Chandrayaan-3; ಚಂದ್ರಯಾನದ ಬಗ್ಗೆ ಅವಹೇಳನಕಾರಿ ಪೋಸ್ಟ್; ಕನ್ನಡ ಉಪನ್ಯಾಸಕನಿಗೆ ನೋಟಿಸ್
‘ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನ್ಸುತ್ತೆ’ ಎಂದು ಹುಲಿಕುಂಟೆ ಮೂರ್ತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬೆಂಗಳೂರು, ಜುಲೈ 20: ಚಂದ್ರಯಾನ-3 ರ (Chandrayaan-3) ಕುರಿತು ಅಪಹಾಸ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಕನ್ನಡ ಉಪನ್ಯಾಸಕರೊಬ್ಬರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ (DDPU) ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ಅವರು ಚಂದ್ರಯಾನ-3 ವಿಫಲವಾಗಲಿದೆ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
‘ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನ್ಸುತ್ತೆ’ ಎಂದು ಹುಲಿಕುಂಟೆ ಮೂರ್ತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮೂರ್ತಿ ಅವರನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಬಿಜೆಪಿ ನಾಯಕರು ಟೀಕಿಸಿದ್ದರು. ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಉಪನ್ಯಾಸಕರ ಸಾಮಾಜಿಕ ಮಾಧ್ಯಮ ಪೋಸ್ಟ್ ಬಗ್ಗೆ ವಿವರಣೆಯನ್ನು ಕೇಳಿದ್ದರು.
ಈ ವಿಚಾರವಾಗಿ ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಲಾಕ್ಷಪ್ಪ ಪ್ರತಿಕ್ರಿಯಿಸಿದ್ದು, ಇಲಾಖೆ ನಿರ್ದೇಶಕರ ನಿರ್ದೇಶನದ ಮೇರೆಗೆ ಉಪನ್ಯಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರಿಂದ ಬರುವ ವಿವರಣೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಈ ಮಧ್ಯೆ, ಮೂರ್ತಿ ಸಹ ತಮ್ಮ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದು, 14 ವರ್ಷಗಳ ನನ್ನ ಅಧ್ಯಾಪಕ ವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಾಗಿದೆ. ನಾನು ಯಾವತ್ತೂ ಇಂತಹ ಪರಿಸ್ಥಿತಿ ಎದುರಿಸಿಲ್ಲ. ಯಾರ ಭಾವನೆಗಳಿಗೂ ಧಕ್ಕೆ ತರುವುದು ನನ್ನ ಪೋಸ್ಟ್‌ನ ಉದ್ದೇಶವಾಗಿರಲಿಲ್ಲ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ನಾನು ಕ್ಷಮೆಯಾಚಿಸಲು ಸಿದ್ಧನಿದ್ದೇನೆ. ನನ್ನ ಫೇಸ್‌ಬುಕ್ ಅನ್ನು ನಿರ್ಬಂಧಿಸಿದ ಕಾರಣ ನಾನು ಅದನ್ನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದೇನೆ. ಇಲಾಖೆ ವಿವರಣೆಯನ್ನು ಕೇಳಿದ್ದು, ನೀಡಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Chandrayaan-3: ನಭಕ್ಕೆ ಚಿಮ್ಮಿದ ರಾಕೆಟ್: ಚಂದ್ರಯಾನ 3 ಉಡಾವಣೆಯ ಐತಿಹಾಸಿಕ ಕ್ಷಣದ ಚಿತ್ರಗಳು
ತಮ್ಮನ್ನು ದಲಿತ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಮೂರ್ತಿ ಚಂದ್ರಯಾನ-3 ವಿಫಲಗೊಳ್ಳುತ್ತದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದರು. ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅದನ್ನು ಅಣಕಿಸಿ ಮೂರ್ತಿ ಅವರು ಚಂದ್ರಯಾನ-3 ವಿರುದ್ಧ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ಇಸ್ರೋ ವಿಜ್ಞಾನಿಗಳು ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದ ವಿಚಾರ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಪ್ರಗತಿಪರರು, ಬುದ್ಧಿಜೀವಿಗಳು ಇಸ್ರೋ ವಿಜ್ಞಾನಿಗಳ ನಡೆಯನ್ನು ಖಂಡಿಸಿದ್ದರೆ, ಅನೇಕರು ಬೆಂಬಲಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ಮೂರ್ತಿ ಅವರು ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