AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ನುಡಿದಂತೆ ನಡೆಯುತ್ತೇವೆ, ಇದುವೇ ಕರ್ನಾಟಕ ಮಾದರಿ ಆಡಳಿತ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದು ಶತಸಿದ್ಧ. ನಮ್ಮ ಸರ್ಕಾರದ 5 ವರ್ಷದ ಅವಧಿಯಲ್ಲಿ ಚುನಾವಣಾ ಪೂರ್ವ ನೀಡಿದ ಎಲ್ಲಾ ಭರವಸೆ ಈಡೇರಿಸಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.

ಸಂಜಯ್ಯಾ ಚಿಕ್ಕಮಠ
| Edited By: |

Updated on: Aug 05, 2023 | 7:00 PM

Share

ಕಲಬುರಗಿ, ಆಗಸ್ಟ್​ 05: ಸರ್ಕಾರದ ಪಂಚ ಗ್ಯಾರಂಟಿ (Guarantee) ಯೋಜನೆಗಳನ್ನು ಜಾರಿಗೆ ತರುವುದು ಶತಸಿದ್ಧ. ನಮ್ಮ ಸರ್ಕಾರದ 5 ವರ್ಷದ ಅವಧಿಯಲ್ಲಿ ಚುನಾವಣಾ ಪೂರ್ವ ನೀಡಿದ ಎಲ್ಲಾ ಭರವಸೆ ಈಡೇರಿಸಲಾಗುವುದು. ಬುದ್ಧ, ಬಸವ, ಅಂಬೇಡ್ಕರ, ಗಾಂಧಿ, ಕುವೆಂಪು ಅವರ ಆಶಯ ಮತ್ತು ತತ್ವದಂತೆ ನುಡಿದಂತೆ ನಡೆಯುತ್ತೇವೆ. ಇದುವೇ ಕರ್ನಾಟಕ ಮಾದರಿ ಆಡಳಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶನಿವಾರ ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಇಂಧನ ಇಲಾಖೆ ಆಯೋಜಿಸಿದ ಪಂಚ ಗ್ಯಾರಂಟಿಯಲ್ಲಿ ಒಂದಾದ ಗರಿಷ್ಠ 200 ಯೂನಿಟ್ ಉಚಿತವಾಗಿ ಒದಗಿಸುವ ಉಚಿತ ಬೆಳಕು, ಸುಸ್ಥಿರ ಬದುಕು ಎಂಬ ಧ್ಯೇಯವಾಕ್ಯ “ಗೃಹ ಜ್ಯೋತಿ” ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ 10 ಜನರಿಗೆ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಮುಂದಿನ 5 ವರ್ಷದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ 76 ಭರವಸೆಗಳನ್ನು ಈಡೇರಿಸಲಾಗುವುದು. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಮ-ಸಮನಾಗಿ ನಡೆಯಲಿವೆ. ಯಾವುದೇ ಅನುದಾನ ಕೊರತೆ ಇಲ್ಲ. ಇದರಲ್ಲಿ ಅನುಮಾನ ಬೇಡ ಎಂಬ ಸ್ಪಷ್ಟವಾದ ಭರವಸೆಯನ್ನು ಸಿಎಂ ನೀಡಿದರು.

ಇದನ್ನೂ ಓದಿ: ನಮ್ಮದು ಬೋಗಸ್​ ಭರವಸೆಗಳಲ್ಲ, ಗ್ಯಾರಂಟಿ ಯೋಜನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ: ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಪಂಚ ಗ್ಯಾರಂಟಿ ಜಾರಿ ಬಗ್ಗೆ ವಿರೋಧ ಪಕ್ಷಗಳು ರಾಜ್ಯ ದಿವಾಳಿಯಾಗುತ್ತದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಯೂರೋಪ್ ದೇಶದಲ್ಲಿನ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಲ್ಲಿಯೇ ಈ ಐದು ಗ್ಯಾರಂಟಿ ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದ ದಿವಾಳಿಯಾಗಲ್ಲ, ಬದಲಾಗಿ ಜನರು ಕೊಂಡುಕೊಳ್ಳುವ ಶಕ್ತಿ ಹೆಚ್ಚಲಿದೆ.

