
ಬೆಂಗಳೂರು, ಜೂನ್ 21: ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಯೋಗ (Yoga) ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ಗಳನ್ನು ಸ್ಥಾಪಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ. ಬೆಂಗಳೂರಿನ (Bengaluru) ವಿಧಾನಸೌಧದಲ್ಲಿ ಇಂದು 11 ನೇ ಅಂತರಾಷ್ಟ್ರೀಯ ಯೋಗ (International Yoga) ದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿರುವ ಯೋಗವನ್ನು ನಾವು ಹೆಚ್ಚಿನ ಜನರಿಗೆ ಪರಿಚಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಗ ಪರಿಚಯಿಸುವ ‘ಯೋಗ ಮಂದಿರ’ಗಳನ್ನು ಪ್ರಾರಂಭಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯನ್ನಾಗಿ ನಿರ್ಮಿಸುವತ್ತ ಈಗಾಗಲೇ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮೈಸೂರು ಜಿಲ್ಲೆಯ ಪ್ರತಿ ಮನೆಗಳಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಒಂದು ಜಿಲ್ಲೆಯನ್ನು ಸಂಪೂರ್ಣವಾಗಿ ಯೋಗ ಜಿಲ್ಲೆಯನ್ನಾಗಿ ರೂಪಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದಲ್ಲಿ ಪರಂಪರಾಗತವಾಗಿ ಬಂದ ಅಷ್ಟಾಂಗ ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆಯುಷ್ ಇಲಾಖೆಯಿಂದ ಇಂದು ಯಶಸ್ವಿಯಾಗಿ 11 ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ರಾಜ್ಯದ 10 ಸಾವಿರ ಸ್ಥಳಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಯೋಗಭ್ಯಾಸ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿತು. 45 ನಿಮಿಷಗಳ ಯೋಗ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು.
ರಾಜ್ಯದ ಹಲವೆಡೆ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಪಾರ್ಕ್, ಯೋಗ ಧನುಷ್, ಹಸಿರು ಯೋಗ, ಯೋಗ ಮಹಾಕುಂಭ, ಯೋಗ ಸಂಯೋಗ, ಯೋಗ ಅನ್ ಪ್ಲಗ್ಸ್ ನಂತಹ ಕಾರ್ಯಕ್ರಮಗಳನ್ನು ಆಯುಷ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಹಸಿರು ಯೋಗ ಕಾರ್ಯಕ್ರಮದ ಅಡಿಯಲ್ಲಿ 1 ಲಕ್ಷ ಗಿಡಗಳನ್ನ ನಡಲಾಗುವುದು. ಅಲ್ಲದೇ ಯೋಗ ಧನಷ್ ಎಂಬ ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ 5 ಲಕ್ಷ ಜನರಿಗೆ ಯೋಗ ಪ್ರೋಟೋಕಾಲ್ ಅನ್ನು ಹೇಳಿಕೊಡಲಾಗಿದ್ದು, ಕಾರ್ಯಕ್ರಮದ ಅಡಿಯಲ್ಲಿ 5000 ಶಾಲೆಗಳಲ್ಲಿ ಯೋಗ ಪ್ರೋಟೋಕಾಲ್ ಅನ್ನು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಇದನ್ನೂ ನೋಡಿ: ನೀರಿನಲ್ಲೇ ಗಂಟೆಗಟ್ಟಲೆ ಯೋಗ ಮಾಡುವ ಹಾನಗಲ್ ಯೋಗಿ!
‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ವಿಶ್ವ ಯೋಗ ದಿನಾಚರಣೆಯನ್ನ ಆಚರಿಸಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಎದುರು 5 ಸಾವಿರಕ್ಕೂ ಹೆಚ್ಚು ಜನರು ಯೋಗಾಭ್ಯಾಸ ನಡೆಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಭಾಪತಿ ಬಸವರಾಜ್ ಹೊರಟ್ಟಿ ಅವರೊಂದಿಗೆ ಯೋಗಭ್ಯಾಸ ನಡೆಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