ರೇಷ್ಮೆ ಸೀರೆ ತಯಾರಿಸುವುದು ಹೇಗೆ? ಒಂದು ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳ ಪರಿಶ್ರಮ ಬೇಕಾಗುತ್ತೆ ಗೊತ್ತಾ?

ರೇಷ್ಮೆ ಸೀರೆ ಎಂದರೆ ಹೆಣ್ಮಕ್ಕಳ ಮುಖ ಅರಳುತ್ತೆ. ರೇಷ್ಮೆ ಸೀರೆ ಇಲ್ಲದೆ ಯಾವುದೇ ಶುಭ ಕಾರ್ಯಕ್ರಮಗಳು ಸಂಪನ್ನ ಎನಿಸುವುದಿಲ್ಲ. ಆದರೆ ನಿಮಗೆ ಗೊತ್ತಾ ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಸಾಯಬೇಕೆಂದು. ಅರ್ಧ ಕಿಲೋ ರೇಷ್ಮೆ ಮಾಡಲು ಎಷ್ಟು ಹುಳುಗಳು ತಮ್ಮ ಪರಿಶ್ರಮ ಹಾಕಬೇಕೆಂದು? ಜೊತೆಗೆ ರೇಷ್ಮೆ ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ನೋಡುವುದೇಕೆ ಎಂಬ ವಿಚಾರದ ಬಗ್ಗೆ ಈ ಆರ್ಟಿಕಲ್​ನಲ್ಲಿದೆ ಮಾಹಿತಿ.

ರೇಷ್ಮೆ ಸೀರೆ ತಯಾರಿಸುವುದು ಹೇಗೆ? ಒಂದು ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳ ಪರಿಶ್ರಮ ಬೇಕಾಗುತ್ತೆ ಗೊತ್ತಾ?
ರೇಷ್ಮೆ ಸೀರೆ
Follow us
ಆಯೇಷಾ ಬಾನು
|

Updated on: May 15, 2024 | 2:42 PM

ರೇಷ್ಮೆ ಸೀರೆ ಅಂದ್ರೆ ಸಾಕು ಹೆಣ್ಮಕ್ಕಳಿಗೆ ಅದೇನೋ ಒಂದು ರೀತಿಯ ಸೆಂಟಿಮೆಂಟ್. ಹಳೆಯ ಅಮ್ಮನ ರೇಷ್ಮೆ ಸೀರೆಗಳನ್ನು ಕಂಡರಂತೋ ಎಲ್ಲಿಲ್ಲದ ಪ್ರೀತಿ. ರೇಷ್ಮೆ ಸೀರೆಗಳು ಬಹಳ ಕಾಸ್ಟಲಿ ಆದರೂ ಕೂಡ ಅಲ್ಪ ಸ್ವಲ್ಪ ಹಣ ಹೊಂದಿಸಿ ಅದನ್ನು ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಇರುತ್ತೆ. ಹಬ್ಬ, ಹರಿದಿನ, ಪೂಜೆ, ದೇವಸ್ಥಾನ, ಮದುವೆ, ಮುಂಜಿ ಹೀಗೆ ಯಾವುದೇ ಸಮಾರಂಭಕ್ಕಾದರೂ ರೇಷ್ಮೆ ಸೀರೆ ಇರಲೇ ಬೇಕು. ಅದರಲ್ಲೂ ರೇಷ್ಮೆ ಸೀರೆಗಳಲ್ಲಿ ಸಿಂಪಲ್, ಗ್ರ್ಯಾಂಡ್ ಅಂತ ವಿಭಿನ್ನವಾದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸೂಕ್ತ ಎನಿಸುವ ರೀತಿಯಲ್ಲಿ ಲಭ್ಯವಿರುವುದರಿಂದ ಎಲ್ಲ ಕಾಲಕ್ಕೂ ಈ ಸೀರೆ ಸರಿ ಹೊಂದುತ್ತೆ. ಇನ್ನು ಮಹಿಳೆಯರ ಅಚ್ಚುಮೆಚ್ಚಿನ ರೇಷ್ಮೆ ಸೀರೆಗಳು ಸಾಮಾನ್ಯವಾಗಿ ದುಬಾರಿ ಇರುತ್ತೆ. ಯಾಕೆಂದರೆ ಇದನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಯವಾದ, ಮೃದುವಾದ ಸೀರೆಯನ್ನು ತಯಾರಿಸಬೇಕೆಂದರೆ ಬಹಳಷ್ಟು ಪರಿಶ್ರಮಬೇಕಾಗುತ್ತೆ. ಬನ್ನಿ ನಾವು ಈ ಆರ್ಟಿಕಲ್​ನಲ್ಲಿ ರೇಷ್ಮೆ ಸೀರೆಯನ್ನು ಹೇಗೆ ತಯಾರಿಸಲಾಗುತ್ತೆ ಎಂಬ ಬಗ್ಗೆ ತಿಳಿದುಕೊಳ್ಳೋಣ.

