್ಟಿ, ಎಸ್ಸಿ, 2ಎ ಸೇರಿಸಬೇಕೆಂದು ಒತ್ತಾಯಿಸುತ್ತಿವೆ. ಆದ್ರೆ, ಒಂದು ಕೆಟಗೆರಿಯಲ್ಲಿ ಮತ್ತೊಂದು ಸಮುದಾಯವನ್ನು ತಂದು ಸೇರಿಸಿದ್ರೆ, ಆ ಕೆಟಗೆರೆಯ ಮೀಸಲಾತಿ ಶೇಕಡ ಪ್ರಮಾಣ ಹೆಚ್ಚಳ ಮಾಡಬೇಕಾಗುತ್ತೆ. ಹೆಚ್ಚಳ ಮಾಡಿದ್ರೆ, ಇತ್ತ ಸುಪ್ರೀಂ ಕೋರ್ಟ್ ಮೀಸಲಾತಿ ಗರಿಷ್ಠ ಶೇ50 ಕ್ರಾಸ್ ಆಗುತ್ತೆ. ಇದರಿಂದ ಈಗ ಬೊಮ್ಮಾಯಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:45 pm, Fri, 7 October 22