ಸಿಪಿಐ ಮೇಲೆ ಮಾರಣಾಂತಿಕ ಹಲ್ಲೆ ಕೇಸ್: ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸಿಪಿಐ ಶ್ರೀಮಂತ್ ಇಲ್ಲಾಳ್: ಡಾ ವಿಕ್ರಮ ಸಿದ್ದಾರೆಡ್ಡಿ
ಹಲ್ಲೆ ನಡೆದು ಹದಿನೈದು ಗಂಟೆಯಾದ್ರೂ ಮೊಕದ್ದಮೆ ದಾಖಲಾಗಿಲ್ಲ. ಯಾವ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಬೇಕೆಂಬ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಗೊಂದಲ ಉಂಟಾಗಿದೆ.
ಕಲಬುರಗಿ: ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಹಲ್ಲೆ ವಿಚಾರ ಹಿನ್ನೆಲೆ ಸದ್ಯ ಕಲಬುರಗಿ ನಗರಗ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಈ ಕುರಿತಾಗಿ ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಮ ಸಿದ್ದಾರೆಡ್ಡಿ ಹೇಳಿಕೆ ನೀಡಿದ್ದು, ಹತ್ತು ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾಳೆ ಮುಂಜಾನೆವರಗೆ ಅವರ ಆರೋಗ್ಯದ ಬಗ್ಗೆ ನಿಖರವಾಗಿ ಹೇಳಬಹುದು. ಸಾಕಷ್ಟು ರಕ್ತಸ್ರಾವ ವಾಗಿತ್ತು, ಇದೀಗ ಸಾಕಷ್ಟು ರಕ್ತ ನೀಡಲಾಗಿದೆ. ಪೇಶೆಂಟ್ ಸ್ಥಿತಿ ಕ್ರಿಟಿಕಲ್ ಇರುವಾಗ ಏರ್ ಲಿಪ್ಟ್ ಮಾಡಲು ತೊಂದರೆಯಾಗುತ್ತದೆ. ಆರೋಗ್ಯದಲ್ಲಿ ಸ್ವಲ ಸುಧಾರಣೆಯಾದ ಮೇಲೆ ಏರ್ ಲಿಪ್ಟ್ ಮಾಡಬಹುದು. ಕುಟುಂಬದವರು, ಇಲಾಖೆಯವರು ಬೇಕಾದ್ರೆ ಏರ್ ಲಿಪ್ಟ್ ಮಾಡಬಹುದು. ಆದ್ರೆ ಎಲ್ಲಾ ಚಿಕಿತ್ಸೆ ಇಲ್ಲೇ ಲಭ್ಯವಿರೋದರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ವಿಕ್ರಮ ಸಿದ್ದಾರೆಡ್ಡಿ ಹೇಳಿದರು.
ಹಲ್ಲೆ ನಡೆದು ಹದಿನೈದು ಗಂಟೆಯಾದ್ರೂ ಮೊಕದ್ದಮೆ ದಾಖಲಾಗಿಲ್ಲ:
ಇನ್ನು ಹಲ್ಲೆ ನಡೆದು ಹದಿನೈದು ಗಂಟೆಯಾದ್ರೂ ಮೊಕದ್ದಮೆ ದಾಖಲಾಗಿಲ್ಲ. ಯಾವ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಬೇಕೆಂಬ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಗೊಂದಲ ಉಂಟಾಗಿದೆ. ಹಲ್ಲೆಯಾಗಿರೋದು ಮಹಾರಾಷ್ಟ್ರದ ಉಮ್ಮರ್ಗಾ ಠಾಣಾ ವ್ಯಾಪ್ತಿಯಲ್ಲಿ. ಗಾಂಜಾ ಬೆಳೆದ ಜಮೀನು ಇರೋದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣಾ ವ್ಯಾಪ್ತಿಯಲ್ಲಿ. ಹೀಗಾಗಿ ಯಾವ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂಬ ಗೊಂದಲ ಉಂಟಾಗಿದ್ದು, ಮಂಠಾಳ ಠಾಣೆಯಲ್ಲಿ ಕೇಸ್ ದಾಖಲಿಸುವಂತೆ ಪೊಲೀಸರು ಹೇಳುತ್ತಿದ್ದಾರೆ. ಉಮ್ಮರ್ಗಾ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ನಕಾರವೆತ್ತಿದ್ದಾರೆ. ಹಾಗಾಗಿ ಸ್ವತಃ ಸಿಪಿಐ ಮೇಲೆ ಹಲ್ಲೆಯಾದರೂ ಇನ್ನೂ ಮೊಕದ್ದಮೆ ದಾಖಲಾಗಿಲ್ಲ.
ಘಟನೆ ಹಿನ್ನೆಲೆ ಏನು?
ಗಾಂಜಾ ಮಾರಾಟಗಾರ ಸಂತೋಷ್ನನ್ನು ಎರಡು ದಿನದ ಹಿಂದೆ ಪೊಲೀಸರು ಬಂಧಿಸಿದ್ದರು. ಆರೋಪಿಯ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ ಪತ್ತೆ ಮಾಡಲು ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಹೋಗಿದ್ದರು. ಈ ವೇಳೆ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ದಿಢೀರನೆ ನಲವತ್ತು ಜನರ ತಂಡ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಶ್ರೀಮಂತ ಇಲ್ಲಾಳ ಅವರ ಸ್ಥಿತಿ ಗಂಭೀರವಾಗಿದೆ. ಇನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಎಸ್ಪಿ ಇಶಾ ಪಂತ್ ಭೇಟಿ ನೀಡಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಪಿಐ ಶ್ರೀಮಂತ್ ಇಲ್ಲಾಳ್ ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಗಾಂಜಾ ಜಪ್ತಿ ಮಾಡಲು ಹೋಗಿದ್ದಾಗ ದಾಳಿ ನಡೆದಿದೆ. ಮಹಾರಾಷ್ಟ್ರದ ಗಡಿ ಉಮ್ಮರ್ಗಾ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಆಗಿದೆ. 30ಕ್ಕೂ ಹೆಚ್ಚು ಜನರು ದಿಢೀರ್ ಅಟ್ಯಾಕ್ ಮಾಡಿದ್ದಾರೆ. ಸಿಪಿಐ ಆರೋಗ್ಯದ ಕುರಿತು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಏರ್ಲಿಫ್ಟ್ ಮಾಡಿ ಬೇರೆಡೆ ಚಿಕಿತ್ಸೆ ಕೊಡಿಸುವ ಬಗ್ಗೆ ಚಿಂತನೆ ನಡೆದಿದೆ. ಗೃಹಸಚಿವರು, ಎಲ್ಲ ಹಿರಿಯ ಅಧಿಕಾರಿಗಳು ಮಾತಾಡಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.