ಭಾರತೀಯ ನಾರಿ ಅಂದಾಕ್ಷಣ ನಮ್ಮ ಕಣ್ಮುಂದೆ ಬರೋದೆ ಸೀರೆಯುಟ್ಟ ಸ್ತ್ರೀಯ ಚಿತ್ರ. ಜೊತೆಗೆ ನಮ್ಮ ದೇವತೆಗಳ ಉಡುಪು ಕೂಡ ಸೀರೆಯೇ. ಭಾವನಾತ್ಮಕ ಸಂಬಂಧಗಳ ಬೆಸುಗೆಗೂ ಸೀರೆ ಬೇಕು. ಅಷ್ಟರಮಟ್ಟಿಗೆ ಈ ರೇಷ್ಮೆ ಸೀರೆಗಳು ನಮ್ಮ ಬದುಕಿನಲ್ಲಿ ಉಳಿದುಕೊಂಡಿವೆ. ಮೈಸೂರು ರೇಷ್ಮೆ, ಬನಾರಸ್, ಕಾಂಜೀವರಂ, ಇಳಕಲ್ ಹೀಗೆ ಸಾಕಷ್ಟು ಜನಪ್ರಿಯ ಸೀರೆಗಳು ಭಾರತದಲ್ಲಿ ಸಿಗುತ್ತವೆ. ಅದರಲ್ಲೂ ಸಾಧಾರಣ ರೇಷ್ಮೆ ಸೀರೆಗಳು, ಪ್ಯೂರ್ ರೇಷ್ಮೆ ಸೀರೆ, ಆರ್ಟ್ಸೆಂಟ್ ಸ್ಯಾರೀಸ್, ತ್ರಿಡಿ ಸ್ಯಾರೀಸ್ ಹೀಗೆ ಎಲ್ಲ ಕಾಲಕ್ಕೂ ತನ್ನದೇ ಆದ ವಿಶಿಷ್ಟ ಬದಲಾವಣೆ ಹೊಸ ರೂಪದಲ್ಲಿ ಸೀರೆಗಳು ಬರುತ್ತಲೇ ಇವೆ. ಸೀರೆಗಳಿಗೆ ಹೆಣ್ಣಿನ ಸೌಂದರ್ಯ ವೃದ್ಧಿಸುವ ಶಕ್ತಿ ಇದೆ.

ರೇಷ್ಮೆ ಸೀರೆ ತಯಾರಿಸುವುದೇಗೆ?

ಕಾಂಚೀವರಂ ಸಿನಿಮಾದಲ್ಲಿ ನಟ ಪ್ರಕಾಶ್ ರಾಜ್ ಅವರು ತನ್ನ ಮಗಳಿಗೆ ಒಂದು ಕಾಂಚೀವರಂ ಸೀರೆಯನ್ನು ನೇಯ್ದುಕೊಡಬೇಕೆಂದು ಪಡುವ ಕಷ್ಟ ನೋಡಿದ್ರೆ ರೇಷ್ಮೆ ಸೀರೆಗೆ ಎಷ್ಟು ಪ್ರಾಮುಖ್ಯತೆ ಇದೆ, ತಂದೆಯ ಪ್ರೀತಿ ಎಂತದ್ದು ಎಂದು ತಿಳಿದು ಕಣ್ಣೀರು ಬರುತ್ತೆ. ರೇಷ್ಮೆ ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬ ಹೆಂಗಳೆಯರ ಬಳಿ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತೆ. ಇಲ್ಲದಿದ್ದರೆ ಖರೀದಿಸಲೇ ಬೇಕು ಎನ್ನುವ ಆಸೆಯಂತೋ ಇದ್ದೇ ಇರುತ್ತೆ.

