AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​​ಇಪಿ ರದ್ದತಿ ಪರಿಣಾಮ: ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಪಿಎಂ-ಉಷಾ ಅನುದಾನ ದೊರೆಯುವುದು ಅನುಮಾನ

Prime Minister Rashtriya Uchatar Abhiyan Fund: ‘ರಾಷ್ಟ್ರೀಯ ಶಿಕ್ಷಣ ನೀತಿ (NEP) 2020’ ಅನ್ನು ರಾಜ್ಯದಲ್ಲಿ ರದ್ದುಗೊಳಿಸುವ ಕಾಂಗ್ರೆಸ್ ಸರ್ಕಾರದ ತೀರ್ಮಾನದಿಂದ ಅನುದಾನದ ವಿಚಾರದಲ್ಲಿ ರಾಜ್ಯದ ವಿವಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಎನ್​ಇಪಿ ಅನುಷ್ಠಾನಗೊಳಿಸದ ಕಾರಣ ಕೇಂದ್ರದ ಪಿಎಂ-ಉಷಾ ಯೋಜನೆಯಡಿ ಅನುದಾನ ಪಡೆಯುವುದು ರಾಜ್ಯದ ವಿವಿಗಳಿಗೆ ಕಷ್ಟವಾಗಲಿದೆ ಎಂದು ಮಾಧ್ಯಮ ವರದಿಯೊಂದು ಉಲ್ಲೇಖಿಸಿದೆ.

ಎನ್​​ಇಪಿ ರದ್ದತಿ ಪರಿಣಾಮ: ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಪಿಎಂ-ಉಷಾ ಅನುದಾನ ದೊರೆಯುವುದು ಅನುಮಾನ
ಬೆಂಗಳೂರು ವಿಶ್ವವಿದ್ಯಾಲಯ
Ganapathi Sharma
|

Updated on: Feb 22, 2024 | 7:07 AM

Share

ಬೆಂಗಳೂರು, ಫೆಬ್ರವರಿ 22: ಕರ್ನಾಟಕದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ (NEP) 2020’ ಅನ್ನು ರದ್ದುಗೊಳಿಸುವ ಕಾಂಗ್ರೆಸ್ ಸರ್ಕಾರದ (Congress Government) ನಿರ್ಧಾರದಿಂದಾಗಿ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು ಪಿಎಂ-ಉಷಾ (Prime Minister Rashtriya Uchatar Abhiyan) ಯೋಜನೆಯಡಿ ಅನುದಾನ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿವೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಪಿಎಂ-ಉಷಾ ಯೋಜನೆ ಅಡಿಯಲ್ಲಿ ಅನುದಾನ ಸ್ವೀಕರಿಸಲು ಒಂದು ಪ್ರಮುಖ ಷರತ್ತು ಎಂದರೆ, ವಿಶ್ವವಿದ್ಯಾಲಯಗಳು ‘ಎನ್​ಇಪಿ-2020’ ಅಡಿಯಲ್ಲಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಒಳಗೊಂಡಿರುವ ಕೇಂದ್ರ ಶಿಕ್ಷಣ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಆದರೆ ಕರ್ನಾಟಕವು ತನ್ನದೇ ಆದ ರಾಜ್ಯ ಶಿಕ್ಷಣ ನೀತಿಯನ್ನು ಹೊಂದಿದ್ದು, ಎನ್​ಇಪಿಯ ಮಾರ್ಗದರ್ಶನ ಪಾಲಿಸುವುದಿಲ್ಲ.

ಪಿಎಂ-ಉಷಾ ಮಾರ್ಗಸೂಚಿ ಅಡಿಯಲ್ಲಿರುವ ನಿರೀಕ್ಷೆಗಳ ಪಟ್ಟಿಯ ಪ್ರಕಾರ, ಕೇಂದ್ರ ಸರ್ಕಾರವು ರಾಜ್ಯ / ಕೇಂದ್ರಾಡಳಿತ ಪ್ರದೇಶ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಎನ್​ಇಪಿಯಲ್ಲಿ ವಿವರಿಸಿದ ಆಡಳಿತಾತ್ಮಕ, ಶೈಕ್ಷಣಿಕ, ಮಾನ್ಯತೆ ಮತ್ತು ಆಡಳಿತ ವಿಚಾರಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳುವಂತೆ ವಿಶ್ವವಿದ್ಯಾಲಯಗಳನ್ನು ಕೇಳಿದೆ.

