ನಿನ್ನೆ ಎಲ್ಲಾ ಕಟ್ಟಿದ್ದೇನೆ ಅಂದಿದ್ರು, ಇಂದು ನೋಡಿದ್ರೆ 2002ರಿಂದ ತೆರಿಗೆಯನ್ನೇ ಕಟ್ಟಿಲ್ವಂತೆ! ವಿವರ ನೋಡಿ
ಕಾಂಗ್ರೆಸ್ನ ಪ್ರಭಾವಿ ನಾಯಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಸಮರ ಸಾರಿದ್ದಾರೆ. ಬೆಂಗಳೂರು, ತುಮಕೂರು, ಕೊರಟಗೆರೆ, ಸಿದ್ದಾರ್ಥ ಲೇಔಟ್, ಮಂಡ್ಯ ಸೇರಿದಂತೆ ಹಲವೆಡೆ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿನ್ನೆ ಕೆರೆಗೆ ಬಾಗಿನ ಅರ್ಪಿಸಲು ಕೊರಟಗೆರೆಗೆ ತೆರಳಿದ್ದ ಪರಮೇಶ್ವರ್ರನ್ನು ಅಲ್ಲೇ ಪ್ರವಾಸಿ ಮಂದಿರಕ್ಕೆ ಕರೆದೋಯ್ದು ತಲಾಶ್ ನಡೆಸಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ ಬೇಟೆ ಶುರುಮಾಡಿದ ಐಟಿ ಅಧಿಕಾರಿಗಳು ಪರಮೇಶ್ವರ್ಗೆ ಸಂಬಂಧಿಸಿದ ನಿವಾಸಗಳು, ಶಿಕ್ಷಣ […]
ಕಾಂಗ್ರೆಸ್ನ ಪ್ರಭಾವಿ ನಾಯಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಿವಾಸ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಸಮರ ಸಾರಿದ್ದಾರೆ. ಬೆಂಗಳೂರು, ತುಮಕೂರು, ಕೊರಟಗೆರೆ, ಸಿದ್ದಾರ್ಥ ಲೇಔಟ್, ಮಂಡ್ಯ ಸೇರಿದಂತೆ ಹಲವೆಡೆ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಿನ್ನೆ ಕೆರೆಗೆ ಬಾಗಿನ ಅರ್ಪಿಸಲು ಕೊರಟಗೆರೆಗೆ ತೆರಳಿದ್ದ ಪರಮೇಶ್ವರ್ರನ್ನು ಅಲ್ಲೇ ಪ್ರವಾಸಿ ಮಂದಿರಕ್ಕೆ ಕರೆದೋಯ್ದು ತಲಾಶ್ ನಡೆಸಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ ಬೇಟೆ ಶುರುಮಾಡಿದ ಐಟಿ ಅಧಿಕಾರಿಗಳು ಪರಮೇಶ್ವರ್ಗೆ ಸಂಬಂಧಿಸಿದ ನಿವಾಸಗಳು, ಶಿಕ್ಷಣ ಸಂಸ್ಥೆಗಳ ಮೇಲೆ ರೇಡ್ ನಡೆಸಿದ್ದಾರೆ. ಇಂಜಿನಿಯರಿಂಗ್ ಕಾಲೇಜು, ಎಂಬಿಎ ವಿಭಾಗ, ಎಂಸಿಎ ಪದವಿ ಕಾಲೇಜುಗಳ ವಿವಿಧ ವಿಭಾಗಗಳ ಹೆಚ್ಒಡಿಗಳ ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಶುಲ್ಕ ಕಟ್ಟಿರುವ ದಾಖಲಾತಿ ಮತ್ತು ಆಡಳಿತ ವಿಭಾಗದ ಅಕೌಂಟ್ಗಳನ್ನೂ ಪರಿಶೀಲಿಸಿದ್ದಾರೆ. ಪ್ರಾಂಶುಪಾಲರು, ಅಧಿಕಾರಿಗಳು, ಲೆಕ್ಕವಿಭಾಗದ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿ ಹುಂಡಿ ಹಣ! ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿದ ವೇಳೆ ದಾಖಲೆಯಿಲ್ಲದ 40 ಲಕ್ಷ ರೂ. ಸಿಕ್ಕಿರುವ ಮಾಹಿತಿಯಿದೆ. ಈ ಹಣವು ಮಂಡ್ಯ ಜಿಲ್ಲೆ ಮದ್ದೂರಿನ ಮುಳಕಟ್ಟಮ್ಮ ದೇವಾಲಯದ ಹುಂಡಿ ಹಣ ಎನ್ನಲಾಗುತ್ತಿದೆ. 2 ತಿಂಗಳ ಹಿಂದೆ ದೇವಾಲಯದ ಹುಂಡಿ ಹಣ ಎಣಿಕೆ ಮಾಡಲಾಗಿತ್ತು. ಆ ಹಣವನ್ನೇ ಸಿದ್ಧಾರ್ಥ ಕಾಲೇಜಿನಲ್ಲೇ ಇಡಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಅಲ್ಲದೆ, ಡಾ.ಜಿ.ಪರಮೇಶ್ವರ್ ಅವರ ಮನೆದೇವತೆ ಮುಳ್ಕಟ್ಟಮ್ಮ ಆಗಿದ್ದು, ಡಾ.ಜಿ.ಪರಮೇಶ್ವರ್ ದೇವಾಲಯದ ಟ್ರಸ್ಟಿಯೂ ಆಗಿದ್ದಾರೆ.
