
ಬೆಂಗಳೂರು, ಮೇ 26: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಕುರಿತಾದ ಆಂತರಿಕ ರಾಜಕೀಯ ಬಿಕ್ಕಟ್ಟು ಈಗ ಅಂತಿಮ ಘಟ್ಟಕ್ಕೆ ತಲುಪಿರುವಂತೆ ಕಾಣಿಸುತ್ತಿದೆ. ಹೈಕಮಾಂಡ್‌ನಿಂದ ದಿಢೀರ್ ಕರೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ದೆಹಲಿಗೆ ತೆರಳಿದ್ದು, ಇಂದು (ಮೇ 26 ರ ಬುಧವಾರ) ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಮಹತ್ವದ ಸಭೆ ತೀವ್ರ ಕುತೂಹಲ ಮೂಡಿಸಿದೆ. ಸಿದ್ದರಾಮನಹುಂಡಿಯ ಮಾಸ್ ಲೀಡರ್ ಸಿದ್ದರಾಮಯ್ಯ ಹಾಗೂ ಕನಕಪುರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರ ನಡುವಿನ ಈ ‘ಪವರ್ ಫೈಟ್’ಗೆ ದಿಲ್ಲಿ ದರ್ಬಾರ್‌ನಲ್ಲಿ ಕ್ಲೈಮ್ಯಾಕ್ಸ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಹೈಕಮಾಂಡ್ ಸಭೆಯ ಅಜೆಂಡಾ ಎದುರಿಸಲು ಇಬ್ಬರೂ ನಾಯಕರು ತಮ್ಮದೇ ಆದ ಅಸ್ತ್ರಗಳೊಂದಿಗೆ ಸಜ್ಜಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರ ದಂಡನ್ನೇ ಕಟ್ಟುಕೊಂಡು ದೆಹಲಿಗೆ ತೆರಳುವ ಮೂಲಕ ಪರೋಕ್ಷವಾಗಿ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ. ಒಂದು ವೇಳೆ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆಯ ಒತ್ತಡ ಹೇರಿದರೆ, ಜಿ. ಪರಮೇಶ್ವರ್ ಅವರ ಹೆಸರನ್ನು ಮುಂಚೂಣಿಗೆ ತರುವ ಅಥವಾ ಆಪ್ತರ ಸಲಹೆ ಪಡೆದು ನಿರ್ಧಾರ ಪ್ರಕಟಿಸುವುದಾಗಿ ಹೇಳಿ ಕಾಲಹರಣ ಮಾಡುವ ಸೂತ್ರವನ್ನು ಸಿದ್ದರಾಮಯ್ಯ ಸಿದ್ಧಪಡಿಸಿಕೊಂಡಿದ್ದಾರೆ. ಇದರೊಂದಿಗೆ ಸಂಪುಟ ವಿಸ್ತರಣೆ ಮಾಡದಿದ್ದರೆ ಉಂಟಾಗಬಹುದಾದ ರಾಜಕೀಯ ನಷ್ಟದ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಲು ತಯಾರಿ ನಡೆಸಿದ್ದಾರೆ.
ಇನ್ನೊಂದೆಡೆ, ಡಿಕೆ ಶಿವಕುಮಾರ್ ತಮಗೆ ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಪಟ್ಟು ಹಿಡಿಯಲಿದ್ದಾರೆ. ಮುಂಬರುವ 2028ರ ವಿಧಾನಸಭೆ ಮತ್ತು 2029ರ ಲೋಕಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ನಾಯಕತ್ವದ ಅನಿವಾರ್ಯತೆ ಹಾಗೂ ಗಾಂಧಿ ಕುಟುಂಬಕ್ಕೆ, ವಿಶೇಷವಾಗಿ ಸೋನಿಯಾ ಗಾಂಧಿ ಅವರಿಗೆ ತಾವು ತೋರಿರುವ ನಿಷ್ಠೆಯ ಭಾವನಾತ್ಮಕ ವಿಷಯಗಳನ್ನು ಮುಂದಿಡಲಿದ್ದಾರೆ. ಕೇವಲ ಸಂಪುಟ ಪುನಾರಚನೆಗೆ ದೆಹಲಿ ಭೇಟಿ ಸೀಮಿತವಾದರೆ ತಮಗೆ ಹಿನ್ನಡೆಯಾಗಲಿದೆ ಎಂಬ ಆತಂಕದಲ್ಲಿರುವ ಡಿಸಿಎಂ, ಮೊದಲು ನಾಯಕತ್ವದ ಗೊಂದಲ ನಿವಾರಣೆಗೆ ಹಠ ಹಿಡಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿ ಭೇಟಿ ಹಿಂದೆಯೇ ಸತೀಶ್ ಜಾರಕಿಹೊಳಿ ಸೇರಿ 7 ಮಂದಿ ಸಚಿವರ ಪಟಲಾಂ ರಾಜಧಾನಿಗೆ ದೌಡು!
ಒಟ್ಟಿನಲ್ಲಿ, ಇಬ್ಬರು ಮಹಾ ನಾಯಕರ ಹಿತಾಸಕ್ತಿ ಕಾಯ್ದು ಪಕ್ಷವನ್ನು ಮುನ್ನಡೆಸುವುದು ಈಗ ಎಐಸಿಸಿ ನಾಯಕತ್ವಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