ಗೃಹ ಲಕ್ಷ್ಮೀ ಯೋಜನೆಯಡಿ ಮಾಸಿಕ 2,000 ರೂ., 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ, ಅನ್ನ ಭಾಗ್ಯ, ಯುವ ನಿಧಿ ಈ ಯೋಜನೆಗಳ ಜಾರಿ ಪರಿಣಾಮ ರಾಜ್ಯದ ಜಿಡಿಪಿ, ಆರ್ಥಿಕ ಚಟುವಟಿಕೆ ಜಾಸ್ತಿಯಾಗುತ್ತದೆ. ಐದು ಗ್ಯಾರಂಟಿಗಳಿಂದ ಮಾಸಿಕ ಒಬ್ಬರಿಗೆ 4 ರಿಂದ 5 ಸಾವಿರ ರೂ. ದೊರೆತರೆ, ವಾರ್ಷಿಕ 48 ರಿಂದ 60 ಸಾವಿರ ರೂ. ಲಭಿಸಲಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಿಂದ ಮಹಿಳೆಯರು ಸಂತುಷ್ಟ

ಆಗಸ್ಟ್ 24ಕ್ಕೆ ಗೃಹ ಲಕ್ಷ್ಮೀಗೆ ಚಾಲನೆ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿತ್ತು. ಅದರಂತೆ ಜೂನ್ 11 ರಂದು ‘ಶಕ್ತಿ’ ಯೋಜನೆ ಜಾರಿಗೊಳಿಸಿದೆ. ಪ್ರತಿ ದಿನ ಸುಮಾರು 55 ಲಕ್ಷ ಇದುವರೆಗೂ 30 ಕೋಟಿಗೂ ಹೆಚ್ಚು ಜನ ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿದ್ದು, ಯೋಜನೆಯಿಂದ ರಾಜ್ಯದ ಮಹಿಳೆಯರು ಸಂತುಷ್ಟರಾಗಿದ್ದಾರೆ. ಬಡತನ ಹಿಂಸೆಯ ಅತಿ ಕೆಟ್ಟ ರೂಪ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ.

ಹಸಿವು ಮುಕ್ತ ಕರ್ನಾಟಕ್ಕಾಗಿ “ಅನ್ನ ಭಾಗ್ಯ” ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯ ನೀಡಲು ಘೋಷಿಸಲಾಗಿತ್ತು. ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಹಕರಿಸದ ಕಾರಣ, 5 ಕೆ.ಜಿ ಅಕ್ಕಿಯ ಬದಲು ತಲಾ 170 ರೂ. ಗಳನ್ನು 1.30 ಲಕ್ಷ ಕುಟಟುಂಬಕ್ಕೆ ಡಿ.ಬಿ.ಟಿ. ಮೂಲಕ ನೀಡಲಾಗುತ್ತಿದೆ.

“ಗೃಹ ಜ್ಯೋತಿ” ಕಾರ್ಯಕ್ರಮದಡಿ 2.14 ಕೋಟಿ ಜನ ಲಾಭ ಪಡೆಯಲಿದ್ದು, 1.41 ಕೋಟಿ ಜನರ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್-ಜನವರಿಯಲ್ಲಿ ನಿರುದ್ಯೋಗಿಳಗೆ ಕ್ರಮವಾಗಿ 1,500 ಮತ್ತು 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆ ಸಹ ಜಾರಿಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ತಿಳಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ಧ

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 371ಜೆ ಕಾಯ್ದೆ ತಿದ್ದುಪಡಿ ಮಾಡಿ ಈ ಭಾಗದಲ್ಲಿನ ಅಭಿವೃದ್ಧಿಗೆ ಹೊಸ ಭಾಷೆ ಬರೆದಿದ್ದರು. ಕಲ್ಯಾಣ ಕರ್ನಾಟಕಕ್ಕೆ 371ಜೆ ಸೌಲಭ್ಯ ನೀಡುವಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪಾತ್ರ ದೊಡ್ಡದಾಗಿದೆ. ಲಾಲ್ ಕೃಷ್ಣ ಅಡ್ವಾಣಿಯವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ 371ಜೆ ಕಾಯ್ದೆ ತಿದ್ದುಪಡಿಗೆ ಇಚ್ಛಾಶಕ್ತಿ ತೋರಲಿಲ್ಲ.

ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಬಯ್ಯುವುದೊಂದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ; ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

371ಜೆ ದಿಂದಾಗಿ ಈ ಭಾಗದ ಅನೇಕ ಜನರು ಸರ್ಕಾರಿ ನೌಕರಿ, ಉನ್ನತ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಘೋಷಿಸಿರುವ 5,000 ಕೋಟಿ ರೂ ಅನುದಾನ ಇದೇ ವರ್ಷದಲ್ಲಿ ಖರ್ಚು ಮಾಡಿದಲ್ಲಿ, ಸಪ್ಲಿಮೆಂಟರಿ ಆಯವ್ಯಯದಲ್ಲಿ ಇನ್ನೂ ಹೆಚ್ಚು ಅನುದಾನ ನೀಡಲಾಗುವುದು ಎಂದರು.

ನಮ್ಮ ಸರ್ಕಾರದ ಹಿಂದಿನ ಅವಧಿಯ 5 ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 99,600 ಮನೆಗಳು ಸೇರಿದಂತೆ ರಾಜ್ಯದಾದ್ಯಂತ 14,42,000 ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಹಿಂದಿನ ಸರ್ಕಾರ ಐದು ವರ್ಷದಲ್ಲಿ ಕೇವಲ 3 ಲಕ್ಷ ಮಾತ್ರ ಮನೆ ನಿರ್ಮಾಣ ಮಾಡಿದ್ದು, ಅದರಲ್ಲಿ ಕೇವಲ 19,000 ಮನೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಿದೆ. ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕೇವಲ ಮರುನಾಮಕರಣ ಮಾಡಿದ್ದೇ ಹಿಂದಿನ ಸರ್ಕಾರದ ಕೊಡುಗೆ ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದರು.

ವಾರ್ಷಿಕ ಪ್ರತಿ ಕುಟುಂಬಕ್ಕೆ 60 ಸಾವಿರ ರೂ. ಸೌಲಭ್ಯ

ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ, ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಈ ಪ್ರದೇಶಕ್ಕೆ 371ಜೆ ತಿದ್ದುಪಡಿ ರೂಪದಲ್ಲಿ ಈಗಾಗಲೆ ತಮ್ಮ ಬದುಕಿನಲ್ಲಿ ಬೆಳಕು ತಂದಿದ್ದಾರೆ. ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತರುವ ಮೂಲಕ ಬಡವರ ಧ್ವನಿಯಾಗಿ ನಿಂತಿದ್ದೇವೆ. ಈ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 60 ಸಾವಿರ ರೂ. ಸೌಲಭ್ಯ ಸಿಗಲಿದೆ.

ಬಡವರ ಹೊಟ್ಟೆಗೆ ಅನ್ನ, ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರಯಾಣ ಉಚಿತ, ಮಹಿಳೆಯರಿಗೆ 2,000 ರೂ. ಅರ್ಥಿಕ ಸಹಾಯ, ನಿರುದ್ಯೋಗಿಗೆ ಯುವ ನಿಧಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಕೆಲವರು ಮಾತನಾಡುತ್ತಾರೆ, ಆದರೆ ದೇಶವನ್ನು ಲೂಟಿ ಹೊಡೆದು ವಿದೇಶಕ್ಕೆ ಹಾರಿದವರ ಬಗ್ಗೆ ಯಾರು ಚಕಾರ ಎತ್ತಲ್ಲ ಎಂದ ಅವರು ಜನರ ಬದುಕಿನಲ್ಲಿ ಭರವಸೆಯ ಬೆಳಕು ಚೆಲ್ಲುವ ಯೋಜನೆ ಇವಾಗಿವೆ ಎಂದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಿದ 371ಜೆ ಕಾಯ್ದೆಯ ಜಾರಿ ಘೋಷಣೆಯ ಪುಣ್ಯ ನೆಲದಲ್ಲಿ ಇಂದು 200 ಯೂನಿಟ್ ಉಚಿತ ಒದಗಿಸುವ ಯೋಜನೆಗೆ ಚಾಲನೆ ನೀಡಲಾತ್ತಿರುವುದು ಸಂತಸದ ವಿಚಾರ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.