ಇನ್ನು ಸಾಮಾನ್ಯವಾಗಿ ರೇಷ್ಮೆ ಸೀರೆ ಬೆಲೆ ಹೆಚ್ಚಿರುತ್ತೆ. ಯಾಕೆಂದರೆ ಇದು ತಯಾರಿಸು ಕ್ರಮ ಕೂಡ ಅಷ್ಟು ಸುಲಭವಲ್ಲ. ರೇಷ್ಮೆಗೂಡಿನಿಂದ ಹಿಡಿದು ಸೀರೆಯನ್ನು ತಯಾರಿಸುವ ಪ್ರಕ್ರಿಯೆಯ ವರೆಗೂ ತುಂಬಾ ಹಂತಗಳನ್ನು ದಾಟಿದ ನಂತರವೇ ಒಂದು ಉತ್ತಮ ರೇಷ್ಮೆ ಸೀರೆ ಸಿದ್ದವಾಗೋದು. ಸಾವಿರಾರು ವರ್ಷಗಳಿಂದ ರೇಷ್ಮೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಾಗೂ ರೇಷ್ಮೆಯನ್ನು ವಿಶ್ವದ ಅತ್ಯಂತ ದುಬಾರಿ ಫ್ಯಾಬ್ರಿಕ್ ಎಂದು ಹೇಳಲಾಗುತ್ತೆ. ಈಗ ಆಧುನಿಕ ಯಂತ್ರಗಳು ಬಂದ ನಂತರವೂ ರೇಷ್ಮೆ ಬಟ್ಟೆ ಸಿದ್ಧಪಡಿಸುವುದು ಅಷ್ಟು ಸುಲಭವಾಗಿಲ್ಲ. ಅತ್ಯಂತ ದುಬಾರಿ ರೇಷ್ಮೆ ನೈಸರ್ಗಿಕ ವಸ್ತುಗಳಿಂದ ಮಾತ್ರ ಹೊರಬರುತ್ತೆ. ಜಪಾನೀಸ್ ಲೋಟಸ್ ರೇಷ್ಮೆಯಂತೆ ಬಹಳ ಪ್ರಸಿದ್ಧ ಮತ್ತು ದುಬಾರಿ ದಾರವಾಗಿದೆ. ರೇಷ್ಮೆಯಲ್ಲಿ ಹಲವು ವಿಧಗಳಿವೆ, ಆದರೆ ಅತ್ಯಂತ ಸಾಮಾನ್ಯವಾದವು ರೇಷ್ಮೆ ಹುಳುಗಳ ಲಾರ್ವಾಗಳಿಂದ ತಯಾರಿಸಲ್ಪಡುತ್ತವೆ.

ಒಂದು ಹೆಣ್ಣು ಹುಳು ಒಮ್ಮೆಗೆ 300 ರಿಂದ 500 ಮೊಟ್ಟೆಗಳನ್ನು ಇಡುತ್ತದೆ. ಈ ಎಲ್ಲಾ ಮೊಟ್ಟೆಗಳನ್ನು ಒಂದೇ ಸ್ಥಳದಲ್ಲಿ ಇರಿಸಲಾಗುತ್ತದೆ, ಇದರಿಂದ ಲಾರ್ವಾಗಳು ಹೊರಹೊಮ್ಮುತ್ತವೆ. ಅದರ ಸಹಾಯದಿಂದ ರೇಷ್ಮೆ ದಾರ ತಯಾರಿಸಿ ಸೀರೆ ಮಾಡಲಾಗುತ್ತೆ.

