
ಬೆಂಗಳೂರು, (ಮಾರ್ಚ್ 21): ಹನಿಟ್ರ್ಯಾಪ್ (Honeytrap) ಹಾಗೂ ಮುಸ್ಲಿಂ ಮೀಸಲಾತಿ (muslim reservation )ವಿಧೇಯಕಕ್ಕೆ ವಿರೋಧಿಸಿ ವಿಪಕ್ಷ ಬಿಜೆಪಿ(BJP) ವಿಧಾನಸಭೆ ಕಲಾಪದಲ್ಲಿಂದು ಭಾರಿ ಗದ್ದಲ ಎಬ್ಬಿಸಿದೆ. ಸ್ಪೀಕರ್ ಯುಟಿ ಖಾದರ್ ಅವರು ಸುಮ್ಮನಿರುವಂತೆ ಎಷ್ಟೇ ಮನವಿ ಮಾಡಿದರೂ ಸಹ ಕೇಳಿಲ್ಲ. ಮತ್ತೊಂದು ಹೆಜ್ಜೆ ಮುಂದೆ ಹೋದ ಬಿಜೆಪಿ ಸದಸ್ಯರು ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಮೇಲೆ ಎಸೆದು ಸಿಟ್ಟು ಹೊರ ಹಾಕಿದರು. ಇದರಿಂದ ಸ್ಪೀಕರ್ ಯುಟಿ ಖಾದರ್ ಅವರು 18 ಬಿಜೆಪಿ ಶಾಸಕರನ್ನು ಆರು ತಿಂಗಳುಗಳ ಕಾಲ ಅಮಾನತು ಮಾಡಿ ರೂಲಿಂಗ್ ಹೊರಡಿಸಿದ್ದಾರೆ. ಹೀಗಾಗಿ ಅಮಾನತುಗೊಂಡಿರುವ 18 ಬಿಜೆಪಿ ಶಾಸಕರುಗಳಿಗೆ 6 ತಿಂಗಳು ವಿಧಾನಸಭೆ ಪ್ರವೇಶ ಇರುವುದಿಲ್ಲ.
ಸ್ಪೀಕರ್ ಪೀಠಕ್ಕೆ ಅಗೌರ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆ. ಹನಿಟ್ರ್ಯಾಪ್ (Honey Trap) ಪ್ರಕರಣದ ತನಿಖೆಯನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಪಕ್ಷಗಳ ಸದಸ್ಯರಿಂದು ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್ ಖಾದರ್ ಮೇಲೆ ಪೇಪರ್ ಎಸೆದು ಸಿಟ್ಟು ಹೊರ ಹಾಕಿದರು. ಇದರಿಂದ ಅಸಮಾಧಾನಗೊಂಡ ಸ್ಪೀಕರ್ ಯುಟಿ ಖಾದರ್ ಕಲಾಪವನ್ನು ಅಲ್ಪ ಸಮಯ ಮುಂದೂಡಿದರು. ಬಳಿಕ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪೀಠಕ್ಕೆ ಅಪಮಾನ ಮಾಡಿದ್ದಾರೆಂದು ಬಿಜೆಪಿ 18 ಶಾಸಕರನ್ನು 6 ತಿಂಗಳ ಕಾಲ ಸಸ್ಪೆಂಡ್ ಮಾಡಿ ಸ್ಪೀಕರ್ ರೂಲಿಂಗ್ ಹೊರಡಿಸಿದರು. ಬಳಿಕ ಮಾರ್ಷಲ್ಸ್, ಒಬ್ಬೊಬ್ಬರನ್ನೇ ಎತ್ತಿಕೊಂಡು ಹೋಗಿ ಆಚೆ ಹಾಕಿದರು.