ಸರ್ಕಾರ vs ರಾಜಭವನ: ಮತ್ತೆರಡು ವಿಧೇಯಕ ವಾಪಸ್ ಕಳುಹಿಸಿದ ರಾಜ್ಯಪಾಲರು
ರಾಜ್ಯಪಾಲರು ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡುವಣ ವಿಧೇಯಕ ಜಟಾಪಟಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಹಿಂದೆ ಮೈಕ್ರೋ ಫೈನಾನ್ಸ್ ಸಂಬಂಧಿತ ಸುಗ್ರೀವಾಜ್ಞೆ ವಾಪಸ್ ಕಳುಹಿಸಿ ನಂತರ ಸಹಿ ಹಾಕಿದ್ದ ರಾಜ್ಯಪಾಲರು, ಮತ್ತೆರಡು ಮಸೂದೆಗಳನ್ನು ವಾಪಸ್ ಕಳುಹಿಸಿದ್ದರು. ಇದೀಗ ಮತ್ತೆ ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 28: ಕೆಲವು ದಿನಗಳ ಹಿಂದಷ್ಟೇ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ 2024’ ಅನ್ನು ಸಹಿ ಹಾಕದೆ ಹಿಂದೆ ವಾಪಸ್ ಕಳುಹಿಸಿದ್ದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಇದೀಗ ಮತ್ತೆರಡು ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ರಾಜ್ಯಪಾಲರ ನಡುವಣ ಸಂಘರ್ಷ ಮುಂದುವರಿದಂತಾಗಿದೆ.
ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ 2024, ಕರ್ನಾಟಕ ಸೌಹಾರ್ದ ಸರಕಾರಿ ತಿದ್ದುಪಡಿ ವಿಧೇಯಕ 2024 ಈ ಎರಡು ಮಸೂದೆಗಳನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಇವುಗಳ ಬಗ್ಗೆ ಸ್ಪಷ್ಟನೆಯನ್ನೂ ಕೇಳಿದ್ದಾರೆ.
ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಹಲವು ಆಕ್ಷೇಪಗಳನ್ನು ಮಾಡಿದ್ದಾರೆ. ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ಬಗ್ಗೆ ಸರ್ಕಾರವು ತಿದ್ದುಪಡಿ ಮಾಡಿತ್ತು. ಆದರೆ ಈ ತಿದ್ದುಪಡಿಗೆ ರಾಜ್ಯಪಾಲರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರು ಹೇಳಿದ್ದೇನು?
ನಾಮನಿರ್ದೇಶಿತರಿಗೆ ಮತದಾನದ ಹಕ್ಕುಗಳನ್ನು ನೀಡಿದರೆ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದುಕೊಳ್ಳಲಾಗುತ್ತದೆ. ಇದು ಸಹಕಾರಿ ಕ್ಷೇತ್ರದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಹೆಜ್ಜೆಯಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರ vs ರಾಜಭವನ: ಮತ್ತೊಂದು ಮಸೂದೆ ವಾಪಸ್ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ – 2024 ಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯಪಾಲರು, ಈ ವಿಧೇಯಕದಲ್ಲಿ ಸಹಕಾರಿ ಚುನಾವಣಾ ಪ್ರಾಧಿಕಾರ ರದ್ದುಗೊಳಿಸುವ ಉಲ್ಲೇಖವಿದೆ. ಇದನ್ನು ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ. ಸಹಕಾರ ಸಂಘಗಳ ಚುನಾವಣೆ ಸ್ವತಂತ್ರ ಮತ್ತು ನ್ಯಾಯಯುತವಾಗಿ ನಡೆಸಲು ಪ್ರಾಧಿಕಾರವಿದೆ. ಆರ್ಥಿಕ ಹೊರೆಯ ಕಾರಣದಿಂದಾಗಿ ಸಹಕಾರಿ ಚುನಾವಣಾ ಪ್ರಾಧಿಕಾರಗಳನ್ನು ರದ್ದುಗೊಳಿಸುವ ಪ್ರಸ್ತಾಪವು ಸೂಕ್ತವಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.