ಮೊದಲಿಗೆ ರೇಷ್ಮೆ ಹುಳುಗಳ ಕೃಷಿಯನ್ನು ಮಾಡಲಾಗುತ್ತದೆ. ರೇಷ್ಮೆ ಹುಳು ಕೃಷಿಗೆ ಪರಿಶ್ರಮ ಹೆಚ್ಚುಬೇಕು. ಪರಿಶ್ರಮ ಹಾಕಿದರೆ ಇದು ಬಂಗಾರದ ಬೆಳೆ. ಜೀವನವನ್ನು ಸುಧಾರಿಸುತ್ತೆ. ರೇಷ್ಮೆ ಮನೆಯ ತಾಪಮಾನ ನಿಭಾಯಿಸುವುದು ಮುಖ್ಯ. ನಾವು ಚಾಕಿ ಸೆಂಟರ್​ನಿಂದ ಎರಡು ಜ್ವರ ಎದ್ದಿರುವ ಮರಿಗಳನ್ನು ತಂದು ಮೂರು ದಿನ ಮೇವು ಹಾಕ್ತೀವಿ. ಆಗ ಮೂರನೇ ಜ್ವರಕ್ಕೆ ಏಳುತ್ತವೆ. ಮತ್ತೆ ಮೂರರಿಂದ-ನಾಲ್ಕು ದಿನ ಸೊಪ್ಪು ಹಾಕಿದರೆ ನಾಲ್ಕನೇ ಜ್ವರಕ್ಕೆ ಏಳುತ್ತವೆ. ನಾಲ್ಕನೇ ಜ್ವರ ಎದ್ದ ಮೇಲೆ ಆರರಿಂದ-ಏಳು ದಿನ ಮೇವು ತಿಂದು ಹುಳು ಹಣ್ಣಾಗುತ್ತೆ. ಈ ರೀತಿ ಹಣ್ಣಾದಾಗ ಬಿದಿರು ಅಥವಾ ಪ್ಲಾಸ್ಟಿಕ್ ಚಂದ್ರಿಕೆ ಮೇಲೆ ಹಾಕ್ತೀವಿ. ರೇಷ್ಮೆ ಹುಳುಗಳಿಗೆ ಬೇಗ ರೋಗ ತಗುಲುತ್ತೆ. ಹೀಗಾಗಿ ಶುದ್ಧ ಸೊಪ್ಪನ್ನು ಹಾಕಿ ಹುಳುಗಳನ್ನು ನಾಜೂಕಾಗಿ ಸಾಕಬೇಕು. ಚನ್ನಾಗಿರುವ ಸೊಪ್ಪು ತಿಂದ್ರೆ ಒಳ್ಳೆಯ ಗೂಡು ಕಟ್ಟುತ್ತೆ. ಇಲ್ಲ ಅಂದ್ರೆ ರೋಗ ಬರುತ್ತೆ ಎಂದು ರೇಷ್ಮೆ ಕೃಷಿ ಮಾಡುತ್ತಿರುವ ಹಾಸನದ ಮಂಜೇಗೌಡ ಅವರು ತಿಳಿಸಿದ್ದಾರೆ.

ಹಾಲ್ ತೊಂಡೆ ರೋಗ, ಸಪ್ಪೆ ರೋಗ, ಸುಣ್ಣಕಟ್ಟು ರೋಗ, ಕೆಂಚು ರೋಗ. ಹೀಗೆ ನಾನಾ ರೋಗಗಳಿಗೆ ರೇಷ್ಮೆ ಹುಳುಗಳು ತುತ್ತಾಗುತ್ತವೆ. ಚಳಿಗಾಲದಲ್ಲಿ ಬಲ್ಪ್, ಹೀಟರ್ ಬಳಸಿ ತಾಪಮಾನ ಕಾಪಾಡಬೇಕಾಗುತ್ತೆ. ಹುಳುಗಳು ಹಣ್ಣಾಗಿ ಗೂಡ ಬಿಡಿಸಲು 23 ದಿನ ಬೇಕಾಗುತ್ತೆ ಎಂದರು.

