ಹನಿಟ್ರ್ಯಾಪ್ ಮಾಡಲು ಬಂದ ಯುವತಿ ಯಾರು? ಚಹರೆ ಬಿಚ್ಚಿಟ್ಟ ರಾಜಣ್ಣ
ಬ್ಲೂ ಜೀನ್ಸ್ ಹುಡುಗಿ, ಬೇರೆ ಬೇರೆ ಹುಡುಗಿಯರು, ಹೈಕೋರ್ಟ್ ವಕೀಲೆ ಎಂದು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಬಗ್ಗೆ ಸಚಿವ ಕೆಎನ್ ರಾಜಣ್ಣ ಮಾಹಿತಿ ಬಹಿರಂಗಪಡಿಸಿದ್ದಾರೆ. ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಬಂದ ತಂಡದ ಚಹರೆ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. 2 ಬಾರಿ ಕಾಮ ಖೆಡ್ಡಾಗೆ ಬೀಳಿಸಲು ಯತ್ನಿಸಿರುವ ಬಗ್ಗೆ ಅವರು ನೀಡಿದ ಮಾಹಿತಿ ಇಲ್ಲಿದೆ.

ಬೆಂಗಳೂರು, ಮಾರ್ಚ್ 25: ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ (Karnataka honey trap case) ಪ್ರಕರಣದ ಹಿಂದೆ ಇರುವವರು ಯಾರು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಇದೀಗ ಸಚಿವ ಕೆಎನ್ ರಾಜಣ್ಣ (KN Rajanna) ಅವರೇ ಕಾಮ ಖೆಡ್ಡಾದ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಹಾಕಿಕೊಂಡು, ‘ಪರ್ಸನಲ್ ಆಗಿ ಮಾತನಾಡ್ಬೇಕು’ ಎಂದು 2 ಬಾರಿ ಹನಿಟ್ರ್ಯಾಪ್ಗೆ ಯತ್ನಿಸಿದ್ದರು. ಇದರ ಹಿಂದೆ ಇರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿಸಿಟಿವಿ ಇದ್ದಿದ್ದರೆ ಅವರು ಯಾರು ಎಂದು ಗೊತ್ತಾಗುತ್ತಿತ್ತು: ರಾಜಣ್ಣ
ಹನಿಟ್ರ್ಯಾಪ್ ಯತ್ನಕ್ಕೆ ಬಂದ ವೇಳೆ, ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಸಿಸಿಟಿವಿ ಇದ್ದಿದ್ರೆ ಯಾರು ಎಂಬುದು ಈಗ ಗೊತ್ತಾಗುತ್ತಿತ್ತು ಎಂದಿದ್ದಾರೆ.
ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ದೂರು ಕೊಡುತ್ತೇನೆ: ರಾಜಣ್ಣ
ಸದನದಲ್ಲಿ ಪ್ರಸ್ತಾಪ ಆಗಿ ಇಷ್ಟು ದಿನಾವದರೂ ರಾಜಣ್ಣ ದೂರು ದಾಖಲಿಸದೇ ಇರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದೀಗ ಸಚಿವ ಅವರೇ, ದೂರು ಕೊಡುತ್ತೇನೆ ಎಂದಿದ್ದಾರೆ. ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದಿದ್ದಾರೆ.
ಮತ್ತೊಂದೆಡೆ, ನ್ಯಾಯಾಧೀಶರ ಹನಿಟ್ರ್ಯಾಪ್ಗೆ ಯತ್ನ ಆರೋಪದ ಬಗ್ಗೆ ಸ್ಪಷ್ಟನೆ ನೀಡಿ, ತಾವು ಆ ರೀತಿ ಹೇಳಿಯೇ ಇಲ್ಲ ಎಂದಿದ್ದಾರೆ.
ಹೈಕಮಾಂಡ್ ಭೇಟಿಗೆ ರಾಜಣ್ಣ ನಿರ್ಧಾರ
ಹನಿಟ್ರ್ಯಾಪ್ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ಕಲೆ ಹಾಕಿದೆ. ಸಿಎಂ ಜೊತೆಯೂ ಹೈಕಮಾಂಡ್ ನಾಯಕರು ಚರ್ಚೆ ಮಾಡಿದ್ದಾರೆ. ಮಾರ್ಚ್ 30ರ ಬಳಿಕ ಹೈಕಮಾಂಡ್ ಭೇಟಿ ಆಗುತ್ತೇನೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ಸಂಚಿನ ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ
ಇನ್ನು ಗೃಹ ಸಚಿವ ಪರಮೇಶ್ವರ್ ಮಾತನಾಡಿ, ರಾಜಣ್ಣ ದೂರು ಕೊಟ್ಟರೆ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ
ಈ ಮಧ್ಯೆ, 3 ದಿನ ದೆಹಲಿ ಪ್ರವಾಸದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ, ಸಾಲು ಸಾಲು ಹೈಕಮಾಂಡ್ ನಾಯಕರನ್ನು ಭೇಟಿ ಆಗುತ್ತಿದ್ದಾರೆ. ಸೋಮವಾರ ಸಂಜೆ ಕಾಂಗ್ರೆಸ್ ಕಚೇರಿಯಲ್ಲಿ ವೇಣುಗೋಪಾಲ್ ಜೊತೆ ಹನಿಟ್ರ್ಯಾಪ್ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಪಕ್ಷದ ನಾಯಕರ ಬಗ್ಗೆಯೇ ದೂರು ನೀಡಿರುವ ಸತೀಶ್ ಜಾರಕಿಹೊಳಿ, ಹಿರಿಯ ನಾಯಕನನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಎಂದು ಪ್ರಸ್ತಾಪ ಮಾಡಿದ್ದಾರೆ. ಇಂದು ಸುರ್ಜೇವಾಲರನ್ನೂ ಭೇಟಿ ಮಾಡಲು ಸತೀಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ.