
ಬೆಂಗಳೂರು, (ಸೆಪ್ಟೆಂಬರ್ 03): ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಆರೋಪಗಳಿಗೆ ತೆರೆ ಎಳೆಯಲು ಮತ್ತು ಪ್ರಮುಖ ವಿಷಯಗಳನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಎರಡು ಉನ್ನತ ಸಮಿತಿಗಳನ್ನು ರಚಿಸಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉಪಮುಖ್ಯಮಂತ್ರಿ, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಡಾ. ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್ ಅವರನ್ನೊಳಗೊಂಡ ‘ರಾಜಕೀಯ ವ್ಯವಹಾರಗಳ ಸಮಿತಿ’ ರಚಿಸಲಾಗಿದೆ.
ಯಾವುದೇ ಪ್ರಮುಖ ನಿರ್ಧಾರಗಳನ್ನು ಅಧಿಕೃತವಾಗಿ ಸಚಿವ ಸಂಪುಟದ ಮುಂದೆ ಮಂಡಿಸುವ ಮುನ್ನ, ಪ್ರಮುಖ ರಾಜಕೀಯ ಹಾಗೂ ನೀತಿ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲು 10 ಸದಸ್ಯರನ್ನೊಳಗೊಂಡ ‘ರಾಜಕೀಯ ವ್ಯವಹಾರಗಳ ಸಮಿತಿ ರಚನೆ ಮಾಡಲಾಗಿದೆ.
ಇದರ ಜತೆಗೆ ಸರ್ಕಾರದ ಪರವಾಗಿ ಅಧಿಕೃತವಾಗಿ ಮಾತನಾಡಲು ಹಾಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಹೆಚ್.ಸಿ. ಬಾಲಕೃಷ್ಣ ಮತ್ತು ಲಕ್ಷ್ಮಣ ಸವದಿ ಅವರನ್ನೊಳಗೊಂಡ ವಕ್ತಾರರ ಸಮಿತಿಯನ್ನು ರಚಿಸಲಾಗಿದೆ.
ಇನ್ನು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಾ ಜಿ ಪರಮೇಶ್ವರ್, ಸಚಿವರ ತಂಡವನ್ನು ರಚನೆ ಮಾಡಲಾಗಿದೆ. ಪ್ರಮುಖ ನಿರ್ಣಯ ಕೈಗೊಳ್ಳುವಾಗ ಕ್ಯಾಬಿನೆಟ್ ಬರುವ ಮೊದಲೇ ಚರ್ಚೆ ಅಗತ್ಯ. ಕೆಲ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಈ ಸಚಿವರ ಕಮಿಟಿ ಚರ್ಚೆ ನಡೆಸುತ್ತದೆ. ಸಿಎಂ ಒಬ್ಬರೇ ತೀರ್ಮಾನ ಮಾಡುತ್ತಾರೆ ಅನ್ನುವ ಭಾವನೆ ಬರುತ್ತದೆ. ಹೀಗಾಗಿ ಪ್ರಮುಖ ಸಚಿವರ ಕಮಿಟಿ ರಚನೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.