ಇನ್ನು ಪ್ರತಿಯೊಂದು ರೇಷ್ಮೆ ಹುಳುವನ್ನು ಕೈಯಿಂದಲೇ ತೆಗೆದು ಅವುಗಳನ್ನು ಸಣ್ಣ ವಿಭಾಗಗಳಲ್ಲಿ ಚಂದ್ರಿಕೆಯಲ್ಲಿ ಇರಿಸಲಾಗುತ್ತದೆ. ಬಳಿಕ ಅವುಗಳ ಮೇಲೆ ಮಲ್ಬೆರಿ ಎಲೆಗಳನ್ನು ಹೊಂದಿಸಲಾಗುತ್ತೆ. ರೇಷ್ಮೆ ಹುಳುಗಳು ಈ ಎಲೆಗಳನ್ನು ತಿನ್ನುತ್ತವೆ. ಆಹಾರ ಸೇವನೆ ನಿಂತಾಗ, ಅವು ನೂಲನ್ನು ಬಿಡಲು ಆರಂಭಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು 3ರಿಂದ 8 ದಿನಗಳನ್ನು ತೆಗೆದುಕೊಳ್ಳುತ್ತದೆ. ರೇಷ್ಮೆ ಹುಳು 100 ಮೀಟರ್ ಉದ್ದದ ರೇಷ್ಮೆಯ ಒಂದೇ ದಾರವನ್ನು ಮಾಡುತ್ತದೆ. ಈ ದಾರವು ಅವುಗಳ ಪಕ್ಕದಲ್ಲಿರುವ ನೈಸರ್ಗಿಕ ಗಮ್ಗೆ ಅಂಟಿಕೊಂಡಿರುತ್ತದೆ. ಅರ್ಧ ಕಿಲೋ ರೇಷ್ಮೆ ಮಾಡಲು 2600 ರಿಂದ 3000 ರೇಷ್ಮೆ ಹುಳುಗಳ ಪರಿಶ್ರಮ ಇರುತ್ತದೆ. ಒಂದು ಸುಂದರವಾದ ಸೀರೆ ತಯಾರಾಗಲು ಸುಮಾರು 1700-2500 ರೇಷ್ಮೆ ಹುಳುಗಳು ಸಾಯುತ್ತವೆ.

ಇನ್ನು ಮತ್ತೊಂದೆಡೆ ಹಣ್ಣು ಹುಳುಗಳು ಸೊಪ್ಪು ತಿನ್ನುವುದನ್ನು ನಿಲ್ಲಿಸಿ, ತಲೆಯೆತ್ತಿ, ಗೂಡನ್ನು ಕಟ್ಟಲು ಜಾಗ ಹುಡುಕಾಡುತ್ತವೆ. ಈ ಹಂತದಲ್ಲಿ ಅಲಕ್ಷ್ಯತನ ತೋರಿದಲ್ಲಿ ಹುಳುಗಳು ತಟ್ಟೆಯಲ್ಲಿಯೆ ರೇಷ್ಮೆ ಎಳೆಗಳನ್ನು ಬಿಡಲು ಪ್ರಾರಂಭಿಸುವುದರಿಂದ ರೇಷ್ಮೆಯು ವ್ಯರ್ಥವಾಗುವುದು. ಮಾದರಿ ಹಣ್ಣು ಹುಳು ಕಾಣಿಸಿಕೊಂಡ ಮೇಲೆ ಸೊಪ್ಪನ್ನು ಕತ್ತರಿಸಿ ತೆಳುವಾಗಿ ಕೊಡಬೇಕು. ಇಲ್ಲವಾದಲ್ಲಿ ಹುಳುಗಳು ಸೊಪ್ಪಿನ ಕೆಳಗೆ ಅವಿತುಕೊಂಡು ಅಲ್ಲಿಯೇ ಗೂಡು ಕಟ್ಟಲಾರಂಭಿಸುತ್ತವೆ. ಇದರಿಂದ ಗೂಡಿನ ಗುಣಮಟ್ಟ ಕಡಿಮೆಯಾಗಿ ಹೆಚ್ಚಿನ ಬೆಲೆ ಸಿಗುವುದಿಲ್ಲ.

