ಧಾರವಾಡ ಕೇಂದ್ರ ಕಾರಾಗೃಹಕ್ಕೆ ನ್ಯಾ. ಬಿ. ವೀರಪ್ಪ ಭೇಟಿ: ವೀರ ಸಾವರ್ಕರ್ ಪುಸ್ತಕ ಎಲ್ಲಿ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ
ಧಾರವಾಡದಲ್ಲಿರುವ ಕೇಂದ್ರ ಕಾರಗೃಹಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನ್ಯಾಯಮೂರ್ತಿ, ಗ್ರಂಥಾಲಯ ಪರಿಶೀಲನೆ ವೇಳೆ ವೀರಸಾವರ್ಕರ್ ಪುಸ್ತಕ ಎಲ್ಲಿ ಎಂದು ಪ್ರಶ್ನಿಸಿದರು. ಅಲ್ಲದೆ, ಅವರ ಪುಸ್ತು ತಂದಿಡುವಂತೆ ಸೂಚಿಸಿದರು.
ಧಾರವಾಡ: ಕೇಂದ್ರ ಕಾರಾಗೃಹ (Central Prison)ಕ್ಕೆ ಕರ್ನಾಟಕ ಹೈಕೋರ್ಟ್ (High Court) ನ್ಯಾಯಮೂರ್ತಿ ಬಿ. ವೀರಪ್ಪ (B.Veerappa) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಂಥಾಲಯ ಪರಿಶೀಲನೆ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಪುಸ್ತಕಗಳ ಮಾಹಿತಿ ಕಲೆಹಾಕಿದ್ದು, ಇದೇ ವೇಳೆ ವೀರ ಸಾವರ್ಕರ್ (Veer Savarkar) ಅವರ ಪುಸ್ತಕ ಎಲ್ಲಿದೆ ಎಂದು ಪ್ರಶ್ನಿಸಿ ಅಚ್ಚರಿ ಮೂಡಿದ್ದಾರೆ. ವಿವಿಧ ಪುಸ್ತಕಗಳ ಬಗ್ಗೆ ಗ್ರಂಥಾಲಯದ ಕಲಿಕಾ ಸಿಬ್ಬಂದಿ ಜೊತೆ ಕೇಳುತ್ತಾ ವೀರ ಸಾವರ್ಕರ್ ಪುಸ್ತಕ ಯಾಕಿಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಸಿಬ್ಬಂದಿ, ವೀರ ಸಾವರ್ಕರ್ ಪುಸ್ತಕ ಇಲ್ಲ ಎಂದು ಹೇಳಿದರು. ಅಲ್ಲದೆ, ಮಹಾತ್ಮಗಾಂಧಿ, ವಿವೇಕಾನಂದ, ಸುಭಾಷಚಂದ್ರ ಭೋಸ್, ಭಗತ್ ಸಿಂಗ್ ಪುಸ್ತಕ ಇದೆ ಎಂದಿದ್ದಾರೆ. ಈ ವೇಳೆ ನ್ಯಾಯಮೂರ್ತಿಯವರು, ಸಾವರ್ಕರ್ ಪುಸ್ತಕ ತರಿಸುವಂತೆ ಸೂಚಿಸಿ, ಅವರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರು. ಅಂಥ ಸ್ವಾತಂತ್ರ್ಯ ಯೋಧರೆಲ್ಲರ ಪುಸ್ತಕಗಳನ್ನು ಇಡಿ ಎಂದು ಸಲಹೆ ನೀಡಿದರು.
ಕೇಂದ್ರ ಕಾರಗೃಹಕ್ಕೆ ನ್ಯಾ. ಬಿ.ವೀರಪ್ಪ ಭೇಟಿ ನೀಡಿದ ವೇಳೆ ಜೈಲು ಅಧೀಕ್ಷಕ ಎಂ.ಎ.ಮರಿಗೌಡ ಅವರು ವಿವರಣೆ ನೀಡಿದರು. ನಂತರ ನ್ಯಾಯಮೂರ್ತಿಯವರು ಕಾರಾಗೃಹದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೈಲು ಅಧೀಕ್ಷಕ ಎಂ.ಎ.ಮರಿಗೌಡ ಮಾಹಿತಿ ನೀಡಿದರು.
ಜೈಲೂಟದ ರುಚಿ ನೋಡಿದ ನ್ಯಾಯಮೂರ್ತಿ
ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನ್ಯಾ. ವೀರಪ್ಪ ಅವರು ಜೈಲಿನ ಅಡುಗೆ ವಿಭಾಗವನ್ನೂ ಪರಿಶೀಲನೆ ನಡೆಸಿದರು. ಈ ವೇಳೆ ಅವರು, ಅನ್ನ, ಸಾಂಬಾರ ರುಚಿ ನೋಡಿದರು. ಜೊತೆಗೆ ಕೈದಿಗಳ ಊಟಕ್ಕೆ ತರಿಸಲಾಗಿದ್ದ ಮಟನ್ ಪದಾರ್ಥದ ಗುಣಮಟ್ಟ ವೀಕ್ಷಿಸಿದರು. ಅಲ್ಲದೆ, ಅಡುಗೆ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ವೀರಪ್ಪ ಅವರು ಕೈದಿಗಳಿಗೆ ಅಡುಗೆ ಬಗ್ಗೆ ಮಾಹಿತಿ ನೀಡಿದರು.
ಮಜ್ಜಿಗೆ ರುಚಿ ಹೆಚ್ಚಿಸಲು ಟಿಪ್ಸ್ ನೀಡಿದ ನ್ಯಾಯಮೂರ್ತಿ
ಅಡುಗೆ ವಿಭಾಗ ಪರಿಶೀಲನೆ ವೇಳೆ, ಅನ್ನ ಸಾಂಬಾರ್ ಜೊತೆಗೆ ಕೈದಿಗಳಿಗೆ ನೀಡುವ ಮಜ್ಜಿಗೆಯ ರುಚಿ ಕೂಡ ನ್ಯಾಯಮೂರ್ತಿ ವೀರಪ್ಪ ಅವರು ನೋಡಿದ್ದಾರೆ. ಈ ವೇಳೆ ಅವರು, ಪಾಕಶಾಲೆಯಲ್ಲಿ ರುಚಿಯಾದ ಮಜ್ಜಿಗೆ ಮಾಡುವ ವಿಧಾನ ತಿಳಿಸಿದರು. ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು, ಜಿರಿಗೆ ಮಿಶ್ರಣ ಮಾಡಿ ಹಾಕಿ. ಜೊತೆಗೆ ಪುದೀನಾ ಇದ್ದರೂ ಹಾಕಿ. ಈ ಮೂರನ್ನೂ ಪುಡಿ ಮಾಡಿ ಹಾಕಿ ಕೈದಿಗಳಿಗೆ ನೀಡಿ. ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು: ಡೆತ್ನೋಟ್ ಬಗ್ಗೆ ಪೊಲೀಸರಿಗೆ ಅನುಮಾನ
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 5:59 pm, Fri, 20 May 22