ಆ ಒಂದು ಮಾತಿಗೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ
ಸದ್ಯದ ರಾಜಕಾರಣ ಹಾಗೂ ಸದನದಲ್ಲಿ ಸದಸ್ಯರು ನಡೆದುಕೊಳ್ಳುವ ರೀತಿಯಿಂದ ಬೇಸರಗೊಂಡಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಈ ಬಗ್ಗೆ ಸ್ವತಃ ಹೊರಟ್ಟಿ ಅವರೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದ್ರೆ, ಇದೀಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹಾಗಾದ್ರೆ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಕಾರಣವೇನು ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ.

ಹುಬ್ಬಳ್ಳಿ, (ಮಾರ್ಚ್ 25): ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ(Basavaraj horatti) ಅವರು ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಇದೀಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದು (ಮಾರ್ಚ್ 25) ಸುದ್ದಿಗಾರರೊಂದಿಗೆ ಮಾತನಾಡಿರುವ ಹೊರಟ್ಟಿ, ರಾಜೀನಾಮೆ ಸುದ್ದಿ ಹರಿದಾಡಿದ ಬಳಿಕ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ. 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ . ಹೀಗಾಗಿ ಅದನ್ನ(ರಾಜೀನಾಮೆ) ಅಲ್ಲಿಗೆ ಕೈ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅನ್ ಸೈನಡ್ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ . 27ನೇ ತಾರೀಕು ಕೂತು ಮಾತನಾಡಿ ತೀರ್ಮಾನ ಮಾಡೋಣ ಅಂದಿದ್ದಾರೆ . ಹೀಗಾಗಿ ಅದನ್ನ ಅಲ್ಲಿಗೆ ಕೈ ಬಿಟ್ಟಿದ್ದೇನೆ. ಬೆಂಗಳೂರಲ್ಲಿ ಸಭೆ ಮಾಡೋದಾಗಿ ಅಂದು ಕೊಂಡಿದ್ದೇವೆ. ಎಲ್ಲರೂ ಸಹ ನೀವೇ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ನಾನು ಮಾಡಿದ ತೀರ್ಮಾನಕ್ಕೆ ವಿರೋಧ ಬಂತು . ನಮ್ಮ ಶಾಸನ ಸಭೆ ಸದಸ್ಯರು ನೋಡೋಣ ರಾಜೀನಾಮೆ ಬೇಡ ಎಂದಿದ್ದಾರೆ. ಪುಟ್ಟಣ್ಣ ಕರೆ ಮಾಡಿ ರಾಜೀನಾಮೆ ವಿಷಯದಲ್ಲಿ ಮುಂದುವರಿಬೇಡಿ ಅಂದ್ರು. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡುತ್ತಿರುವುದಕ್ಕೆ ನಾನು ರಾಜೀನಾಮೆಯಿಂದ ಹಿಂದೆ ಸರಿದಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದರು.
ಇದನ್ನೂ ಓದಿ: ಬಸವರಾಜ್ ಹೊರಟ್ಟಿ ರಾಜೀನಾಮೆ ಪತ್ರ ವೈರಲ್: ಹಲವು ಗೊಂದಲ
ಈ ಹಿಂದೆ ಇಂತಹ ಘಟನೆ ಆಗಿಲ್ಲ. ಮಾರ್ಚ್ 19, 20, 21ಕ್ಕೆ ಸದನ ಮುಂದುವರೆಸಲಾಗದಂತೆ ಆಯ್ತು. ಬಜೆಟ್ ಮೇಲೆ ಸಿಎಂ ಉತ್ತರ ಕೊಟ್ಟ ನಂತರ ಹನಿಟ್ರ್ಯಾಪ್ ಉತ್ತರ ಕೊಡಿಸುತ್ತೇನೆ ಎಂದು ಹೇಳಿದ್ದೆ. ತಪ್ಪಿಗಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಹ ಹೇಳಿದ್ದರು. ಆದರೂ ಅದೇ ಗದ್ದಲದಲ್ಲಿ ಬಿಲ್ ಕೂಡ ಪಾಸ್ ಆಯ್ತು. ಚರ್ಚೆ ಆಗದೆ ಈ ರೀತಿ ಗದ್ದಲದಲ್ಲಿ ಬಿಲ್ ಪಾಸ್ ಆಗಬಾರದು. ಅದು ಜನರಿಗೆ ಮೋಸ ಮಾಡಿದಂತೆ. ನಾನು ಅಲ್ಲಿ ಇದ್ರು ಕೂಡ ಈ ರೀತಿ ಮಾಡಿದ್ರು . ಹೀಗಾಗಿ ಮನಸ್ಸಿಗೆ ಬೇಜಾರ್ ಆಯ್ತು ಎಂದು ಬೇಸರ ಹೊರಹಾಕಿದರು.
ಹಲವು ನಾಯಕರು ರಾಜೀನಾಮೆ ಕೊಡುವುದರಿಂದ ಎಲ್ಲಾ ಬಗೆ ಹರಿಯುವುದಿಲ್ಲ ಅಂದ್ರು. ಹೀಗಾಗಿ ರಾಜೀನಾಮೆ ನೀಡಬಾರದು ಎಂದು ಈಗಾಗಲೇ ತೀರ್ಮಾನ ಮಾಡಿದ್ದೇನೆ. 27ರ ನಂತರ ಎಲ್ಲಾ 75 ಸದಸ್ಯರಿಗೆ ಪತ್ರ ಕಳುಹಿಸುತ್ತೇನೆ. ಯಾರು ನನ್ನ ಮಾತು ಮೀರಲ್ಲ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಿನ ದಿನಮಾನಗಳಲ್ಲಿ ಒಣ ಪ್ರತಿಷ್ಠೆನೇ ಜಾಸ್ತಿ ಆಗಿದೆ. ಜನರ ಅಭಿವೃದ್ಧಿ ಬಗ್ಗೆ ಯಾವ ಚರ್ಚೆ ಕೂಡ ಆಗಿಲ್ಲ . ಹನಿಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತೇವೆ ಅಂದ್ರೆ ಮುಗಿದೋಯ್ತು. ಮುಂದಿನ ಅಧಿವೇಶನಕ್ಕೆ ಸದನ ಉತ್ತಮಗೊಳಿಸುವ ಕೆಲಸ ಮಾಡುತ್ತೇವೆ. ಈ ಘಟನೆ ಆಗಿದ್ದು ಒಳ್ಳೆದಾಯ್ತು, ಸುಧಾರಣೆಗೆ ಒಂದು ದಾರಿ ಆದಂತಾಗಿದೆ. ನಾನು ಸ್ವಲ್ಪ ಭಾವುಕನಾಗೋದು ಸಹಜವಾಗಿ ಕಣ್ಣಲ್ಲಿ ನೀರು ಬರುತ್ತೆ. ವ್ಯವಸ್ಥೆ ಸರಿ ಪಡಿಸಲು ಏನಾದರೂ ಮಾಡಬೇಕು . ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:27 pm, Tue, 25 March 25