ಸ್ವಚ್ಛಗೊಳಿಸಿ ಸೋಂಕು ನಿವಾರಣೆ ಮಾಡಿದಂತಹ ಚಂದ್ರಿಕೆಗಳನ್ನೇ ಉಪಯೋಗಿಸಬೇಕು. ಇವುಗಳನ್ನು ಓರೆಯಾಗಿ ನಿಲ್ಲಿಸಬೇಕು. ಸರಿಯಾಗಿ ಹಣ್ಣಾದ ಹುಳುಗಳನ್ನು ಆಯ್ದು 6X4 ಅಡಿ ಚಂದ್ರಿಕೆಗಳ ಮೇಲೆ ಅಂದಾಜು 900-1000 ಹುಳುಗಳನ್ನು ಬಿಡಬೇಕು. ಚಂದ್ರಿಕೆಗಳನ್ನು ಇಡುವ ಕೊಠಡಿಯಲ್ಲಿ, ಸಾಕಷ್ಟು ಗಾಳಿ ಸಂಚಾರ ಇರಬೇಕು. ಇಲ್ಲವಾದಲ್ಲಿ ಕೊಠಡಿಯಲ್ಲಿ ತೇವಾಂಶ ಹೆಚ್ಚಾಗಿ ನೂಲು ಬಚ್ಚಾಣಿಕೆಯು ಕಡಿಮೆಯಾಗಿ ಗೂಡಿನ ಬೆಲೆ ಕಡಿಮೆಯಾಗುವುದು. ಚಂದ್ರಿಕೆಯ ಮೇಲೆ ರೋಗಗ್ರಸ್ಥ ಅಥವಾ ಸತ್ತ ಹುಳು ಕಂಡು ಬಂದಲ್ಲಿ ಅವುಗಳನ್ನು ಕೂಡಲೇ ಸಂಗ್ರಹಿಸಿ ಸುಡಬೇಕು ಇಲ್ಲವೇ ಹೂತು ಹಾಕಬೇಕು.

ಗೂಡುಗಳನ್ನು ಕೋಶಾವಸ್ಥೆಯಲ್ಲಿಯೇ ಬಿಡಿಸಿದರೆ, ಕರಗಿದ ಗೂಡುಗಳ ಸಂಖ್ಯೆ ಕಡಿಮೆಯಾಗುವುದು. ಕಾರಣ 5,6ನೇ ದಿನ ಬಿಡಿಸಿ ಒಳ್ಳೆಯ ಗೂಡುಗಳನ್ನು ಮಾತ್ರ ಮಾರಾಟ ಮಾಡಬೇಕು.

ರೇಷ್ಮೆ ಎನ್ನುವುದು ಫೈಬ್ರೊಯಿನ್  ಪ್ರೋಟೀನ್  ಅನ್ನು ಒಳಗೊಂಡಿರುವ ನಿರಂತರ ತಂತು. ಪ್ರತಿ ಹುಳುವಿನ ತಲೆಯಲ್ಲಿರುವ ಎರಡು  ಲಾಲಾರಸ  ಗ್ರಂಥಿಗಳಿಂದ ಸ್ರವಿಸಲ್ಪಡುತ್ತದೆ ಮತ್ತು ಸಿರಿಸಿನ್ ಎಂಬ ಅಂಟು ಈ ತಂತುಗಳನ್ನು ಬಂಧಿಸುತ್ತದೆ. ರೇಷ್ಮೆಗೂಡುಗಳನ್ನು ಬಿಸಿನೀರಿನಲ್ಲಿ ಇರಿಸುವ ಮೂಲಕ ಸೆರಿಸಿನ್ ಅನ್ನು ತೆಗೆದುಹಾಕಲಾಗುತ್ತದೆ, ಇದು ರೇಷ್ಮೆ ತಂತುಗಳನ್ನು ಮುಕ್ತಗೊಳಿಸುತ್ತದೆ ಮತ್ತು ಅವುಗಳನ್ನು ರಾಟೆಗೆ ಸುತ್ತಲು ಸಿದ್ಧಗೊಳಿಸುತ್ತದೆ. ಇದನ್ನು ಡೀಗಮಿಂಗ್ ಪ್ರಕ್ರಿಯೆ ಎನ್ನಲಾಗುತ್ತೆ.