ಬ್ಯಾಂಕ್ ಖಾತೆ ಸೀಜ್! ಜಿ.ಪರಮೇಶ್ವರ್ ಅವರ ಪಿಎ ರಮೇಶ್ರನ್ನ ತುಮಕೂರಿಗೆ ಕರೆದೊಯ್ದು ಪರಮೇಶ್ವರ್ಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳ ಬಗ್ಗೆಯೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ಮಾಡಿದ ಕೆಲವೇ ಕ್ಷಣಗಳಲ್ಲಿ ಪರಮೇಶ್ವರ್ ಮತ್ತು ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಅವರ ಬ್ಯಾಂಕ್ ಅಕೌಂಟ್ಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೆ, ಪರಮೇಶ್ವರ್ ಒಡೆತನದ ಕಾಲೇಜು, ಶಿಕ್ಷಣ ಸಂಸ್ಥೆಗಳ ಸುಮಾರು 120 ಬ್ಯಾಂಕ್ ಅಕೌಂಟ್ಗಳನ್ನೂ ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
70 ಲಕ್ಷ ಅಕ್ರಮ ಹಣ ಪತ್ತೆ: ಇನ್ನು ಬೆಂಗಳೂರಿನ ಸದಾಶಿವನಗರದ ಪರಮೇಶ್ವರ್ ನಿವಾಸದಲ್ಲಿ ಗುರುವಾರ ತಡರಾತ್ರಿ 12.30ರವರೆಗೂ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ, ಕೆಲ ಮಹತ್ವದ ದಾಖಲೆ ಪತ್ರಗಳನ್ನು ಕೊಂಡೊಯ್ದಿದ್ದಾರೆ. ಪರಮೇಶ್ವರ್ ನಿವಾಸಲ್ಲಿ ದಾಖಲೆಯಿಲ್ಲದ 70 ಲಕ್ಷ ಹಣವನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪರಮೇಶ್ವರ್ಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ವೇಳೆ ಪರಮೇಶ್ವರ್ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ನಿರಾಕರಿಸಿದ್ದಾರೆ.
18ವರ್ಷದಿಂದ ತೆರಿಗೆ ಕಟ್ಟದ ಪರಮೇಶ್ವರ್! ಐಟಿ ದಾಳಿ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದ ಜಿ.ಪರಮೇಶ್ವರ್, ನನಗೆ ಶಿಕ್ಷಣ ಸಂಸ್ಥೆ ಹೊರತುಪಡಿಸಿ ಬೇರೆ ವ್ಯವಹಾರಗಳಿಲ್ಲ. ಪ್ರತೀ ವರ್ಷ ಆದಾಯ ತೆರಿಗೆಯನ್ನು ಪಾವತಿಸಿದ್ದೇವೆ. ಈಗ ಅದ್ಯಾಕೆ ದಾಳಿ ಮಾಡಿದ್ದಾರೋ ಗೊತ್ತಿಲ್ಲ ಎಂದಿದ್ದರು. ಆದ್ರೆ ಇದೀಗ ಪರಮೇಶ್ವರ್ ಮೇಲೆ ವಂಚನೆ ಆರೋಪ ಕೇಳಿಬಂದಿದೆ. 2002ರಿಂದಲೂ ಸಿದ್ಧಾರ್ಥ ಶಿಕ್ಷಣ ಮಂಡಳಿ ತುಮಕೂರು ನಗರ ಪಾಲಿಕೆಗೆ ತೆರಿಗೆಯನ್ನೇ ಕಟ್ಟಿಲ್ಲ ಎಂದು ತಿಳಿದುಬಂದಿದೆ. ಸುಮಾರು 2 ಕೋಟಿ ಹಣವನ್ನು ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
