ಬೆಂಗಳೂರು ಕಾಲ್ತುಳಿತ ಪ್ರಕರಣ: ಗುಪ್ತಚರ ಇಲಾಖೆಯ ಮುಖ್ಯಸ್ಥ ಎತ್ತಂಗಡಿ..!
ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಚಿನ್ನಸ್ವಾಮಿಯಲ್ಲಿ ಬುಧುವಾರ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಕಮಿಷನರ್ ಸೇರಿ 5 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇನ್ನು ಈ ಘಟನೆಗೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ, ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಎತ್ತಂಗಡಿ ಮಾಡಿದೆ.

ಬೆಂಗಳೂರು, (ಜೂನ್ 06): ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣಕ್ಕೆ (Bengaluru stampede case) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಎತ್ತಂಗಡಿ ಮಾಡಿದೆ. ಬೆಂಗಳೂರು ಕಾಲ್ತುಳಿತಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಎನ್ನುವ ಮಾತುಗಳು ಜೋರಾಗುತ್ತಿದ್ದಂತೆಯೇ ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ (Intelligence ADGP Hemant Nimbalkar) ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಹೇಳಿದ್ದರು. ಅಲ್ಲದೇ ಗುಪ್ತಚರ ಇಲಾಖೆಯೂ ಸಹ ಫೇಲ್ ಆಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ, ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಕರ್ನಾಟಕ ಪೊಲೀಸರು ದಾಖಲಿಸಿದ ಎಫ್ಐಆರ್!
1998 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಗುಪ್ತಚರ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆಗಿ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ರಾಜ್ಯ ಸರಕಾರ ನೇಮಕ ಮಾಡಿ, 1997 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಕೆ.ವಿ. ಶರತ್ ಚಂದ್ರ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿತ್ತು.
ಗುಪ್ತಚರ ಇಲಾಖೆ ವೈಫಲ್ಯ
ಹದಿನೆಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಸ್ ನಲ್ಲಿ ವಿಜಯದ ನಗೆ ಬೀರಿತ್ತು. ಈ ಹಿನ್ನೆಲೆಯಲ್ಲಿ ತಂಡದ ಅಭಿಮಾನಿಗಳ ಹರ್ಷೋಲ್ಲಾಸ ಮೇರೆಮೀರಿತ್ತು. ಈ ನಡುವೆ ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ವಿಜಯೋತ್ಸವ ಮೆರವಣಿಗೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂಧನ ಸಮಾರಂಭ ನಡೆಸಲು ಕ್ರಿಕೆಟ್ ಅಸೋಸಿಯೇಷನ್ ಮುಂದಾಗಿತ್ತು. ಜತೆಗೆ ರಾಜ್ಯ ಸರಕಾರ ಸಹ ತಾನೇನೂ ಕಮ್ಮಿ ಎಂಬಂತೆ ಆರ್ಸಿಬಿ ತಂಡಕ್ಕೆ ವಿಧಾನಸೌಧದ ಮೆಟ್ಟಿಲುಗಳ ಬಳಿ ಸನ್ಮಾನ ಕಾರ್ಯಕ್ರಮ ಫಿಕ್ಸ್ ಮಾಡಿತು. ಆದ್ರೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಸಿಲುಕಿ 12 ಮಂದಿ ಅಮಾಯಕ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಇನ್ನು ಈ ಘಟನೆಗೆ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.
ಐಪಿಎಲ್ ಇತಿಹಾಸ ನೋಡಿದರೆ ತಿಳಿಯುತ್ತದೆ ಆರ್ಸಿಬಿಗೆ ಇರುವ ಕಲ್ಟ್ ಫ್ಯಾನ್ಸ್ ಎಂಥದ್ದು ಎಂಬುದು. ಆದರೆ ಇದನ್ನು ಅರಿಯುವಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಯಿತು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬುಧವಾರ ಸಂಜೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿ, ಇಷ್ಟೊಂದು ಪ್ರಮಾಣದಲ್ಲಿ ಆರ್ಸಿಬಿ ಅಭಿಮಾನಿಗಳು ಬರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳುವ ಮೂಲಕ ಇಂಟಲಿಜೆನ್ಸಿ ವೈಫಲ್ಯವನ್ನು ಒಪ್ಪಿಕೊಂಡಿದ್ದರು.
ನಿಂಬಾಳ್ಕರ್ ಅವರು ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಹುದ್ದೆಯ ಪ್ರಭಾರಿ ಜವಾಬ್ದಾರಿಯನ್ನು ಸಹ ಹೊಂದಿದ್ದಾರೆ. ಗುಪ್ತಚರ ಇಲಾಖೆಯಂತ ಪ್ರಮುಖ ಹುದ್ದೆಯನ್ನು ಹೊಂದಿರುವ ಅಧಿಕಾರಿಗೆ ವಾರ್ತಾ ಇಲಾಖೆ ಆಯುಕ್ತರ ಹುದ್ದೆಯ ಹೆಚ್ಚುವರಿ ಹೊಣೆ ನೀಡಿರುವುದು ಎಷ್ಟು ಸರಿ. ಐಪಿಎಸ್ ಅಧಿಕಾರಿಯನ್ನು ಸರಕಾರದ ಯೋಜನೆಗಳ ಪ್ರಚಾರ ಮತ್ತು ಜಾಹಿರಾತು ನಿರ್ವಹಣೆಗೂ ನಿಯೋಜಿಸುವ ಮೂಲಕ ಕೆಲಸದ ಒತ್ತಡ ಎದುರಿಸುವಂತಾಗಿದೆ. ಪರಿಣಾಮ ಅತ್ತ ಗುಪ್ತಚರ ಇಲಾಖೆಗೂ ಇತ್ತ ವಾರ್ತಾ ಇಲಾಖೆಗೂ ನ್ಯಾಯ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
ಸಿಎಂಗೆ ಪತ್ರ ಬರೆದ ಟಿ.ಜೆ.ಅಬ್ರಹಾಂ
ಕಾಲ್ತುಳಿತ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಕಾಣುತ್ತಿದೆ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗುತ್ತಿದ್ದಂತೆಯೇ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ಕಾಲ್ತುಳಿತ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಕಾಣುತ್ತಿದೆ. ನಿಂಬಾಳ್ಕರ್ ಗುಪ್ತಚರ ಇಲಾಖೆ ಎಡಿಜಿಪಿಯಾಗಿ ಕರ್ತವ್ಯ ಲೋಪವೆಸಗಿದ್ದಾರೆ. ಕಾಲ್ತುಳಿತ ದುರಂತದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಇದೆ ಎಂದು ಕಮಿಷನರ್ ಅಮಾನತು ಮಾಡಿ ನಿಂಬಾಳ್ಕರ್ರನ್ನು ಉಳಿಸಿಕೊಂಡಿದ್ಯಾಕೆ? ಮಾಜಿ ಶಾಸಕಿಯೊಬ್ಬರ ಪತಿ ಎಂಬ ಕಾರಣದಿಂದ ಅಮಾನತು ಮಾಡಿಲ್ವಾ? ಎಂದು ಟಿ.ಜೆ.ಅಬ್ರಹಾಂ ಸಿಎಂಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ವಿರುದ್ಧ ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Fri, 6 June 25