ಕುದಿಯುವ ನೀರಿನಲ್ಲಿ ರೇಷ್ಮೆ ಗೂಡನ್ನು ಹಾಕಿ ತೊಳೆದು ಇದರಿಂದ ರೇಷ್ಮೆ ದಾರವನ್ನು ಸುಲಭವಾಗಿ ಹೊರತೆಗೆಯಬಹುದು. ನೀರಿನ ತಾಪಮಾನವು ತುಂಬಾ ಹೆಚ್ಚಿದ್ದರೆ, ರೇಷ್ಮೆ ದಾರವು ಹಾನಿಯಾಗುತ್ತದೆ. ರೇಷ್ಮೆ ಗೂಡನ್ನು ಸಹ ಪದೇ ಪದೇ ತೊಳೆಯಬೇಕು. ಈ ಮೂಲಕ ಅದರ ನೈಸರ್ಗಿಕ ಗಮ್ ಅನ್ನು ತೆಗೆದುಹಾಕಿ ಬಳಿಕ ದಾರವನ್ನು ತೆಗೆಯಲಾಗುತ್ತದೆ. ಈ ಪ್ರಕ್ರಿಯೆಯು ಹಲವಾರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಗೂಡಿನಿಂದ ದಾರ ಬೇರ್ಪಡಿಸಿ ದಾರವನ್ನು ಒಂದು ರೋಲಿಂಗ್ ಮೂಲಕ ಸುತ್ತಿ ಒಣಗಿದ ನಂತರ, ಕಚ್ಚಾ ರೇಷ್ಮೆಯನ್ನು ಗುಣಮಟ್ಟಕ್ಕೆ ಅನುಗುಣವಾಗಿ ಪ್ಯಾಕ್ ಮಾಡಲಾಗುತ್ತದೆ.

ರೇಷ್ಮೆಗೆ ಬಣ್ಣ ಹಾಕೋದು ಹೇಗೆ?

ದಾರವನ್ನು ಬ್ಲೀಚಿಂಗ್ ಮಾಡಿದ ನಂತರ ಒಣಗಿಸಿ ನಂತರ ರೇಷ್ಮೆಗೆ ಬಣ್ಣ ಹಾಕಲಾಗುತ್ತೆ. ರೇಷ್ಮೆ ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ಬಣ್ಣವನ್ನು ಸಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಲವಾರು ದಿನಗಳವರೆಗೆ ಪದೇ ಪದೇ ಬಣ್ಣ ಹಾಕಿ ಒಣಗಿಸಲಾಗುತ್ತೆ.

ಸೀರೆ ಹೇಗೆ ತಯಾರಿಸಲಾಗುತ್ತದೆ?

ಕೊನೆಗೆ ದಾರ ಸಿದ್ದವಾದ ಬಳಿಕ ಆ ಎಳೆಗಳು ಮಗ್ಗಕ್ಕೆ ಹೋಗುತ್ತವೆ. ಪವರ್ ಲೂಮ್ ಮತ್ತು ಹ್ಯಾಂಡ್ ಲೂಮ್‌ನಲ್ಲಿ ರೇಷ್ಮೆ ಸೀರೆಗಳನ್ನು ತಯಾರಿಸಬಹುದು. ಈ ಎಳೆಗಳನ್ನು ಸ್ಥಿರ ಮಾದರಿಯಲ್ಲಿ ನೇಯಲಾಗುತ್ತದೆ. ಈ ಪ್ರಕ್ರಿಯೆಯಿಂದ ಬಟ್ಟೆಯನ್ನು ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ತಯಾರಿಸಲು 4-5 ದಿನಗಳಿಂದ 2-3 ತಿಂಗಳವರೆಗೆ ತೆಗೆದುಕೊಳ್ಳುತ್ತದೆ.

ಸಿಲ್ಕ್ ಮಾರ್ಕ್ ನೋಡಿ ರೇಷ್ಮೆ ಸೀರೆ ಖರೀದಿಸಿ

ನಾವು ಚಿನ್ನ ಖರೀದಿಸುವಾಗ ಹಾಲ್‌ಮಾರ್ಕ್ ನೋಡಿ ಖರೀದಿಸುತ್ತೇವೆ. ಅದೇ ರೀತಿ ರೇಷ್ಮೆ ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ನೋಡುವುದು ಕೂಡ ಮುಖ್ಯ. ಈ ಬಗ್ಗೆ ಹಲವಾರು ವರ್ಷಗಳಿಂದ ಸಿಲ್ಕ್ ಮಾರ್ಕ್ ಆರ್ಗನೈಜೇಷನ್ ಆಫ್ ಇಂಡಿಯಾ ಜಾಗೃತಿ ಮೂಡಿಸುತ್ತಾ ಬಂದಿದೆ.