ಪರಮೇಶ್ವರ್ ಸಂಬಂಧಿಗಳು, ಆಪ್ತರಿಗೂ ಐಟಿ ಸಮನ್ಸ್: ಮಾಜಿ ಗೃಹ ಸಚಿವ ಪರಮೇಶ್ವರ್ ಸಹೋದರ ಡಾ.ಶಿವಪ್ರಕಾಶ್ ನಿವಾಸದ ಮೇಲೂ ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಪರಮೇಶ್ವರ್ ಅಣ್ಣನ ಮಗ ಆನಂದ್ಗೂ ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಈತ ಪರಮೇಶ್ವರ್ಗೆ ಸಂಬಂಧಿಸಿದ ಮೆಡಿಕಲ್ ಕಾಲೇಜುಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಹೊರ ರಾಜ್ಯದ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಪಡೆದು ಸೀಟ್ ನೀಡಿದ್ದ ಆರೋಪವಿತ್ತು. ಅಲ್ಲದೆ, ಮೆಡಿಕಲ್ ಸೀಟ್ಗಾಗಿ ಹೆಚ್ಚು ಶುಲ್ಕ ಪಡೆಯುತ್ತಿರುವ ಗಂಭೀರ ಆರೋಪವಿದೆ. ಸೀಟ್ ಹಂಚಿಕೆ ಬಗ್ಗೆ ಡೈರಿಯಲ್ಲಿ ಯಾಱರು ಎಷ್ಟು ಹಣ ಕೊಡಬೇಕು? ಎಷ್ಟು ಹಣ ಬಂದಿದೆ ಎಂದು ಆನಂದ್ ಡೈರಿಯಲ್ಲಿ ಬರೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪರಂಗೆ ಜಮೀನು ಮಾರಿದ್ದವರಿಗೂ ಐಟಿ ಸಂಕಟ! ಜಿ.ಪರಮೇಶ್ವರ್ ಆಪ್ತರಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ರಂಗನಾಥಗೌಡ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬಿಪಿ ಹೆಚ್ಚಾದ ಕಾರಣ ರಂಗನಾಥಗೌಡ ಕುಸಿದು ಬಿದ್ದಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಜಿ.ಪರಮೇಶ್ವರ್ಗೆ ಭೂಮಿ ಮಾರಾಟ ಮಾಡಿದ್ದ ಮುನಿರಾಮಯ್ಯಗೂ ಐಟಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ನೆಲಮಂಗಲದ ಬೇಗೂರಿನ ಸಿದ್ಧಾರ್ಥ ಕಾಲೇಜು ಬಳಿಯ 8 ಎಕರೆ ಜಮೀನನ್ನು ಐದೂವರೆ ಕೋಟಿ ರೂ.ಗೆ ಮಾರಾಟ ಮಾಡಿದ್ದ. ಚೆಕ್ ಮೂಲಕ 3 ಕೋಟಿ ರೂ. ನಗದಿನಲ್ಲಿ 2.5 ಕೋಟಿ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.
ಸಿನಿಮಾಗೂ ಪರಮೇಶ್ವರ್ಗೂ ಇದೆಯಾ ನಂಟು? ಇದೀಗ ತಾಜಾ ಬೆಳವಣಿಗೆಯಲ್ಲಿ ಆನಂದ್ ಆಪ್ತ ಕುಮಾರ್ ಭಾಸ್ಕರಪ್ಪರಿಗೂ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕೆಲ ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಫಿಲಂ ಇಡಂಸ್ಟ್ರಿ, ರಿಯಲ್‌ಎಸ್ಟೇಟ್ ಸೇರಿದಂತೆ ಅನೇಕ ಕಡೆ ಹೂಡಿಕೆ ಮಾಡಿದ್ದ ಕೋಟ್ಯಂತರ ರೂ. ಲೆಕ್ಕವನ್ನ ಕುಮಾರ್ ಭಾಸ್ಕರಪ್ಪ ಡೈರಿಯಲ್ಲಿ ಬರೆದುಕೊಂಡಿದ್ದಾನೆ. ಈ ಎಲ್ಲಾ ದಾಖಲೆಗಳನ್ನು ವಿಡಿಯೋ ಮಾಡಿಕೊಂಡು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
Published On - 5:50 pm, Fri, 11 October 19