ಕರ್ನಾಟಕದಲ್ಲಿ, ಆರು ವಿಶ್ವವಿದ್ಯಾಲಯಗಳು ಪಿಎಂ ಉಷಾ ಯೋಜನೆಯಡಿ ನಿಧಿಯನ್ನು ಸ್ವೀಕರಿಸುತ್ತವೆ. ಈ ಪೈಕಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮಲ್ಟಿ ಡಿಸಿಪ್ಲಿನರಿ ಎಜುಕೇಷನ್ ಆ್ಯಂಡ್ ರಿಸರ್ಚ್ ಯುನಿವರ್ಸಿಟೀಸ್ (MERU) ಅಡಿಯಲ್ಲಿ ತಲಾ 100 ಕೋಟಿ ರೂ. ಪಡೆಯುತ್ತವೆ.

ಇತರೆ ನಾಲ್ಕು ವಿವಿಗಳಾದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು, ಮಂಗಳೂರು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯ ಮತ್ತು ಕಲ್ಬುರ್ಗಿ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯಗಳ ಬಲವರ್ಧನೆ (GSU) ಅನುದಾನದ ಅಡಿಯಲ್ಲಿ ತಲಾ 20 ಕೋಟಿ ರೂ. ಪಡೆಯುತ್ತವೆ.

ನಿಧಿಯ ಮೊದಲ ಕಂತನ್ನು ಪಡೆಯಲು ವಿಶ್ವವಿದ್ಯಾಲಯಗಳು ಕ್ರಿಯಾ ಯೋಜನೆಗಳನ್ನು ಸಹ ಸಲ್ಲಿಸಿವೆ. ಸದ್ಯದ ಪರಿಸ್ಥಿತಿ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ನಾವು ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವಾಗ, ಪಿಎಂ ಉಷಾ ಅಡಿಯಲ್ಲಿ ದೊರೆಯುವ ನಿಧಿ ಒಂದು ವರದಾನವಾಗಿದೆ. ಆದರೆ ಎನ್​ಇಪಿ ರದ್ದತಿಯಿಂದ ಅದೂ ಸಹ ದೊರೆಯುವುದು ಅನುಮಾನವಾಗಿದೆ’ ಎಂದಿರುವುದಾಗಿ ಮಾಧ್ಯಮವೊಂದರ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಕರ್ನಾಟಕ ಸೇರಿದಂತೆ ದೇಶದ ವಿವಿಗಳಿಗೆ ಕೇಂದ್ರದಿಂದ 3600 ಕೋಟಿ ರೂ. ಅನುದಾನ ಬಿಡುಗಡೆ: ಪ್ರಲ್ಹಾದ್ ಜೋಶಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಎನ್​ಇಪಿಯನ್ನು ರದ್ದುಗೊಳಿಸುವ ಬಗ್ಗೆ ಪ್ರಕಟಿಸಿತ್ತು. ಅದರ ಬದಲಿಗೆ ರಾಜ್ಯ ಶಿಕ್ಷಣ ನೀತಿ (ಎಸ್​ಇಪಿ) ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅನೇಕ ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯ ಕುಲಪತಿಗಳೂ ಎನ್​ಇಪಿಯೇ ಉತ್ತಮ ಎಂಬುದಾಗಿ ಸರ್ಕಾರಕ್ಕೆ ಶಿಫಾರಸನ್ನೂ ಮಾಡಿದ್ದರು. ಆದಾಗ್ಯೂ, ಕಾಂಗ್ರೆಸ್ ಸರ್ಕಾರ ತನ್ನ ನಿಲುವು ಸಡಿಲಿಸಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