ಹಾಲ್‌ಮಾರ್ಕ್, ಫುಡ್ ಮಾರ್ಕ್ ಗಮನಿಸುವ ಹಾಗೆ ರೇಷ್ಮೆ ಉತ್ಪನ್ನಗಳನ್ನು ಖರೀದಿಸುವ ಮುನ್ನ ಸಿಲ್ಕ್ ಮಾರ್ಕ್ ನೋಡುವುದು ಮುಖ್ಯ. ರೇಷ್ಮೆ ಸೀರೆಗಳಿಗೆ ಸಿಲ್ಕ್ ಮಾರ್ಕ್‌ನ ಟ್ಯಾಗ್ ಅಂಟಿಸಲಾಗಿರುತ್ತದೆ. ಪ್ರತಿ ಟ್ಯಾಗ್‌ಗೂ ಕೋರ್ಡ್ ವರ್ಡ್ ಇರುತ್ತದೆ. ಈ ರೀತಿ ಸಿಲ್ಕ್‌ಮಾರ್ಕ್ ಇರುವಂತಹ ಸೀರೆಗಳು ಶೇ.100ರಷ್ಟು ಗುಣಮಟ್ಟ ಹೊಂದಿರುತ್ತವೆ. ಒಂದು ವೇಳೆ ಸಿಲ್ಕ್ ಮಾರ್ಕ್ ಟ್ಯಾಗ್ ಇದ್ದೂ ನಕಲಿ ಸೀರೆಗಳನ್ನು ಕೊಟ್ಟಿದ್ದರೆ ಅಂತಹ ಅಂಗಡಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ರೇಷ್ಮೆ ಸೀರೆ ಮಾರಾಟ ಮಾಡುವುದನ್ನೇ ಬಂದ್ ಮಾಡಿಸಲಾಗುತ್ತದೆ.

ಕಡಿಮೆ ಬೆಲೆಗೆ ರೇಷ್ಮೆ ಸೀರೆ ಸಿತ್ತು ಅಂತ ಖರೀದಿಸಲು ಹೋಗಬೇಡಿ

ರೇಷ್ಮೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದ್ದರೂ ಭಾರತದ ರೇಷ್ಮೆಗೆ ಬೇಡಿಕೆ ಹೆಚ್ಚಿದೆ. ಇನ್ನು ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಖರೀದಿಸುವಾಗ ಅದರ ಬೆಲೆಯ ಮೇಲೆ ಗಮನವಹಿಸುವುದು ಮುಖ್ಯ.

ಕೆಲವೆಡೆ 500-600 ರೂ.ಗೆ ರೇಷ್ಮೆ ಸೀರೆಗಳನ್ನು ಖರೀದಿಸಿ ಎಂಬ ಫಲಕ ಹಾಕಿರುತ್ತಾರೆ. ಆದರೆ ಒಂದು ಕೆ.ಜಿ. ರೇಷ್ಮೆ ದಾರದ ಬೆಲೆ 3000-3500 ರೂ. ಇದೆ. ನೂಲುವುದು, ಬಣ್ಣ, ವಿನ್ಯಾಸದ ಖರ್ಚೂ ಸೇರಿದರೆ ಒಂದು ಸೀರೆ ಬೆಲೆ ಕನಿಷ್ಠ ಎಂದರೂ 2500 ರೂ.ಗಿಂತ ಕಡಿಮೆ ಇರಲು ಸಾಧ್ಯವೇ ಇಲ್ಲ. ಸೀರೆಯ ತೂಕದ ಆಧಾರದ ಮೇಲೆ ದರ ಹೆಚ್ಚುತ್ತಾ ಹೋಗುತ್ತದೆ. ಪಾಲಿಸ್ಟರ್ ಮಿಶ್ರಣದ ಸೀರೆಗಳನ್ನು ರೇಷ್ಮೆ ಸೀರೆಗಳು ಎಂದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡಲಾಗುತ್ತೆ. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